ತಮಿಳುನಾಡಿನ : ಕುನೂರಿನ ಸಮೀಪ ಸಂಭವಿಸಿದ ಸೇನಾ ಹೆಲಿಕ್ಯಾಪ್ಟರ್ ದುರಂತದಲ್ಲಿ ಸಿಡಿಎಸ್ ( ಚೀಫ್ ಅಫ್ ಡಿಫೆನ್ಸ್ ಸ್ಟಾಪ್) ಜನರಲ್ ಬಿಪಿನ್ ರಾವತ್ ದಂಪತಿ ಮತ್ತು ಇತರ ಸೇನಾಧಿಕಾರಿಗಳು ಅಸುನೀಗಿದ್ದಾರೆ ಎಂಬುದು ನಮ್ಮ ಇಡೀ ದೇಶಕ್ಕೆ ತೀವ್ರ ಆಘಾತ ಉಂಟುಮಾಡಿದ ಘಟನೆಯಾಗಿದೆ.ಅತ್ಯಂತ ದಕ್ಷತೆ ಮತ್ತು ಸೇವಾ ನಿಷ್ಠೆಗೆ ಹೆಸರು ಪಡೆದು ದೇಶದ ಭದ್ರತೆಗೆ ತಮ್ಮನ್ನು ಸಮರ್ಪಿಸಿಕೊಂಡು ದೇಶದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಶೇಷ ಕೊಡುಗೆ ನೀಡಿದ್ದ ಶ್ರೀ ರಾವತ್ ಅವರು ಹಾಗೂ ಇತರರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ದುರದೃಷ್ಟವಶಾತ್ ಅವರ ಅಗಲಿಕೆ ನಮಗೆಲ್ಲಾ ತೀವ್ರ ನೋವು ಉಂಟುಮಾಡಿದೆ.
ಈ ದುರ್ಘಟನೆಯಲ್ಲಿ ಶ್ರೀ ರಾವತ್ ಅವರ ಪತ್ನಿ ಮಧುಲಿಕಾ ಅವರು ಸಾವನ್ನಪ್ಪಿದ್ದಾರೆ ಹಾಗೂ ಹತ್ತಕ್ಕೂ ಹೆಚ್ಚು ಮಂದಿ ಇತರ ಸೇನಾ ಸಿಬ್ಬಂದಿಗಳು ಅಸುನೀಗಿದ್ದಾರೆ ಎಂಬ ಸಂಗತಿಯೂ ತೀವ್ರ ದುಃಖದಾಯಕವಾಗಿದೆ. ಇದರಿಂದಾಗಿ ನಮ್ಮ ದೇಶದ ಭದ್ರತಾ ಪಡೆಗಳಿಗೆ ತುಂಬಲಾರದ ದೊಡ್ಡ ನಷ್ಟವಾಗಿದೆ. ಅಗಲಿದ ಈ ಮಹಾನುಭಾವರಿಗೆ ನನ್ನ ಅಂತಿಮ ನಮನಗಳು ಮತ್ತು ಅವರ ಕುಟುಂಬಕ್ಕೆ , ಬಂಧುಬಾಂಧವರಿಗೆ ನನ್ನ ಸಾಂತ್ವನಗಳು. ಸಿ.ಸಿ. ಪಾಟೀಲ, ಲೋಕೋಪಯೋಗಿ ಸಚಿವರು, ಕರ್ನಾಟಕ ಸರ್ಕಾರ ಜನರಲ್ ಬಿಪಿನ್ ರಾವತ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ ಬೆಂಗಳೂರು, ಡಿಸೆಂಬರ್ 8- ದೇಶದ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜನರಲ್ ರಾವತ್, ಅವರ ಪತ್ನಿ ಹಾಗೂ ಇತರ ಸೇನಾ ಸಿಬ್ಬಂದಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿರುವುದು ಅತ್ಯಂತ ಆಘಾತಕಾರಿ ಹಾಗೂ ದುರದೃಷ್ಟಕರ. ಭಗವಂತನು ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಈ ಆಘಾತವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಯವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.