ಬೆಂಗಳೂರು: ಹವಾನಿಯಂತ್ರಿತ ನಗರ, ಉದ್ಯಾನ ನಗರ ಎಂದೇ ಖ್ಯಾತವಾಗಿದ್ದ ರಾಜ್ಯದ ರಾಜಧಾನಿ, ಬೆಂಗಳೂರು ನಗರದ ಖ್ಯಾತಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ ಇಂಡಿಯಾ ಕ್ಲೀನ್ ಏರ್ ಸಮಿಟ್ 2023ರ 5ನೇ ಆವೃತ್ತಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀರ ಕಳಪೆಯಾಗಿದ್ದು ಇದರ ಪರಿಣಾಮಗಳು ತೀವ್ರವಾಗುತ್ತಿದೆ. ಚಳಿಗಾಲದಲ್ಲಂತೂ ಹೊಗೆ ಮತ್ತು ಮಂಜು ಎರಡು ಸೇರಿ ಉಸಿರಾಟವೂ ಕಷ್ಟದಾಯಕವಾಗಿದೆ, ಬೆಂಗಳೂರು ಕೂಡ ಈ ರೀತಿ ಗ್ಯಾಸ್ ಚೇಂಬರ್ ಆಗಬಾರದು ಇದಕ್ಕಾಗಿ ಪ್ರತಿಯೊಬ್ಬರೂ ಹಸಿರು ಕಾಳಜಿ ಬೆಳೆಸಿಕೊಳ್ಳಬೇಕು ಎಂದರು.
ಕೋವಿಡ್ ಸಂದರ್ಭದಲ್ಲಿ ನಮಗೆ ಪ್ರಾಣವಾಯುವಿನ ಮಹತ್ವ ಅರಿವಾಯಿತು. ಆಮ್ಲಜನಕ ಹೆಚ್ಚಳವಾಗಬೇಕಾದರೆ ಮರಗಳ ಸಂಖ್ಯೆ ಹೆಚ್ಚಾಗಬೇಕು. ನಗರವಾಸಿಗಳೆಲ್ಲರೂ ತಮ್ಮ ಮನೆಯ ಮುಂದೆ ಒಂದು ಗಿಡ ನೆಟ್ಟು ಅದು ಹೆಮ್ಮರವಾಗುವಂತೆ ಪೋಷಿಸಿದರೆ ಶುದ್ಧಗಾಳಿಯೂ ಲಭಿಸುತ್ತದೆ. ಭೂಮಿಯ ರಕ್ಷಣೆಯೂ ಆಗುತ್ತದೆ ಎಂದರು.
ತಾವು ಸಚಿವರಾದ ಬಳಿಕ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯದಿಂದಾಗುತ್ತಿರುವ ದುಷ್ಪರಿಣಾಮಗಳನ್ನು ಮನಗಂಡು ರಾಜ್ಯದ ಹಸಿರು ವಲಯ ವ್ಯಾಪ್ತಿ ಹೆಚ್ಚಿಸಲು ಈ ವರ್ಷ ರಾಜ್ಯದಲ್ಲಿ 5 ಕೋಟಿ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಿದ್ದಾಗಿ ಹೇಳಿದರು.
ರಾಜ್ಯದಲ್ಲಿ ಜುಲೈ 1 ರಿಂದ ನಡೆದ ವನಮಹೋತ್ಸವದಲ್ಲಿ ಮತ್ತು ನಂತರದ ಕಾರ್ಯಕ್ರಮದಲ್ಲಿ ಈವರೆಗೆ ಮೂರೂವರೆ ಕೋಟಿಗೂ ಹೆಚ್ಚು ಸಸಿ ನೆಡಲಾಗಿದೆ, ಈ ಸಸಿಗಳು ಬೆಳೆದು ಉಳಿಯುವುದನ್ನು ಖಾತ್ರಿ ಪಡಿಸಿಕೊಳ್ಳಲು ಜಿಯೋ ಟ್ಯಾಗ್ ಮಾಡಿ ಆಡಿಟ್ ಮಾಡಲಾಗುತ್ತಿದೆ ಎಂದೂ ತಿಳಿಸಿದರು.
ಸುಸ್ಥಿರ ಅಭಿವೃದ್ಧಿ ಇಂದಿನ ಅಗತ್ಯ : ಸುಸ್ಥಿರ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ. ಜೀವನ ಜೀವನೋಪಾಯ ಎರಡನ್ನೂ ಸಮತೋಲಿತವಾಗಿ ಕಾಪಾಡಬೇಕಾದ ಹೊಣೆ ಇದೆ. ಅರಣ್ಯ, ಹಸಿರೂ ಉಳಿಯಬೇಕು, ಪ್ರಗತಿಯೂ ಆಗಬೇಕು ಎಂದು ಪ್ರತಿಪಾದಿಸಿದರು.
ತ್ವರಿತ ನಗರೀಕರಣ ನಮಗೆ ವರವೂ ಹೌದು ಶಾಪವೂ ಹೌದು. ತ್ವರಿತ ನಗರೀಕರಣದಿಂದ ಆರ್ಥಿಕತೆಯ ವೃದ್ಧಿಗೆ ಸಹಕಾರಿಯಾಗಿದೆ. ಅದರ ಜೊತೆ ಜೊತೆಗೇ ಕೈಗಾರಿಕೀಕರಣ, ಹೆಚ್ಚುತ್ತಿರುವ ಜನಸಂಖ್ಯೆಗೆ ಮೂಲಸೌಕರ್ಯ ಕಲ್ಪಿಸಲು ಹಸಿರು ವಲಯ ವ್ಯಾಪ್ತಿ ಕ್ಷೀಣಿಸುತ್ತಿದೆ. ವಾಹನಗಳ ಮತ್ತು ಕೈಗಾರಿಕೆಗಳ ಮಾಲಿನ್ಯದಿಂದ ವಾಯುಗುಣಮಟ್ಟ ಕುಸಿಯುತ್ತಿದೆ. ನಾವು ಈಗ ಹೆಚ್ಚು ಜಾಗೃತರಾಗಿ ಹಸಿರು ಬೆಳೆಸಿ, ನಮ್ಮ ಉಸಿರು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಈಶ್ವರ ಖಂಡ್ರೆ ಮನವಿ ಮಾಡಿದರು.