ಹಾಲಿನ ದರ 4 ರೂ. ಏರಿಕೆ | ಗ್ರಾಹಕರಿಗೆ ಮತ್ತೊಂದು ಶಾಕ್!

Kannada Nadu
ಹಾಲಿನ ದರ 4 ರೂ. ಏರಿಕೆ  | ಗ್ರಾಹಕರಿಗೆ ಮತ್ತೊಂದು ಶಾಕ್!

ಬೆಂಗಳೂರು: ನಂದಿನಿ ಹಾಲಿನ ದರ ಪರಿಷ್ಕರಣೆ ಕುರಿತು ಸಚಿವ ಸಂಪುಟ ಸಭೆಯಲ್ಲಿಂದು ಮಹತ್ವದ ಚರ್ಚೆ ನಡೆದಿದ್ದು, ಪ್ರತೀ ಲೀಟರ್ ಹಾಲಿಗೆ 4 ರೂ. ಏರಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಇತ್ತೀಚೆಗೆ ಕೆಎಂಎಫ್‌ನ ಆಡಳಿತ ಮಂಡಳಿಯೊAದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ ವೇಳೆ ಪ್ರತಿ ಲೀಟರ್‌ಗೆ 5 ರೂ. ದರ ಹೆಚ್ಚಳ ಮಾಡಬೇಕು ಮತ್ತು ಈ ಮೊದಲು ದರ ಪರಿಷ್ಕರಣೆ ಸಲುವಾಗಿ ಹೆಚ್ಚುವರಿ ಹಾಲಿನ ಸೇರ್ಪಡೆಯ ನಿರ್ಧಾರವನ್ನು ರದ್ದುಪಡಿಸಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದರು. ಇಂದು ನಡೆದ ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ದರ ಏರಿಕೆಗೆ ಸಕಾರಾತ್ಮಕವಾಗಿದ್ದು, ಮೂಲಗಳ ಪ್ರಕಾರ ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ ಮಾಡಲು ಸಮ್ಮತಿಸಲಾಗಿದೆ.
ಈ ಮೊದಲು ಕಳೆದ 2023ರ ಆಗಸ್ಟ್ 1 ರಂದು ಪ್ರತಿ ಅರ್ಧ ಲೀಟರ್ ಹಾಲಿಗೆ 50 ಎಂಎಲ್ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿ ದರವನ್ನು 2 ರೂ.ಗೆ ಹೆಚ್ಚಿಸಲಾಗಿತ್ತು. ಈಗ ಆ 50 ಎಂಎಲ್ ಸೇರ್ಪಡೆಯನ್ನು ಬಹುತೇಕ ಹಿಂಪಡೆಯುವ ಸಾಧ್ಯತೆಯಿದೆ. ಜೊತೆಗೆ 4 ರೂ. ದರ ಹೆಚ್ಚಳವಾದರೆ ಪ್ರತೀ ಲೀಟರ್ ಸಾಮಾನ್ಯ ಹಾಲಿಗೆ 46 ರೂ.ಗಳಷ್ಟಾಗುವ ಸಾಧ್ಯತೆಯಿದೆ.
ಶುಭಂ ಮಾದರಿಯ ವಿಶೇಷ ಹಾಲಿಗೆ 54 ರೂ.ಗಳಷ್ಟಾಗುವ ನಿರೀಕ್ಷೆಯಿದೆ. ಹಾಲಿನ ದರ ಹೆಚ್ಚಳದ ಜೊತೆಗೆ ಮೊಸರು ಹಾಗೂ ಇತರ ಉಪ ಉತ್ಪನ್ನಗಳ ದರ ಕೂಡ ಪರಿಷ್ಕರಣೆಯಾಗುವ ನಿರೀಕ್ಷೆಗಳಿವೆ.

ಉತ್ಪಾದನಾ ವೆಚ್ಚ, ಮಾರುಕಟ್ಟೆ ವೆಚ್ಚದ ನಡುವೆ ಅಜಗಜಾಂತರ ವ್ಯತ್ಯಾಸವಿದೆ. 2 ರೂ. ಏಜೆಂಟರ ಕಮಿಷನ್ ಹಾಗೂ ಸಾಗಾಣಿಕೆ ವೆಚ್ಚದಿಂದಾಗಿ ಹಾಲು ಒಕ್ಕೂಟಗಳು ನಷ್ಟ ಅನುಭವಿಸುತ್ತಿವೆ. ಹೀಗಾಗಿ ದರ ಹೆಚ್ಚಳ ಅನಿವಾರ್ಯ ಎಂದು ಕೆಎಂಎಫ್ ಪ್ರತಿಪಾದಿಸಿತ್ತು.
ಮೂಲಗಳ ಪ್ರಕಾರ, 4 ರೂ. ಹೆಚ್ಚಳದಲ್ಲಿ 3 ರೂ. ಅನ್ನು ರೈತರಿಗೆ ವರ್ಗಾವಣೆ ಮಾಡಿ 1 ರೂ.ಗಳನ್ನು ಕೆಎಂಎಫ್ ಗೆ ನೀಡುವ ಸಾಧ್ಯತೆಯಿದೆ. ಈ ಮೊದಲು ಉತ್ಪಾದನೆಯ ಹೆಚ್ಚಳದ ಕಾರಣಕ್ಕಾಗಿ 50 ಎಂಎಲ್ ಸೇರ್ಪಡೆಯ ನಿರ್ಧಾರವನ್ನು ಬೇಸಿಗೆ ಕಾಲದಲ್ಲಿ ಹಾಲಿನ ಉತ್ಪಾದನೆ ತಗ್ಗುವುದರಿಂದಾಗಿ ಹಿಂಪಡೆಯಲಾಗುತ್ತಿದೆ.

ಈಗಾಗಲೇ ಬಸ್ ಪ್ರಯಾಣ ದರ, ಪೆಟ್ರೋಲ್, ಡೀಸೆಲ್, ಮೆಟ್ರೊ ಪ್ರಯಾಣ ದರ, ವಿದ್ಯುತ್ ದರ ಸೇರಿದಂತೆ ಹಲವಾರು ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದು ಈಗ ದಿನಬಳಕೆಯ ಹಾಲಿನ ದರವನ್ನೂ ಕೂಡ ಹೆಚ್ಚಳ ಮಾಡಲು ರಾಜ್ಯಸರ್ಕಾರ ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದು ಉಪ್ಪು ಹಚ್ಚಿದಂತಹ ಯಾತನಾಮಯ ಪರಿಸ್ಥಿತಿಯನ್ನು ನಿರ್ಮಿಸಲಿದೆ.
ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ದರ ಹೆಚ್ಚಳದಿಂದ ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಬೇಕಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಇದು ಅಡ್ಡಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಆದರೆ ಮುಂದೆ ನಡೆಯುವುದು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತ್ ಚುನಾವಣೆಗಳಾಗಿದ್ದು, ಗ್ರಾಮೀಣ ಭಾಗದ ಮತದಾರರೇ ಹೆಚ್ಚಾಗಿದ್ದಾರೆ. ಹಾಲಿನಿಂದ ದೊರೆಯುವ 3 ರೂ.ಗಳನ್ನು ರೈತರಿಗೆ ವರ್ಗಾವಣೆ ಮಾಡುವುದರಿಂದಾಗಿ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಮತ್ತು ರೈತರಿಗೆ ಅನುಕೂಲವಾಗಲಿದೆ ಎಂಬ ವಾದವನ್ನು ಕೆಲವು ಸಚಿವರು ಮುಂದಿಟ್ಟಿದ್ದಾರೆ.
ವಾದ ವಿವಾದದಲ್ಲಿ ಅಂತಿಮವಾಗಿ ಕೆಎಂಎಫ್ ಆಡಳಿತ ಮಂಡಳಿಯಲ್ಲಿ ನಿರ್ಧಾರ ತೆಗೆದುಕೊಂಡು ದರ ಪರಿಷ್ಕರಣೆಯನ್ನು ಪ್ರಕಟಿಸುವಂತೆ ಸರ್ಕಾರ ಸೂಚಿಸಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";