ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಅಧಿಕಾರಿ, ನೌಕರರ ವೇತನ ಪರಿಷ್ಕರಣೆ ಬಗ್ಗೆ ಮಾತುಕತೆ – ಸಚಿವ ರಾಮಲಿಂಗಾರೆಡ್ಡಿ

Kannada Nadu
ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಅಧಿಕಾರಿ, ನೌಕರರ ವೇತನ ಪರಿಷ್ಕರಣೆ ಬಗ್ಗೆ ಮಾತುಕತೆ – ಸಚಿವ ರಾಮಲಿಂಗಾರೆಡ್ಡಿ
R Ramalinga Reddy

ಬೆಂಗಳೂರು : ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳಿಗೆ 2025 ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಶೇಕಡವಾರು ಎಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳ ಪರಿಷ್ಕರಿಸಬೇಕು ಎನ್ನುವ ಸಂಬಂಧ ಕಾರ್ಮಿಕ ಸಂಘಟನೆಗಳೊಡನೆ ಮಾತುಕತೆ ಮತ್ತು ಸಂಧಾನ ಪ್ರಕ್ರಿಯೆ ಪ್ರಾರಂಭಿಸಲು ಆದೇಶಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಹಿಂಬಾಕಿ ಪಾವತಿ: ಒಟ್ಟು 26 ತಿಂಗಳ ಹಿಂಬಾಕಿ ವೇತನ ಬಿಡುಗಡೆ ಮತ್ತು ವೆಚ್ಚ ರೂ.1271.92 ಕೋಟಿ. 38 ತಿಂಗಳ ಹಿಂಬಾಕಿ ವೇತನ ಪಾವತಿ ಬೇಡಿಕೆ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ, ರವರ ಏಕ ಸದಸ್ಯ ಸಮಿತಿಯ ಶಿಫಾರಸ್ಸಿನಂತೆ 2022ನೇ ಜನವರಿ 1 ರಿಂದ 2023ನೇ ಫೆಬ್ರವರಿ 28ರ ವರೆಗೆ ಅವಧಿಗೆ 14 ತಿಂಗಳ ವರೆಗಿನ ಹಿಂಬಾಕಿ ವೇತನ ನೀಡಲು ಒಪ್ಪಿಗೆ ನೀಡಿ, ತತ್ಸಂಬಂಧ ತಗಲುವ ವೆಚ್ಚ, ರೂ.718.93 ಕೋಟಿಗಳ ವಿಶೇಷ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಲಿದೆ.

38 ತಿಂಗಳ ಹಿಂಬಾಕಿ ಪೈಕಿ ಉಳಿದ 24 ತಿಂಗಳಲ್ಲಿ 2021ನೇ ಜನವರಿ 01 ರಿಂದ ಡಿಸೆಂಬರ್ 31 ಅವಧಿಯ 12 ತಿಂಗಳುಗಳ ವೇತನ ಹಿಂಬಾಕಿ ಮೊತ್ತ ರೂ. 552.99 ಕೋಟಿಗಳ ವಿಶೇಷ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಲಿದೆ.

ವೇತನ ಪರಿಷ್ಕರಣೆ ವಿಳಂಬಕ್ಕೆ ಕಾರಣಗಳು:

ಮಾರ್ಚ್-2023 ರಲ್ಲಿ ರಾಜ್ಯದ ನಾಲ್ಕು ರಸ್ತೆ, ಸಾರಿಗೆ ಸಂಸ್ಥೆಗಳ ಅಧಿಕಾರಿ/ನೌಕರರ ವೇತನ ಪರಿಷ್ಕರಣೆ ಮಾಡಿ, ಆ ಸಂಬಂಧ ಬಜೆಟ್ನಲ್ಲಿ ಯಾವುದೇ ಅನುದಾನವನ್ನು ಮೀಸಲಿಡದೆ ಹಾಗೂ 38 ತಿಂಗಳ ಹಿಂಬಾಕಿ ವೇತನ ಪಾವತಿ ಬೇಡಿಕೆ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ ರವರ ಏಕ ಸದಸ್ಯ ಸಮಿತಿಯನ್ನು ರಚಿಸಿ, ಸಮಿತಿಯ ಶಿಫಾರಸ್ಸಿನ ಮೇರೆಗೆ ಹಿಂಬಾಕಿ ವೇತನ ಪಾವತಿ ಎಂಬುದಾಗಿ ಆದೇಶಿಸಿದ್ದರಿಂದ ಈ ರೀತಿಯ ವಿಳಂಬವಾಗಿದೆ.
ನಿವೃತ್ತ ನೌಕರರ ವೇತನ ಪರಿಷ್ಕರಣೆ ಸಂಬಂಧ ಉಪಧನ ಬಾಕಿ ಮೊತ್ತ ರೂ. 224.00 ಕೋಟಿಗಳನ್ನು ಯಾವುದೇ ಅನುದಾನವನ್ನು ಮೀಸಲಿಡದೆ ಇದ್ದಾಗ್ಯೂ ಸಹ ಬಿಡುಗಡೆಗೊಳಿಸಲಾಗಿದೆ. 2019-2023ರ ಅವಧಿಯಲ್ಲಿನ ರೂ.4900 ಕೋಟಿ ಬಾಕಿ ಉಳಿಸಿರುವ ಹೊಣೆಗಾರಿಕೆ ಮೊತ್ತದಲ್ಲಿ, ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಬಾಕಿ ಪಾವತಿಗಾಗಿ ನಮ್ಮ ಸರ್ಕಾರವು ಬ್ಯಾಂಕ್ನಿಂದ ರೂ.2000 ಕೋಟಿ ಸಾಲವನ್ನು ಪಡೆಯಲು ಸಾರಿಗೆ ಸಂಸ್ಥೆಗಳಿಗೆ ಅನುಮತಿಸಿದ್ದು, ಈ ಸಾಲದ ಅಸಲು ಮತ್ತು ಬಡ್ಡಿಯನ್ನು ಸರ್ಕಾರವು ಪಾವತಿಸುತ್ತಿದೆ.
2019-2023 ರ ಅವಧಿಯಲ್ಲಿ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಹೊಸ ಬಸ್ಸುಗಳ ಸೇರ್ಪಡೆಯಾಗದೆ ಮತ್ತು ಹೊಸ ನೇಮಕಾತಿ ಸ್ಥಗಿತಗೊಂಡಿದ್ದರಿಂದ, ಕಳೆದ ಎರಡುವರೆ ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳನ್ನು ಬಲಪಡಿಸಲು ಮತ್ತು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 7800 ಹೊಸ ಬಸ್ಸುಗಳ ಸೇರ್ಪಡೆ ರೂ.3510 ಕೋಟಿ ಮತ್ತು 10000 ಹೊಸ ನೇಮಕಾತಿಯನ್ನು ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಾರಿಗೆ ಸಂಸ್ಥೆಗಳು ಪ್ರತಿ ದಿನ ಗಳಿಸುವ ಆದಾಯದಲ್ಲಿ ಶೇ.34.50 ರಷ್ಟು ಡೀಸೆಲ್ ವೆಚ್ಚ ಮತ್ತು 46.37% ಸಿಬ್ಬಂದಿ ವೆಚ್ಚ ಒಟ್ಟಾರೆ 80.87% ಪಾವತಿಸಲಾಗುತ್ತಿದೆ.

ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಕ್ಲಿಷ್ಟಕರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಳೆದ 2 ವರ್ಷಗಳಲ್ಲಿ ಸಂಸ್ಥೆಗಳು ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆ ಮೊತ್ತ ರೂ. 1219.23 ಕೋಟಿಗೆ ವಿನಾಯಿತಿ ನೀಡಲಾಗಿದೆ.

ಈ ಎಲ್ಲಾ ವಿಷಯಗಳ ಬಗ್ಗೆ ಕಾರ್ಮಿಕ ಸಂಘಟನೆಗಳು ಹಾಗೂ ಅಧಿಕಾರಿ ನೌಕರ ಬಂಧುಗಳು ಗಮನಹರಿಸಿ, ನಾವು ಜಾರಿಗೊಳಿಸಿರುವ ಸದರಿ ವೇತನ ಪರಿಷ್ಕರಣೆ ಮತ್ತು ಹಿಂಬಾಕಿ ಆದೇಶವನ್ನು ಒಪ್ಪಿಕೊಂಡು ಸಹಕರಿಸುವ ಆಶಯವನ್ನು ಹೊಂದಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";