ಬಳ್ಳಾರಿ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ, ಮುಖ್ಯಮಂತ್ರಿಗಳಿಗೆ ಸಂಬಮಧವೇ ಇಲ್ಲದ ಮುಡಾ ಪ್ರಕರಣದಲ್ಲಿ ಅವರ ಹೆಸರು ಸಿಲುಕಿಸುವ ವಿಪಕ್ಷಗಳ ಹುನ್ನಾರ ಖಂಡಿಸಿ, ಬಳ್ಳಾರಿಯಲ್ಲಿಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಆಶ್ರಯದಲ್ಲಿ ಸಾವಿರಾರು ಜನರು ಬೃಹತ್ ಪ್ರತಿಭಟನೆ ನಡೆಸಿ ಸಿಎಂ ಸಿದ್ದರಾಮಯ್ಯನವರಿಗೆ ನೈತಿಕ ಬೆಂಬಲ ಸೂಚಿಸಿದರು.
ನಗರದ ಹೃದಯಭಾಗದಲ್ಲಿ ಗಡಿಗಿ ಚೆನ್ನಪ್ಪ ಸರ್ಕಲ್ ಬಳಿಯಲ್ಲಿರುವ ಗಾಂಧಿ ಭವನದ ಬಳಿ ಜಮಾಯಿಸಿದ ಒಕ್ಕೂಟದ ಕಾರ್ಯಕರ್ತರು, ದಲಿತ, ಹಿಂದುಳಿದ ಅಲ್ಪಸಂಖ್ಯಾತ ಪರ ಸಂಘಟನೆಗಳ ಧುರೀಣರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಒಕ್ಕೂಟದ ನಾಯಕರುಗಳಾದ ಎ.ಮಾನಯ್ಯ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಡಾ||ಪಿ.ಎಲ್.ಗಾದಿಲಿಂಗನಗೌಡ, ಹುಮಾಯೂನ್‌ಖಾನ್, ಶಿವಶಂಕರ್, ಇಮಾಮ್ ಗೋಡೇಕಾರ, ವೆಂಕಟೇಶ್ ಹೆಗಡೆ ಸೇರಿದಂತೆ ಬಳ್ಳಾರಿಯ ಸಂಸದ ಇ.ತುಕಾರಾಂ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಬಳ್ಳಾರಿ ನಗರ ಶಾಸಕ ನಾರಾಭರತ್‌ರೆಡ್ಡಿ, ಮೇಯರ್ ಮುಲ್ಲಂಗಿ ನಂದೀಶ್, ಬುಡಾ ಅಧ್ಯಕ್ಷ ಆಂಜನೇಯುಲು ಹಾಗೂ ಇತರೆ ಪ್ರಮುಖರು ಬೃಹತ್ ಮೆರವಣಿಗೆಯ ಮೂಲಕ ಡಿಸಿ ಕಛೇರಿಗೆ ತೆರಳಿ, ಅಲ್ಲಿ ಕೆಲ ಸಮಯ ಪ್ರತಿಭಟನೆ ಸೂಚಿಸಿ ದೇಶದ ಘನತೆವೆತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಗೆಹ್ಲೋಟ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಲೋಕಸಭೆ ಹಾಗೂ ರಾಜ್ಯ ಸಭೆಯ ವಿಪಕ್ಷಗಳ ನಾಯಕರುಗಳಿಗೆ ಬರೆದ ಮನವಿ ಪತ್ರಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಿಕೊಟ್ಟರು.
ಸಿಎಂ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ, ಜೆಡಿಎಸ್ ನಾಯಕರು ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿದ್ದು, ಕಳೆದ ನಾಲ್ಕೈದು ದಶಕಗಳಿಂದಲೂ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದೇ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಸಿಎಂ ಅವರ ಹೆಸರಿಗೆ ಮಸಿ ಬಳಿಯುವ ವ್ಯರ್ಥ ಪ್ರಯತ್ನ ನಡೆಸಿದ್ದಾರೆ. ರಾಜಕೀಯವಾಗಿ ಯಾವುದೇ ಕಳಂಕವಿಲ್ಲದೆ ಸಿದ್ದರಾಮಯ್ಯನವರಿಗೆ ಮುಜುಗರ ಉಂಟು ಮಾಡಲು ಸುಳ್ಳು ಆರೋಪ ಹೊರಿಸಿ, ಪಾದಯಾತ್ರೆ ಮಾಡುವ ಮೂಲಕ ಅಧಿಕಾರದಿಂದ ಕೆಳಗಡೆ ಇಳಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ ಎಂದು ಪ್ರತಿಭಟನೆ ನಡೆಸಿದ ಧುರೀಣರು ಆರೋಪಿಸಿದ್ದಾರೆ.
ನಾಡಿನ ಹಿಂದುಳಿದ ವರ್ಗಗಳ ಹರಿಕಾರ, ಧೀಮಂತ ನಾಯಕ ದಿ||ದೇವರಾಜ ಅರಸು ಅವರ ನಂತರ ಯಶಸ್ವಿಯಾಗಿ 5 ವರ್ಷಗಳ ಅವಧಿ ಪೂರ್ಣಗೊಳಿಸಿದ ಹಾಗೂ ಎರಡನೇ ಬಾರಿಗೆ ಮತ್ತೆ ಸಿಎಂ ಆಗಿ ಸಮರ್ಥ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯನವರು ಕೆಳಗಿಳಿಸುವ ಕುತಂತ್ರ ನಡೆದಿದ್ದು, ಇದನ್ನು ಹಿಮ್ಮೆಟ್ಟಿಸಲಾಗುತ್ತದೆ. 5 ಗ್ಯಾರೆಂಟಿಗಳ ಸಮರ್ಪಕ ಅನುಷ್ಠಾನಗೊಳಿಸಿ, ಜನತೆಯ ನಂಬಿಕೆ, ವಿಶ್ವಾಸ ಉಳಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. 135 ಜನ ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿದ್ದು, ಸರ್ಕಾರ ಬಿಳಿಸಲು ಸಾಧ್ಯವಿಲ್ಲವೆಂದು ಒಕ್ಕೂಟದ ಧುರೀಣರು ಸಪಷ್ಟವಾಗಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಳ್ಳಾರಿ ಸಂಸದ ಇ.ತುಕಾರಾಂ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ – ಜೆಡಿಎಸ್ ನಡೆಸಿರುವ ಹುನ್ನಾರ ಯಶಸ್ವಿಯಾಗುವುದಿಲ್ಲ. ಸರ್ಕಾರ ಗಟ್ಟಿಯಾಗಿದ್ದು, ಎಲ್ಲಾ ಶಾಸಕರು ಸಿಎಂ- ಡಿಸಿಎಂ ಜೊತೆ ಇದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ ಬಿಜೆಪಿಯು ವಾಮಮಾರ್ಗದಿಂದ ಸರ್ಕಾರವನ್ನು ಅಲುಗಾಡಿಸುವ ಪರೋಕ್ಷ ಪ್ರಯತ್ನವನ್ನು ನಡೆಸಿದೆ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಬಿಜೆಪಿಯವರು ಏನೇ ಮಾಡಿದರೂ ಕಾಂಗ್ರೆಸ್ ಸರ್ಕಾರ ಬೀಳಿಸಲಾಗಲ್ಲ. ರಾಜ್ಯದ ಜನತೆ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಬಳ್ಳಾರಿ ನಗರ ಶಾಸಕ ನಾರಾಭರತ್‌ರೆಡ್ಡಿ ಮಾತನಾಡಿ, ಬಿಜೆಪಿಯವರ ಕುತಂತ್ರ, ಬೆದರಿಕೆಗಳಿಗೆ ಕಾಂಗ್ರೆಸ್ ಸರ್ಕಾರ ಕುಗ್ಗಲ್ಲ. ಜಗ್ಗಲ್ಲ. ವಿಪಕ್ಷಗಳ ಬೆದರಿಕೆಗೆ ಬಾಗುವ ಪ್ರಶ್ನೆಯೇ ಇಲ್ಲ. ನಾಡು ಕಂಡ ಧೀಮಂತ ನಾಯಕ ಸಿದ್ದರಾಮಯ್ಯನವರನ್ನು ಏನೂ ಮಾಡಲಾಗುವುದಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ೫ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದರು.
ಕಂಪ್ಲಿ ಶಾಸಕ ಗಣೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯನವರನ್ನು ಮುಟ್ಟಲು ಸಾಧ್ಯವಿಲ್ಲ. ಕೇಂದ್ರದಲ್ಲಿನ ಹಿಟ್ಲರ್ ಮನೋಭಾವನೆಯ ಸರ್ಕಾರವು ತನಿಖಾ ಸಂಸ್ಥೆಗಳ ಮೂಲಕ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದರೂ ಸರ್ಕಾರ ಅಲುಗಾಡಿಸಲು ಸಾಧ್ಯವಿಲ್ಲ. ಸಿಎಂ ಜನಪ್ರಿಯತೆ ಸಹಿಸದೇ, ವಿಪಕ್ಷಗಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ಬಯಲಿಗೆಳೆಯಲಾಗುತ್ತದೆ. ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಳ್ಳುವ ಮೂಲಕ ಸರ್ಕಾರಕ್ಕೆ ಕಿರಿಕಿರಿ ಉಂಟು ಮಾಡಲು ಪ್ರಯತ್ನಿಸಲಾಗುತ್ತಿದೆ. ಬಿಜೆಪಿಯವರಿಗೆ ನಾಡಿನ ಜನತೆ ಬುದ್ದಿ ಕಲಿಸುತ್ತಾರೆ ಎಂದರು.
ಆ ನಂತರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕಾರ್ಪೋರೇಟರ್‌ಗಳಾದ ಎಂ.ಪ್ರಭಂಜನ್‌ಕುಮಾರ್, ಮಿಂಚು ಶ್ರೀನಿವಾಸ್, ಪಿ.ಗಾದೆಪ್ಪ, ಪೇರಂ ವಿವೇಕ್ (ವಿಕ್ಕಿ), ಉಪಮೇಯರ್ ಡಿ.ಸುಕುಂ ಸೇರಿದಂತೆ ಧುರೀಣರುಗಳಾದ ಎಂ.ರಾಜೇಶ್ವರಿ, ಕೆ.ಎಸ್.ಎಲ್.ಸ್ವಾಮಿ, ನೂರ್ ಮಹಮ್ಮದ್, ಎಪಿಎಂಸಿ ಅಧ್ಯಕ್ಷ ನಾಗೇಂದ್ರ ಕಟ್ಟಿಮನಿ, ಬೆಣಕಲ್ ಬಸವರಾಜಗೌಡ, ಬಿ.ಎಂ.ಪಾಟೀಲ್, ಎಲ್.ಮಾರೆಣ್ಣ, ಎರುಕುಲಸ್ವಾಮಿ, ಅಲ್ಲಿಪುರ ಮೋಹನ್, ಪಿ.ಜಗನ್, ಎ.ಶಿವರಾಜ್, ವೆಂಕಟಸ್ವಾಮಿ, ಸಂಗನಕಲ್ಲು ವಿಜಯ್‌ಕುಮಾರ್, ಹೆಚ್.ಸಿದ್ದೇಶ್, ಚಾನಾಳ್ ಶೇಖರ್, ಅಭಿಲಾಷ್, ಯತೀಂದ್ರ, ಮೊಹಮ್ಮದ್ ರಫೀಕ್, ಸೋಮು, ಬೋಯಪಾಟಿ ವಿಷ್ಣುವರ್ಧನ್, ಎ.ಸುರೇಶ್, ಬಿ.ಆರ್.ಎಲ್.ಸೀನಾ, ಜಬ್ಬಾರ್, ಹೊನ್ನಪ್ಪ, ಪರಶುರಾಮ, ಸೆರಗು ನಾಗರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.