ಟೀಕೆಗಳಿಗೆ ಕಾಯಕವೇ ಅತ್ತ್ಯುತ್ತಮ ಉತ್ತರ ಎಂದು ತೋರಿದ ಮನಮೋಹನ

Kannada Nadu
ಟೀಕೆಗಳಿಗೆ ಕಾಯಕವೇ ಅತ್ತ್ಯುತ್ತಮ ಉತ್ತರ ಎಂದು ತೋರಿದ ಮನಮೋಹನ

ಹೊನಕೆರೆ ನಂಜುಂಡೇಗೌಡ
ಹತ್ತು ವರ್ಷಗಳ ಬಳಿಕ ಅವರು ಹೇಳಿದ ಮಾತು ನಿಜವಾಗಿದೆ. ಅವರು ಮಾಡಿದ ಹತ್ತುಹಲವು ಕೆಲಸಗಳ ಅರಿವಾಗಿದೆ. ಪ್ರಧಾನಿ ಹುದ್ದೆಯಿಂದ ಇಳಿಯುವ ಮುನ್ನ ನಡೆಸಿದ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಒಂದು ಮಾತು ಹೇಳಿದ್ದರು. ʻಇತಿಹಾಸ ನನ್ನ ಮೇಲೆ ಕರುಣೆ ತೋರುತ್ತದೆʼ. ಮುಂದೊಂದು ದಿನ ನಿಮಗೆ ಸತ್ಯದ ಅರಿವು ಆಗಲಿದೆ ಎನ್ನುವ ಅರ್ಥದಲ್ಲಿ ಈ ಮಾತು ಹೇಳಿದ್ದರು. ಈಗ ಅವರು ಹೇಳಿದಂತೆ ಎಲ್ಲವೂ ಆಗಿದೆ. ಅವರ ಮಹತ್ವವೇನು? ಅವರು ಮಾಡಿರುವ ಕೆಲಸ ಎಂತಹದು? ಎಂಬುದು ಈಗ ದೇಶಕ್ಕೆ ಮನವರಿಕೆಯಾಗಿದೆ.

ಈ ಮಾತು ಹೇಳಿದವರು ಮತ್ಯಾರೂ ಅಲ್ಲ, ಪ್ರಧಾನಿಯಾಗಿ ಅತ್ಯಂತ ಎತ್ತರದ ಸ್ಥಾನದಲ್ಲಿ ನಿಂತ ಡಾ.ಮನಮೋಹನ್‌ ಸಿಂಗ್‌. ಕೊನೆಯ ಪತ್ರಿಕಾ ಗೋಷ್ಠಿಯಲ್ಲಿ, ʻನೀವು ದುರ್ಬಲ ಪ್ರಧಾನಿ ಎನ್ನುವ ಟೀಕೆಗಳಿವೆʼ ಎಂದು ಪತ್ರಕರ್ತರೊಬ್ಬರು ಕೇಳಿದರು. ಅದಕ್ಕೆ ಸಿಂಗ್‌, ʻಸಮಕಾಲೀನ ಮಾಧ್ಯಮಗಳು ಅಥವಾ ವಿರೋಧ ಪಕ್ಷಗಳಿಗಿಂತಲೂ ಇತಿಹಾಸ ನನ್ನನ್ನು ಕರುಣೆಯಿಂದ ನೋಡುತ್ತದೆʼ ಎಂದಿದ್ದರು.

ಈ ಪತ್ರಿಕಾಗೋಷ್ಠಿಗೆ ನನಗೂ ಆಹ್ವಾನವಿತ್ತು. ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಗೋಷ್ಠಿಯಲ್ಲಿ ಸಿಂಗ್ ಎಲ್ಲ ಪ್ರಶ್ನೆಗಳಿಗೂ ಸಂಯಮದಿಂದ ಉತ್ತರ ಕೊಟ್ಟರು. ಸಿಂಗ್‌ ಅವರನ್ನು ದುರ್ಬಲ ಪ್ರಧಾನಿ, ಶ್ಯಾಡೊ ಪ್ರೈಮ್‌ ಮಿನಿಸ್ಟರ್, ಸೋನಿಯಾ ಅವರ ಪಪೆಟ್‌ಎಂದು ಕಟುವಾಗಿ ಟೀಕಿಸುತ್ತಿದ್ದ ಮಾಧ್ಯಮಗಳು ಈಗ ಅವರನ್ನು ಹಾಡಿ ಹೊಗಳುತ್ತಿವೆ. ಅವರಿದ್ದಾಗಲೇ ಅವರ ಕೆಲಸ ಕಾರ್ಯಗಳನ್ನು ಒರೆಗೆ ಹಚ್ಚಿದ್ದರೆ ಅವರೂ ಖುಷಿ ಪಡುತ್ತಿದ್ದರೇನೋ? ಅವರು ಭೌತಿಕವಾಗಿ ನೇಪಥ್ಯಕ್ಕೆ ಸರಿದ ಬಳಿಕ ಮಾಧ್ಯಮಗಳು ಮೂರು ದಿನಗಳಿಂದ ಹೊಗಳಿಕೆಗಳ ಮಳೆಯನ್ನೇ ಸುರಿಸುತ್ತಿವೆ.

ಮನಮೋಹನ್‌ಸಿಂಗ್‌ ವೃತ್ತಿಪರ ರಾಜಕಾರಣಿಯಾಗಿದ್ದರೆ ಸುಳ್ಳು ಹೇಳಿಕೊಂಡು, ಬರೀಗೈಯಲ್ಲಿ ಅರಮನೆ ತೋರಿಸುತ್ತಾ ಓಡಾಡುತ್ತಿದ್ದರು. ಆದರೆ, ಮಾಜಿ ಪ್ರಧಾನಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಅರ್ಥ ತಜ್ಞರು. ದೇಶವಿದೇಶಗಳಲ್ಲಿ ಓದಿಕೊಂಡು ವಿದ್ವಾಂಸರಾದವರು. ಪ್ರಾಧ್ಯಾಪಕರ ಸ್ಥಾನದಿಂದ ಪ್ರಧಾನಿ ಹುದ್ದೆವರೆಗೆ ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ಅವರಿಗೆ ಬಣ್ಣದ ಮಾತುಗಳು, ನಾಟಕ, ಮೋಸ- ವಂಚನೆ ಗೊತ್ತಿರಲಿಲ್ಲ. ಹೀಗಾಗಿ ಅವರು ಮಾಡಿದ ಕೆಲಸಗಳು ಜನರಿಗೆ ಅರ್ಥ ಆಗಲಿಲ್ಲ. ನೇರ ಮಾತು, ನಡವಳಿಕೆ, ಸರಳತೆ, ಸೌಮ್ಯ ಸ್ವಭಾವ, ದೂರ ದೃಷ್ಟಿ ಯಾವುದೂ ನಮ್ಮವರಿಗೆ ಹಿಡಿಸಲಿಲ್ಲ.

ಸಿಂಗ್‌ ಕಾಯಕದಲ್ಲಿ ನಂಬಿಕೆ ಇಟ್ಟ ಕಾಯಕ ಯೋಗಿ. ಶರಣರ ಬದುಕನ್ನು ಮರಣದಲ್ಲಿ ನೋಡು ಎಂಬ ಮಾತು ಸಿಂಗ್‌ ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ. ಮೂರು ದಿನಗಳಿಂದ ಮಾಧ್ಯಮಗಳು, ತಜ್ಞರು, ರಾಜಕಾರಣಿಗಳು ಆಡುತ್ತಿರುವ ಮಾತುಗಳನ್ನು ಕೇಳಿದರೆ ಅವರು ಎಷ್ಟು ಅರ್ಥಪೂರ್ಣವಾಗಿ ಬದುಕಿದ್ದರು ಎಂದು ಗೊತ್ತಾಗುತ್ತದೆ.

ಸಿಂಗ್ ಅವರ ಹತ್ತು ವರ್ಷಗಳ ಆಳ್ವಿಕೆ ಸುಖದ ಸುಪ್ಪತ್ತಿಗೆ ಆಗಿರಲಿಲ್ಲ. ಕಲ್ಲು ಮುಳ್ಳಿನ ಹಾದಿಯೇ ಆಗಿತ್ತು. ಪಕ್ಷ, ಸರಕಾರದ ಒಳಗೆ, ಹೊರಗೆ ಅವರಿಗೆ ಶತ್ರುಗಳಿದ್ದರು. ಆದರೆ, ಎಲ್ಲವನ್ನು ಸವಾಲಾಗಿ ಸ್ವೀಕರಿಸಿದರು. ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು, ಆಹಾರ ಭದ್ರತೆ ಹಕ್ಕು, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂಥ ಮಹತ್ವದ ಯೋಜನೆಗಳ ಮೂಲಕ ಅನೇಕ ರಾಷ್ಟಗಳು ತಮ್ಮತ್ತ ನೋಡುವಂತೆ ಮಾಡಿದರು.

ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗದಿದ್ದರೆ ಹಳ್ಳಿಗಳಲ್ಲಿ ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೋ ಏನೋ? ಬರಗಾಲ, ಪ್ರವಾಹದಂಥ ಸಂದರ್ಭದಲ್ಲಿ ಮನ್‌ರೇಗ ಗ್ರಾಮೀಣರಿಗೆ ಆರ್ಥಿಕ ಚೈತನ್ಯ ಕೊಟ್ಟಿದೆ. ನೂರು ದಿನ ಕೆಲಸ ಸಿಗುವುದರಿಂದ ಕೃಷಿಕರು ಹಾಗೂ ಕೃಷಿ ಕಾರ್ಮಿಕರ ಕುಟುಂಬ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಇದರೊಟ್ಟಿಗೆ ಆಹಾರ ಭದ್ರತೆ ಯೋಜನೆ ಅಡಿ ಸಿಗುವ ಉಚಿತ ಅಕ್ಕಿ ಬಡವರ ಹಸಿವು, ಅಪೌಷ್ಟಿಕತೆ ಸಮಸ್ಯೆ ಪರಿಹರಿಸಿವೆ.

ಮನಮೋಹನ್‌ಸಿಂಗ್‌ ಅವರ ರಾಜಕೀಯ ಪ್ರವೇಶವೇ ಆಕಸ್ಮಿಕ. ಪ್ರಧಾನಿ ಕುರ್ಚಿ ಸಿಕ್ಕಿದ್ದೂ ಅಷ್ಟೇ ಆಕಸ್ಮಿಕ. ಅದಕ್ಕೆ ಅವರನ್ನು ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಎಂದು ಕರೆಯುವುದು.

ಪಿ.ವಿ. ನರಸಿಂಹರಾವ್‌ ೧೯೯೧ರಲ್ಲಿ ಪ್ರಧಾನಿ ಆಗಿ ನೇಮಕಗೊಂಡ ಸಂದರ್ಭದಲ್ಲಿ ದೇಶ ಆರ್ಥಿಕವಾಗಿ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಈ ಸಂದರ್ಭವನ್ನು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮೊಂಟೆಕ್‌ಸಿಂಗ್‌ ಅಹ್ಲೂವಾಲಿಯಾ ತಮ್ಮ ʻಬ್ಯಾಕ್‌ ಸ್ಟೇಜ್‌ʼ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಅದನ್ನು ರಾಜಾರಾಂ ತಲ್ಲೂರು ʻಎಂ ಡಾಂಕ್ಯೂಮೆಂಟ್‌ʼ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಆಗ ದೇಶದ ವಿದೇಶಿ ವಿನಿಮಯ ತಳ ತಲುಪಬಹುದು ಎಂಬ ವಾತಾವರಣವಿತ್ತು. ಆರ್ಥಿಕವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದೆ ಪರಿಸ್ಥಿತಿ ಸುಧಾರಣೆ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇತ್ತು. ಆ ಸಮಯದಲ್ಲಿ ನರಸಿಂಹರಾವ್‌ ಅವರ ಕಣ್ಣಿಗೆ ಬಿದ್ದಿದ್ದು ಮನಮೋಹನ್‌ಸಿಂಗ್‌. ಸಿಂಗ್‌ ಅವರನ್ನು ರಾವ್‌ ತಮ್ಮ ಹಣಕಾಸು ಸಚಿವರಾಗಿ ನೇಮಿಸಿಕೊಂಡರು. ಈ ಸಂದರ್ಭವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡ ಡಾ. ಸಿಂಗ್‌ ತಮ್ಮ ಜತೆ ಕೆಲಸ ಮಾಡಲು ಮೊಂಟೆಕ್‌ ಸಿಂಗ್‌ ಸೇರಿದಂತೆ ಅನೇಕ ತಜ್ಞರನ್ನು ನೇಮಕ ಮಾಡಿದರು.

ಜಾಗತೀಕರಣ ಹಾಗೂ ಆರ್ಥಿಕ ಉದಾರೀಕರಣದ ಮೂಲಕ ಜಾಗತಿಕ ಮಾರುಕಟ್ಟೆಗೆ ದೇಶದ ಬಾಗಿಲು ತೆಗೆದರು. ವಿದೇಶಿ ಬಂಡವಾಳ ಆಕರ್ಷಿಸುವ ಮೂಲಕ ಹೊಸ ಹೊಸ ಉದ್ಯಮಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟರು. ಆದರೆ, ಇವೆಲ್ಲವೂ ನಿಯಂತ್ರಿತ ವ್ಯವಸ್ಥೆಯಲ್ಲೇ ಕಾರ್ಯಾಚರಿಸಿದವು. ಯಾವುದೇ ಹಂತದಲ್ಲೂ ಸಿಂಗ್ ದೇಶದ ಆರ್ಥಿಕ ಸಾರ್ವಭೌಮತ್ವ ಬಿಟ್ಟುಕೊಡಲಿಲ್ಲ. ಕೃಷಿ ಹಾಗೂ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಂಡರು.

೨೦೦೪ರಲ್ಲಿ ದೇಶದ ರಾಜಕಾರಣ ಬದಲಾಯಿತು. ವಾಜಪೇಯಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಸೋಲಾಯಿತು. ಯುಪಿಎ ಬಹುಮತ ಪಡೆಯಿತು.. ಆಗ ದೇಶದ ಪ್ರಧಾನಿ ಹುದ್ದೆ ತಮಗೆ ಒಲಿಯಬಹುದೆಂದು ಮನಮೋಹನ್‌ಸಿಂಗ್ ನಿರೀಕ್ಷೆ ಮಾಡಿರಲಿಲ್ಲ. ಸೋನಿಯಾ ಗಾಂಧಿ ಅವರೇ ಪ್ರಧಾನಿ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಅವರಿಗೆ ತೀವ್ರ ವಿರೋಧ ವ್ಯಕ್ತವಾಯಿತು. ಆಗ ಅವರಿಗೆ ಅವಕಾಶ ಒಲಿದು ಬಂತು. ನೆಹರೂ ಮನೆತನಕ್ಕೆ ಸೇರದ ಹೊರಗಿನ ವ್ಯಕ್ತಿಯೊಬ್ಬರು ಎರಡು ಅವಧಿಗೆ ಪ್ರಧಾನಿ ಆದ ಹೆಗ್ಗಳಿಕೆ ಸಿಂಗ್‌ ಅವರಿಗೆ ದೊರೆಯಿತು.

ಜಾಗತೀಕರಣ ಹಾಗೂ ಆರ್ಥಿಕ ಉದಾರೀಕರಣ ಹಾಗೂ ಮುಕ್ತ ಮಾರುಕಟ್ಟೆಗೆ ಅವಕಾಶ ಕೊಟ್ಟಾಗ ದೇಶಾದ್ಯಂತ ರೈತರಿಂದ ಪ್ರತಿರೋಧ ವ್ಯಕ್ತವಾಯಿತು. ಕರ್ನಾಟಕದಲ್ಲೂ ರೈತರು ಬೀದಿಗಿಳಿದು ಬಹುರಾಷ್ಟಿçÃಯ ಕಂಪೆನಿಗಳ ಮೇಲೆ ದಾಳಿ ನಡೆಸಿದರು. ಒಂದು ಸಂಗತಿಯನ್ನು ಇಲ್ಲಿ ಪ್ರಸ್ತಾಪಿಸದಿದ್ದರೆ ಅಪಚಾರ ಆಗಿಬಿಡಬಹುದು. ಯಾವುದೇ ಹಂತದಲ್ಲೂ ಸಿಂಗ್ ದೇಶದ ಆರ್ಥಿಕ ಸಾರ್ವಭೌಮತ್ವ ಬಿಟ್ಟುಕೊಡಲಿಲ್ಲ. ಕೃಷಿ ಹಾಗೂ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಂಡರು.

ಪ್ರಾಮಾಣಿಕ ಮತ್ತು ಪಾರದರ್ಶಕ ನಡವಳಿಕೆಯ ಸಂಕೇತದಂತಿದ್ದ ಮನಮೋಹನ್‌ಸಿಂಗ್‌ ಅವರಿಗೂ ಕಳಂಕಗಳು ಅಂಟಿಕೊಂಡಿದ್ದವು. ೨ಜಿ ತರಂಗಾಂತರ, ಕಲ್ಲಿದ್ದಲು ಹಗರಣಗಳು ರಾಜಕೀಯ ವೈರಿಗಳಿಗೆ ಆಹಾರ ಒದಗಿಸಿದ್ದವು. ಆರೋಪಗಳಿಂದ ಸಿಂಗ್‌ ವಿಚಲಿತರಾಗಲಿಲ್ಲ. ತಾಳ್ಮೆ ಕಳೆದುಕೊಳ್ಳಲಿಲ್ಲ. ವಿರೋಧಿಗಳ ಮೇಲೆ ಎಗರಾಡಲಿಲ್ಲ. ಎಲ್ಲಕ್ಕೂ ತಣ್ಣಗೆ ಪ್ರತಿಕ್ರಿಯಿಸಿದ್ದರು. ಆದರೆ, ಅವರ ಸರ್ಕಾರದ ಮೇಲೆ ಬಂದ ಯಾವುದೇ ಆರೋಪಗಳು ರುಜುವಾತಾಗಲಿಲ್ಲ.

ಸಿಂಗ್‌ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಕಾಂಗ್ರೆಸ್‌ ಸರ್ಕಾರ ತರಾತುರಿಯಲ್ಲಿ ಜಾರಿ ಮಾಡಿದ್ದ ಸುಗ್ರೀವಾಜ್ಞೆಯ ಮಸೂದೆ ಪ್ರತಿಯನ್ನು ರಾಹುಲ್‌ ಗಾಂಧಿ ಹರಿದು ಹಾಕಿದರು. ಸರ್ಕಾರದ ಕ್ರಮಕ್ಕೆ ಅಸಮ್ಮತಿ ಸೂಚಿಸಿದ್ದರು. ಇದೊಂದು ಅವಿವೇಕಿ ನಡೆ ಎಂದು ಟೀಕೆ ಮಾಡಿದ್ದರು. ಆಗ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿಂಗ್‌ ಮುಂದಾಗಿದ್ದರು. ತಕ್ಷಣ ತಮ್ಮ ತಪ್ಪಿನ ಅರಿವಾಗಿ ಸಿಂಗ್‌ ಅವರನ್ನು ಭೇಟಿಯಾದ ರಾಹುಲ್‌ ಕ್ಷಮೆ ಯಾಚಿಸಿದರು. ಹಿರಿಯ ಪತ್ರಕರ್ತೆ ನೀರಜಾ ಔಧರಿ ಟಿ.ವಿ ಸಂದರ್ಶನದಲ್ಲಿ ಈ ಪ್ರಸಂಗ ನೆನಪು ಮಾಡಿಕೊಂಡಿದ್ದಾರೆ.

ಮನಮೋಹನ್‌ ಸಿಂಗ್‌ ಮಿತ ಭಾಷಿ. ಮಾತು ಕಡಿಮೆ. ಮಾತು ಬೆಳ್ಳೆ, ಮೌನ ಬಂಗಾರ ಎಂಬ ನಿಲುವಿಗೆ ಅವರು ಅಂಟಿಕೊಂಡಿದ್ದರು. ಈಗ ಅವರು ಮಾತನಾಡದಿದ್ದರೂ ಅವರು ಮಾಡಿದ ಕೆಲಸಗಳು ಮಾತನಾಡುತ್ತಿವೆ. ದೇಶದ ರಾಜಕೀಯ ಇತಿಹಾಸದಲ್ಲಿ ಸಿಂಗ್‌ ಶಾಶ್ವತವಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";