ಬಳ್ಳಾರಿ: ಬಳ್ಳಾರಿ ನಗರದ ಬಂಡಿಹಟ್ಟಿಯ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ನಂ.4 ಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಯುವಜನ ಸಬಲೀಕರಣ, ಕ್ರೀಡಾ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅನಿರೀಕ್ಷಿತ ಭೇಟಿ ನೀಡಿ ಹಾಸ್ಟಲ್ ವ್ಯವಸ್ಥೆ ಪರಿಶೀಲಿಸಿದರು.
ಈ ವೇಳೆ ಅಲ್ಲಿನ ಅವ್ಯವಸ್ಥೆ ಕಂಡು ಹಾಸ್ಟಲ್ ವಾರ್ಡನ್ ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಊಟ ನೀಡುವಂತೆ ಎಚ್ಚರಿಕೆ ನೀಡಿದ ಸಚಿವರು ಮತ್ತೆ ಪುನರಾವರ್ತನೆ ಆದ್ರೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು.
ನಂತರ ವಿದ್ಯಾರ್ಥಿಗಳ ಮಲಗುವ ಕೊಠಡಿ, ಅಡುಗೆ ಮನೆ, ಡೈನಿಂಗ್ ಹಾಲ್ ವೀಕ್ಷಣೆ ಮಾಡಿದ ಸಚಿವ ಬಿ.ನಾಗೇಂದ್ರ ಅವರು ವಿದ್ಯಾರ್ಥಿಗಳ ಜೊತೆಯಲ್ಲಿ ಕುಳಿತು ಭೋಜನ ಸವಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಪಾಲಿಕೆಯ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪರಿಶಿಷ್ಟ ಪಂಗಡ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.