ಬೆಂಗಳೂರು: ರಾಜ್ಯದಲ್ಲಿ ಬಿಗ್ ಬಜಾರ್ ಮಳಿಗೆಗಳು ಗ್ರಾಹಕರಿಂದ ವಿವಿಧ ಆಸೆ, ಆಮೀಷಗಳನ್ನು ತೋರಿಸಿ 20 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಪಂಗನಾಮ ಹಾಕಿವೆ. ಬಿಗ್ ಬಜಾರ್ ರೀಟೈಲ್ ಮಳಿಗೆಗಳಿಂದ ವಂಚನೆಗೊಳಗಾದ ಗ್ರಾಹಕರು ಇದೀಗ ಕಂಗಾಲಾಗಿದ್ದಾರೆ. ಇದು ಕರ್ನಾಟಕದ ಕಥೆಯಷ್ಟೇ ಅಲ್ಲ, ಬೇರೆ ಬೇರೆ ರಾಜ್ಯಗಳಲ್ಲಿ ಇಂತಹ ಹತ್ತಾರು ಕರುಣಾಜನಕ ಕಥೆಗಳು ದಿನೇ ದಿನೇ ಕೇಳಿ ಬರುತ್ತಿವೆ.
ಬಿಗ್ ಬಜಾರ್ ನಲ್ಲಿ 10 ಸಾವಿರ ರೂಪಾಯಿ ಪಾವತಿಸಿ 12 ಸಾವಿರ ರೂಪಾಯಿ ಮೊತ್ತದ ವಸ್ತುಗಳನ್ನು ಖರೀದಿಸಿ ಎಂದು ಆಫರ್ ಗಳನ್ನು ನೀಡಲಾಗಿತ್ತು. ಗ್ರಾಹಕರು ಮುಗಿಬಿದ್ದು 10 ಸಾವಿರ ರೂಪಾಯಿ ತೆತ್ತು ಬಿಗ್ ಬಜಾರ್ ಆಫರ್ ಕಾರ್ಡ್ ಗಳನ್ನು ಖರೀದಿಸಿದ್ದರು. ಆದರೆ ನಾಲ್ಕು ತಿಂಗಳಿಂದ ಬಿಗ್ ಬಜಾರ್ ಮಳಿಗೆಗಳು ಬಂದ್ ಆಗಿವೆ. ಬೇರೆ ಬೇರೆ ಹೆಸರಿನಲ್ಲಿ ಮಳಿಗೆಗಳು ಆರಂಭವಾಗಿವೆಯಾದರೂ ಗ್ರಾಹಕರ ಗೋಳು ಕೇಳುವವರಿಲ್ಲದಂತಾಗಿದೆ. ಇದರ ಜತೆಗೆ ಬಿಗ್ ಬಜಾರ್ ಗಿಪ್ಟ್ ಕೂಪನ್ ಗಳನ್ನು ಸಹ ಮಾರಾಟ ಮಾಡಿದ್ದು, 500 ರೂ, 1000 ರೂ, 2000 ರೂ ಮೊತ್ತದ ಹಲವಾರು ಕೋಟಿ ರೂಪಾಯಿ ಮೊತ್ತದ ಗಿಪ್ಟ್ ಕೂಪನ್ ಗಳನ್ನು ಗ್ರಾಹಕರು, ಕಂಪೆನಿಗಳು ಖರೀದಿಸಿದ್ದವು. ಈ ಎಲ್ಲದರ ಮೊತ್ತ 20 ಕೋಟಿ ರೂಪಾಯಿ ದಾಟಿದೆ. ಇಷ್ಟಾದರೂ ಈ ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಆಗುತ್ತಿಲ್ಲ.

ಬಿಗ್ ಬಜಾರ್ ಮಳಿಗೆಗಳನ್ನು ರಿಲಯನ್ಸ್ ಸಂಸ್ಥೆ ಖರೀದಿಸಲಿದೆ ಎನ್ನುವ ಸುದ್ದಿ ಮೂರ್ನಾಲ್ಕು ವರ್ಷಗಳಿಂದ ಹರಿದಾಡುತ್ತಿತ್ತು. ಬಳಿಕ ಕೆಲವು ಬಿಗ್ ಬಜಾರ್ ಮಳಿಗೆಗಳು ಫ್ಯೂಚರ್ ಸ್ಟೋರ್ಸ್ ಗಳಾಗಿ ಬದಲಾಗಿದ್ದವು. ಬಳಿಕ ಫ್ಯೂಚರ್ ಗ್ರೂಪ್ ನಿಂದ ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆ ಈ ಎಲ್ಲಾ ರೀಟೈಲ್ ಮಳಿಗೆಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದಾಗಿ ಹೇಳಿತ್ತು. ಆದರೆ ಈ ವರೆಗೆ ಫ್ಯೂಚರ್ ಮತ್ತು ಬಿಗ್ ಬಜಾರ್ ಮಳಿಗೆಗಳ ಮಾರಾಟ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ರಿಲಯನ್ಸ್ ಸಂಸ್ಥೆ ಯಾವುದೇ ಸ್ಪಷ್ಟೀಕರಣ ನೀಡದೇ ಜಾಣ ಮೌನ ವಹಿಸಿದೆ. ಆದರೆ ನೊಂದ ಗ್ರಾಹಕರು ಮಾತ್ರ ವಿಲಿವಿಲಿ ಒದ್ದಾಡುವಂತಾಗಿದೆ. ಇಲ್ಲಿ ಬಿಗ್ ಬಜಾರ್ ನಿಂದ ಕೂಪನ್ ಕಾರ್ಡ್ ಗಳನ್ನು, ಗಿಪ್ಟ್ ಕಾರ್ಡ್ ಗಳನ್ನು ಖರೀದಿಸಿದ ಗ್ರಾಹಕರಿಗೆ ಭಾರೀ ಮೋಸ ಆಗಿದೆ. ಮದುವೆ, ಸಮಾರಂಭಗಳು, ಹಬ್ಬಗಳಿಗೆ ಕಂಪೆನಿಗಳು, ವ್ಯಕ್ತಿಗಳು ಖರೀದಿಸಿ ನೀಡಿದ ಗಿಪ್ಟ್ ಕೂಪನ್ ಗಳನ್ನು ಈ ಮಳಿಗೆಗಳಲ್ಲಿ ಸ್ವೀಕರಿಸುತ್ತಿಲ್ಲ. ನಾಲ್ಕು ತಿಂಗಳಿಂದ ಗ್ರಾಹಕರು ಮಳಿಗೆಗಳಿಗೆ ಅಲೆದು ಅಲೆದು ಬಸವಬಳಿದಿದ್ದಾರೆ.

12 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ ಕಾರ್ಡ್ ಗಳ ಮೂಲಕ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯಂತೆ 12 ತಿಂಗಳು ಮಳಿಗೆಗಳಲ್ಲಿ ಖರೀದಿ ಮಾಡಲು ಅವಕಾಶವಿತ್ತು. ಸಣ್ಣಪುಟ್ಟ ಗ್ರಾಹಕರು, ಗೃಹಿಣಿಯರು, ಮಧ್ಯಮ ವರ್ಗದವರು ಹಣ ಕೊಟ್ಟು ಕೈ ಸುಟ್ಟುಕೊಂಡಿದ್ದಾರೆ. ಇದೇ ರೀತಿ ಗಿಪ್ಟ್ ಕೂಪನ್ ಗಳು ಸಹ ನಿರರ್ಥಕವಾಗಿವೆ. ಈ ಕುರಿತು ಯಾರೂ ಮಾರ್ಗದರ್ಶನ ಮಾಡುವ ಸ್ಥಿತಿಯಲ್ಲಿಲ್ಲ. ಇದು ಗ್ರಾಹಕರ ಕಥೆಯಾದರೆ, ಅಲ್ಲಿ ಕೆಲಸ ಮಾಡುವವರ ಪರಿಸ್ಥಿತಿಯೂ ಸಹ ಅಯೋಮಯವಾಗಿದೆ. ಯಾರು ಯಾವ ಕೆಲಸ ಮಾಡುತ್ತಿದ್ದಾರೆ. ಅವರ ಪರಿಸ್ಥಿತಿ ಏನು, ಭವಿಷ್ಯ ಹೇಗೆ? ಎನ್ನುವುದೇ ತಿಳಿಯದಾಗಿದೆ. ರಿಲಯನ್ಸ್ ಸಂಸ್ಥೆ ಈ ಮಳಿಗೆಗಳನ್ನು ಯಾವಾಗ ಖರೀದಿಸಲಿದೆ. ಯಾವಾಗ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎನ್ನುವ ವಿಚಾರದಲ್ಲಿ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ.