28ರಂದು ಬೆಂಗಳೂರಿನ ಅವ್ಯವಸ್ಥೆಗಳ ವಿರುದ್ಧ ಬೃಹತ್ ಪ್ರತಿಭಟನೆ – ವಿಜಯೇಂದ್ರ

ಬೆಂಗಳೂರು: ಬೆಂಗಳೂರಿನ ಅವ್ಯವಸ್ಥೆಗಳ ವಿರುದ್ಧ ಇದೇ 28ರಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಪ್ರಕಟಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದರು. ಬೆಂಗಳೂರು ನಗರದ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರತಿ ವಾರ್ಡಿನಲ್ಲಿ ಬಿಜೆಪಿ ವತಿಯಿಂದ ಹೋರಾಟವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.

ಬೆಂಗಳೂರು ಮಹಾನಗರದ ಜನತೆಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಬಿಜೆಪಿ ಹೋರಾಟ ನಿರಂತರವಾಗಿ ಇರಲಿದೆ. ಕೇವಲ ನಾಮಕಾವಾಸ್ತೆ ಹೋರಾಟ ಇದಲ್ಲ ಎಂದು ಸ್ಪಷ್ಟಪಡಿಸಿದರು. ಸಮಸ್ಯೆಗೆ ಪರಿಹಾರ, ಹೋರಾಟಕ್ಕೆ ಜಯ ಸಿಗಬೇಕಿದೆ. ಆ ನಿಟ್ಟಿನಲ್ಲಿ ಹೋರಾಟ ನಡೆಯಲಿದೆ ಎಂದು ವಿವರಿಸಿದರು.

ಇಂದು ನಗರದ ಎಲ್ಲ ಶಾಸಕರು, ಮಾಜಿ ಶಾಸಕರು, ಮಾಜಿ ಕಾರ್ಪೊರೇಟರ್‍ಗಳ ಸಭೆಯನ್ನು ನಡೆಸಲಾಗಿದೆ. ಬೆಂಗಳೂರು ನಗರದಲ್ಲಿ ಇವತ್ತು ಆಗುತ್ತಿರುವ ಅವ್ಯವಸ್ಥೆಗಳನ್ನು ಚರ್ಚಿಸಿದ್ದೇವೆ. ಕೇವಲ ಎರಡು ದಿನ ಮಳೆ ಬಂದಾಗ ಬೆಂಗಳೂರಿನ ರಸ್ತೆಗಳು ವಾಹನ ಓಡಾಡದಂತೆ ಬ್ಲಾಕ್ ಆಗಿದ್ದವು. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಜನರಿದ್ದಾರೆ. ರಾಜ್ಯದಲ್ಲಿ ಹೊಸ ಸರಕಾರ ಬಂದ ಬಳಿಕ ಒಂದು ವರ್ಷದಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ ಎಂದು ಟೀಕಿಸಿದರು.

ಎಷ್ಟೇ ಮಳೆ ಬಂದರೂ ಎದುರಿಸಲು ಸನ್ನದ್ಧರಾಗಿದ್ದೇವೆ ಎಂದು ಆಯುಕ್ತರು ಹೇಳುತ್ತಾರೆ. ತಯಾರಿದ್ದೇವೆ ಎಂದು ಅವರು ಭಾಷಣ ಮಾಡಿದರೂ ಅವ್ಯವಸ್ಥೆಗಳು ಹಾಗೇ ಉಳಿದಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ರಾಜ್ಯ ಸರಕಾರವು ಆಸ್ತಿ ತೆರಿಗೆ, ಮೋಟಾರು ವಾಹನ ತೆರಿಗೆ ಸೇರಿ ಎಲ್ಲ ತೆರಿಗೆಗಳನ್ನು ಹೆಚ್ಚಿಸಿದೆ. ಆದರೆ, ಬೆಂಗಳೂರಿನ ಜನತೆಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ತಿಳಿಸಿದರು.

 

ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿವೆ. ಕಸ ವಿಲೇವಾರಿಯೂ ಸರಿಯಾಗಿ ಆಗುತ್ತಿಲ್ಲ. ಬೆಂಗಳೂರಿಗೆ ಅತಿ ಹೆಚ್ಚು ಸಚಿವರಿದ್ದರೂ ಈ ನಗರದ ಅಭಿವೃದ್ಧಿ ಕುರಿತು ಯಾರು ಕೂಡ ಚಿಂತನೆ ಮಾಡದೆ ಇರುವುದು ನಿಜವಾಗಿ ಒಂದು ದುರಂತ ಎಂದು ಹೇಳಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top