ಮಂಡ್ಯ ಹಾಲು ಒಕ್ಕೂಟವ ಸೂಪರ್‌ಸೀಡ್ ಮಾಡಿ

ಮಂಡ್ಯ,ಜನವರಿ, 22 : ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರೈತರ ಜೊತೆ ಚೆಲ್ಲಾಟವಾಡುತ್ತಿದೆ. ರೈತ ಮಹಿಳೆಯರು, ರೈತರು ಕಷ್ಟಪಟ್ಟು ದಿನ ನಿತ್ಯದ ಜೀವನವನ್ನು ಸಾಗಿಸುತ್ತಿದ್ದಾರೆ. ಇವರು ಪ್ರಮುಖವಾಗಿ ಹೈನುಗಾರಿಕೆಯನ್ನು ಅವಲಂಬಿಸಿಕೊಂಡಿದ್ದಾರೆ. ಇದರ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ನಮ್ಮ ರೈತರು ಹೀಗೆ ಕಷ್ಟಪಟ್ಟು ಹಾಲು ಒಕ್ಕೂಟ ಸಂಸ್ಥೆಯನ್ನು ಬಲಗೊಳಿಸುವ ಮೂಲಕ ಒಂದೊಳ್ಳೆ ಹೆಸರನ್ನು ತಂದುಕೊಟ್ಟರೆ. ಕೆಲವರು ಹಾಲಿಗೆ ನೀರು ಬೆರೆಸುವಂತಹ ಘಟನೆ ಇರಬಹುದು, ಹಾಲಿಗೆ ರಾಸಾಯನಿಕ ಬೆರೆಸುವ ಪ್ರಕರಣ ಇರಬಹುದು ಇಂತಹ ಪ್ರಕರಣಗಳು ಅಕ್ಷಮ್ಯ. ಇದು ಒಂದು ಜಿಲ್ಲೆಯ ಹಗರಣ ಎಂದು ಸುಮ್ಮನಾಗದೆ, ಇಂಥ ಪ್ರಕರಣವನ್ನು ಮಾನ್ಯ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕಿದೆ. ಆ ಮೂಲಕ ಇಡೀ ರಾಜ್ಯದಲ್ಲಿರುವ 14 ಹಾಲು ಒಕ್ಕೂಟಗಳಿಗೂ ಎಚ್ಚರಿಕೆ ಸಂದೇಶವನ್ನು ರವಾನಿಸಬೇಕಿದೆ.

ಮಂಡ್ಯ ಜಿಲ್ಲೆಯ ಜನತೆಗೆ ಸಂಕಷ್ಟದ ಮೇಲೆ ಸಂಕಷ್ಟ ಬಂದರೆ ಹೇಗೆ? ಮೊದಲೇ ಮೈಶುಗರ್ ಸಕ್ಕರೆ ಕಾರ್ಖಾನೆ ನಿಂತು ಹೋಗಿದೆ. ಇದನ್ನು ಅವಲಂಬಿಸಿದ ಲಕ್ಷಾಂತರ ಕುಟುಂಬಗಳು ಸಂಕಷ್ಟದಲ್ಲಿವೆ. ಅಲ್ಲದೆ, ಪರ್ಯಾಯ ಆದಾಯವಾಗಿ ಹೈನುಗಾರಿಕೆಯನ್ನು ಲಕ್ಷಾಂತರ ಕುಟುಂಬದವರು ನೆಚ್ಚಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಮತ್ತೆ ಇಂತಹ ಪ್ರಕರಣಗಳು ಕಂಡುಬರುತ್ತಿರುವುದು ಆತಂಕವನ್ನು ಹುಟ್ಟಿಸಿದೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ಕ್ರಮ ಕೈಗೊಳ್ಳಲು ವಿಫಲವಾದರೆ ಮುಂದೆ ತಪ್ಪು ಮಾಡುವವರಿಗೆ ಅವಕಾಶವನ್ನು ಹಾಗೂ ಆಮಂತ್ರಣವನ್ನು ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ಮತ್ತು ಕ್ರಮದ ಅವಶ್ಯಕತೆ ಇದೆ.

ನಂದಿನಿ ಬ್ರಾಂಡ್‌ಗೂ ದಕ್ಕೆ ಆತಂಕ : ಮಂಡ್ಯ ಜಿಲ್ಲೆಯಲ್ಲಿ 1250 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಒಂದು ಲಕ್ಷ ಕುಟುಂಬಗಳು ನೇರವಾಗಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದರೆ, ಇದನ್ನು ಅವಲಂಬಿಸಿಕೊಂಡು ಹೆಚ್ಚುವರಿಯಾಗಿ 25 ಸಾವಿರ ಕುಟುಂಬಗಳು ಇದನ್ನೇ ಆಧಾರವಾಗಿಸಿಕೊಂಡು ಜೀವನ ನಡೆಸುತ್ತಿವೆ. ಅಲ್ಲದೆ, ಇದರಲ್ಲಿ ಸುಮಾರು 2 ಲಕ್ಷ ಜನ ಷೇರು ಬಂಡವಾಳವನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ರೈತರ ಶ್ರಮದಿಂದ ರಾಜ್ಯದಲ್ಲಿ ನಂದಿನಿ ಹಾಲಿನ ಬ್ರಾಂಡ್‌ಗೆ ಒಂದು ಒಳ್ಳೆಯ ಹೆಸರಿದೆ. ಆದರೆ, ಇಂಥ ಕೃತ್ಯಗಳಿಂದ ನಂದಿನಿ ಬ್ರಾಂಡ್‌ಗೆ ಸಹ ಕೆಟ್ಟ ಹೆಸರು ಬರಲಿದೆ. ಇದು ರಾಜ್ಯದ ರೈತರ ಹಿತಾಸಕ್ತಿಯಿಂದಲೂ ಕೆಟ್ಟ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಶೀಘ್ರದಲ್ಲಿಯೇ ತಡೆಗಟ್ಟುವ ಮೂಲಕ ರಾಜ್ಯ ಸರ್ಕಾರವು ರೈತರ ಹಿತವನ್ನು ಕಾಪಾಡಬೇಕೆಂದು ಒತ್ತಾಯ ಮಾಡುತ್ತಿದ್ದೇನೆ.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ: ಮೇಲ್ನೋಟಕ್ಕೆ ಈ ಹಗರಣದಲ್ಲಿ ಆಡಳಿತ ಮಂಡಳಿಯವರೇ ಶಾಮೀಲಾಗಿರುವಂತೆ ಕಾಣುತ್ತಿದೆ. ಹಾಗಾಗಿ ಮಂಡ್ಯ ಹಾಲು ಒಕ್ಕೂಟವನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಜೊತೆಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಇದರ ಬಗ್ಗೆ ವಿಶೇಷ ಮುತುವರ್ಜಿ ವಹಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು ಎಂಬುದು ನನ್ನ ಕಳಕಳಿಯ ಒತ್ತಾಸೆಯಾಗಿದೆ.

Leave a Comment

Your email address will not be published. Required fields are marked *

Translate »
Scroll to Top