ಬಳ್ಳಾರಿ: ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬಳ್ಳಾರಿ ಸೇರಿ ರಾಜ್ಯದ ವಿವಿಧೆಡೆ ಬುಧವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಠರಿಗೆ ಬಿಸಿ ಮುಟ್ಟಿಸಿದ್ದಾರೆ.
ಬಳ್ಳಾರಿಯ ಬಿಸಿಎಂ ತಾಲೂಕು ಅಧಿಕಾರಿ ಲೋಕೇಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳ್ಳಾರಿಯ ರಾಮಾಂಜನೇಯ ನಗರದಲ್ಲಿರೋ ಲೋಕೇಶ್ ಮನೆ ಮತ್ತು ಅವರ ಆಪ್ತರ ಮನೆಗಳ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ಆದಾಯಕ್ಕೂ ಮೀರಿದ ಅಪಾರ ಪ್ರಮಾಣದ ಅಸ್ತಿ ಹಾಗೂ ಅಕ್ರಮ ಎಸೆಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ವರ್ಗಾವಣೆ ದಂಧೆಯಲ್ಲಿ ಲೋಕೇಶ್ ಸಕ್ರಿಯರಾಗಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.
ಬಳ್ಳಾರಿ, ರಾಯಚೂರು, ಚಿಕ್ಕಮಗಳೂರು, ಬೀದರ್, ಬೆಳಗಾವಿ, ಗದಗ ಮತ್ತು ಬೆಂಗಳೂರಿನಲ್ಲಿ ಒಟ್ಟು 8 ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಲೋಕಾಯುಕ್ತ ಪೊಲೀಸ್ರು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ ಮನೆ ಮೆಲೆ, ಚಿಕ್ಕಮಗಳೂರು ಜಿಲ್ಲೆ ಕಡೂರಿನ ಆಡಳಿತ ವೈದ್ಯಾಧಿಕಾರಿ ಡಾ. ಎಸ್ಎನ್ ಉಮೇಶ್ ನಿವಾಸದ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ.