ಬೆಂಗಳೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಗುರಿ ಮುಟ್ಟಲು ಅಧಿಕಾರಿಗಳು ವಿಫಲವಾಗಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ವಿಡಿಯೋ ಸಮಾವೇಶ ನಡೆಸಿದ ಸಚಿವರು ಗ್ರಾಮ ಪಂಚಾಯತಿಗಳು ಸಂಗ್ರಹಿಸುವ ತೆರಿಗೆ ಹಣವನ್ನು ಪಂಚಾಯತಿಗಳ ಅಭಿವೃದ್ಧಿಗಾಗಿ ಬಳಸುತ್ತಿರುವುದರಿಂದ ಆಯಾ ಗ್ರಾಮ ಪಂಚಾಯತಿಗಳು ತೆರಿಗೆ ಸಂಗ್ರಹಿಸುವಲ್ಲಿ ಹೆಚ್ಚಿನ ಅಸಕ್ತಿವಹಿಸಬೇಕೆಂದು ಸೂಚಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಹೆಚ್ಚು ಆಸ್ತಿಗಳನ್ನು ಪಂಚಾಯತಿ ತೆಕ್ಕೆಗೆ ತೆಗೆದುಕೊಳ್ಳಲಾಗಿದ್ದು, ಆಸ್ತಿ ಸಂಗ್ರಹದಿಂದ ಸ್ಥಳೀಯ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 1.38 ಕೋಟಿ ಆಸ್ತಿಗಳಿದ್ದು, ಇವುಗಳಲ್ಲಿ 1.33 ಕೋಟಿ ಆಸ್ತಿಗಳ ಸಮೀಕ್ಷೆ ನಡೆಸಲಾಗಿದೆ.
ಬೆಳಗಾವಿ ವಿಮಾನನಿಲ್ದಾಣದಂತಹ ಸಂಸ್ಥೆಯೇ ತೆರಿಗೆ ಪಾವತಿಸುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದಾಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳು, ಕೈಗಾರಿಕೆಗಳು, ವ್ಯವಹಾರಸ್ಥರ ಪಟ್ಟಿ ಮಾಡಿ ಪ್ರಚುರಪಡಿಸಲು ಸಚಿವರು ತಿಳಿಸಿದರು. ಪ್ರತಿ ಗ್ರಾಮದ ಮ್ಯಾಪಿಂಗ್ ಮಾಡುವ ಮೂಲಕ ವೈಜ್ಞಾನಿಕವಾಗಿ ತೆರಿಗೆ ಸಂಗ್ರಹಿಸಲು ಸಚಿವರು ಸೂಚಿಸಿದರು.
ಪುಸ್ತಕಗಳು ಮನುಷ್ಯನಲ್ಲಿ ಅರಿವು ಮೂಡಿಸುವ ಮಾಧ್ಯಮವಾಗಿದ್ದು, ಗ್ರಂಥಾಲಯಗಳ ಸೌಲಭ್ಯ ನೀಡಿ ನಿಪುಣ ಯುವ ಜನಾಂಗವನ್ನು ರೂಪಿಸುವ ದೂರದೃಷ್ಟಿಯಿಂದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಅರಿವು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಇವುಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ಆಸಕ್ತಿವಹಿಸಿ ಗ್ರಂಥಾಲಯಗಳಿಗೆ ಅವಶ್ಯವಾದ ಮೂಲಭೂತ ಅವಶ್ಯಕತೆಗಳನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಸಚಿವರು ನಿರ್ದೇಶಿಸಿದರು.
ನರೇಗ ಕಾರ್ಯಕ್ರಮದಡಿ ಪರಿಣಾಮಕಾರಿ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿದ ಸಚಿವರು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಸಂಚರಿಸಿ ನರೇಗ ಕಾಮಗಾರಿಗಳನ್ನು ತನಿಖೆ ಮಾಡದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಬೇಸರ ವ್ಯಕ್ತಪಡಿಸಿದ ಸಚಿವರು ಜನರ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಈ ಹುದ್ದೆ ಬಿಟ್ಟು ಹೋಗಿ ಎಂದು ಖಡಾಖಂಡಿತವಾಗಿ ಹೇಳಿದರು.
ಗ್ರಾಮೀಣ ಪ್ರದೇಶಗಳಿಗೆ ನೀರು ಸರಬರಾಜು ಮಾಡುತ್ತಿರುವ ಗ್ರಾಮೀಣ ನೀರು ಸರಬರಾಜು ಯೋಜನೆಯ ಕಾಮಗಾರಿಗಳಲ್ಲಿಯೂ ಲೋಪಗಳಾಗುತ್ತಿದ್ದು, ಕಳಪೆ ಕಾಮಗಾರಿಗಳಿಗೆ ಹಣ ಪಾವತಿ ಮಾಡಿದ್ದಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸುವುದಾಗಿ ಎಚ್ಚರಿಕೆ ನೀಡಿದರು. ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜನಿಯರುಗಳನ್ನು ಸಚಿವರು ತೀವ್ರವಾಗಿ ಎಚ್ಚರಿಸಿದರು.
ಇ-ಸ್ವತ್ತು ಸಂಬಂಧದಲ್ಲಿ ಹೆಚ್ಚಿನ ಪ್ರಮಾಣದ ದೂರುಗಳು ಬರುತ್ತಿವೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮವಹಿಸಿ, ಜನಸಾಮಾನ್ಯರಿಗೆ ಇ-ಸ್ವತ್ತು ಪ್ರಮಾಣಪತ್ರಗಳನ್ನು ಸುಲಲಿತವಾಗಿ ಸಿಗುವಂತಹ ವಾತಾವರಣ ಸೃಷ್ಟಿಸಬೇಕು, ತಪ್ಪಿದ್ದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರವೇಜ್, ಪಂಚಾಯತ್ ರಾಜ್ ಆಯುಕ್ತೆ ಡಾ.ಅರುಂಧತಿ ಚದ್ರಶೇಖರ್, ನರೇಗ ಆಯುಕ್ತ ಪವನ್ ಕುಮಾರ್ ಮಾಲಪತಿ, ಗ್ರಾಮೀಣ ನೀರು ಸರಬರಾಜು ಆಯುಕ್ತ ಕೆ,ನಾಗೇಂದ್ರಪ್ರಸಾದ್, ಇ-ಆಡಳಿತ ನಿರ್ದೇಶಕಿ ಡಾ. ನಂದಿನಿದೇವಿ ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.