ದೇಶಕ್ಕಾಗಿ ಹುತಾತ್ಮರಾದ 144 ಕುಟುಂಬಗಳಿಂದ ವೀರಮಣ್ಣು ತಂದ ಬೆಂಗಳೂರಿನ ಸಂಗೀತ ಶಿಕ್ಷಕ ಉಮೇಶ್ ಗೋಪಿನಾಥ್ ಜಾಧವ್

ಬೆಂಗಳೂರು, ಫೆ, 15; ದೇಶದ ವಿವಿಧೆಡೆ ನಡೆದ ದಾಳಿಗಳು ಮತ್ತು ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ 144 ವೀರ ಯೋಧರ ಕುಟುಂಬಗಳನ್ನು ಭೇಟಿ ಮಾಡಿರುವ ಬೆಂಗಳೂರಿನ ಮಾಜಿ ಪ್ರಾಧ್ಯಾಪಕ ಮತ್ತು ಸಂಗೀತ ಶಿಕ್ಷಕ ಉಮೇಶ್ ಗೋಪಿನಾಥ್ ಜಾಧವ್, ಹುತಾತ್ಮರ ಮನೆಗಳಿಂದ ವೀರಮಣ್ಣು ಸಂಗ್ರಹಿಸಿ ತಂದಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಮೇಶ್ ಗೋಪಿನಾಥ್ ಜಾಧವ್, ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಎಲ್ಲಾ 44 ಸಿ.ಆರ್.ಪಿ.ಎಫ್ ಯೋಧರು, ಮುಂಬೈ ಭಯೋತ್ಪಾದಕ ದಾಳಿಯಲ್ಲಿ ವೀರಮರಣವನ್ನಪ್ಪಿದ ಮೇಜರ್ ಸಂದೀಪ್ ಉನ್ನೀಕೃಷ್ಣನ್, ಕಾರ್ಗಿಲ್ ಉದ್ಧದಲ್ಲಿ ಮಡಿದ ಸೇನಾನಿಗಳು, ಉರಿ ದಾಳಿಯಲ್ಲಿ ಹೋರಾಡಿದ ವೀರ ಸೈನಿಕರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಅವರ ಕುಟುಂಬದಿಂದ ಮಣ್ಣು ಸಂಗ್ರಹಿಸಿಕೊಂಡು ಬಂದಿರುವುದಾಗಿ ಹೇಳಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡಂತೆ ದೇಶಾದ್ಯಂತ 1.15 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿದ್ದು, ಈ ಎಲ್ಲಾ ಯೋಧರ ಕುಟುಂಬದ ಸ್ಥಿತಿಗತಿ, ಪರಿಸ್ಥಿತಿಯನ್ನು ಸಹ ಅಧ್ಯಯನ ಮಾಡಿದ್ದೇನೆ. ಇದು ತಮಗೆ ಹೆಮ್ಮೆಯ ಕೆಲಸವಾಗಿದೆ. ಎಲ್ಲರನ್ನು ಭೇಟಿ ಮಾಡಲು ತಮಗೆ ಸರ್ಕಾರ ಅನುಮತಿ ಪತ್ರ ನೀಡಿತ್ತು ಎಂದರು.

ಹುತಾತ್ಮರಾದ ಹಲವು ಕುಟುಂಬಗಳು ಈಗಲೂ ಆರ್ಥಿಕ ಸಂಕಷ್ಟದಲ್ಲಿವೆ. ಮದುವೆಯಾದ ಕುಟುಂಬಗಳಲ್ಲಿ ಹುತಾತ್ಮರಾದ ಪತ್ನಿಯರಿಗೆ ಶೇ 70 ರಷ್ಟು ಮತ್ತು ವೃದ್ಧ ತಂದೆ ತಾಯಂದಿರಿಗೆ ಶೇ 30 ರಷ್ಟು ಪರಿಹಾರ ನೀಡಲಾಗುತ್ತಿದೆ. ಸರ್ಕಾರ ಕೂಡ ಈ ಕುಟುಂಬಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಿದೆ. ಇವರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಮತ್ತಷ್ಟು ಕೆಲಸ ಆಗಬೇಕಾಗಿದೆ ಎಂದು ಉಮೇಶ್ ಗೋಪಿನಾಥ್ ಜಾಧವ್ ಹೇಳಿದರು. ವೀರ ಯೋಧರ ಮನೆಗಳಿಂದ ಮಣ್ಣು ಮತ್ತು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಲು ಅಗತ್ಯವಾಗಿರುವಂತೆ ತಮ್ಮ ವಾಹನವನ್ನು ಮಾರ್ಪಡಿಸಿಕೊಂಡಿದ್ದಾರೆ. ತಂದ ಅಗತ್ಯ ವಸ್ತುಗಳನ್ನು ಅವರು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

Leave a Comment

Your email address will not be published. Required fields are marked *

Translate »
Scroll to Top