ದೇವನಹಳ್ಳಿ,ಜ,7 : ಹಸುಗಳು ಸೇರಿದಂತೆ ಮೂಕ ಪ್ರಾಣಿಗಳ ಸೇವೆಗಾಗಿ ಸರ್ಕಾರವು ಹಲವಾರು ಯೋಜನೆಗಳ ಮೂಲಕ ಜಾನುವಾರುಗಳ ಸಂರಕ್ಷಣೆಗೆ ಕ್ರಮ ಕೈಗೊಂಡಿದ್ದು, ಜಾನುವಾರುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪಶು ಸಂಗೋಪನಾ ಸಚಿವರಾದ ಪ್ರಭು.ಬಿ.ಚವ್ಹಾಣ್ ಅವರು ತಿಳಿಸಿದರು. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಪಶುಪಾಲನಾ ಇಲಾಖೆಯ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾಣಿ ಸಹಾಯವಾಣಿ ಕೇಂದ್ರವು ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಆರಂಭವಾಗಿದ್ದು, 24/7 ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಹಾಯವಾಣಿಗೆ ಕರೆ ಮಾಡುವ ಮೂಲಕ ಜಾನುವಾರುಗಳಿಗೆ ಸಂಬಂಧಿಸಿದ ಸಹಾಯವನ್ನು ಪಡೆಯಬಹುದಾಗಿದೆ ಎಂದರು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಅಧಿನಿಯಮ 2020ರ ಕಾಯ್ದೆಯಡಿ ಜಾನುವಾರುಗಳ ಸಂರಕ್ಷಣೆ ಸಾಧ್ಯವಾಗುವುದರಿಂದ ಈ ಕಾಯ್ದೆಯ ಕುರಿತು ಅಧಿಕಾರಿಗಳು ಪೂರ್ಣ ಮಾಹಿತಿಯನ್ನು ತಿಳಿದುಕೊಂಡು, ಗ್ರಾಮಗಳ ಸಭೆಯಲ್ಲಿ ಭಾಗವಹಿಸಿ, ರೈತರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಅಧಿನಿಯಮ 2020ರ ಕಾಯ್ದೆಯು ಜಾಮೀನು ರಹಿತ ಕಾಯ್ದೆಯಾಗಿದ್ದು, ಅಪರಾಧ ಸಾಬೀತಾದಲ್ಲಿ, ಮೂರು ವರ್ಷದಿಂದ ಏಳು ವರ್ಷಗಳವರೆಗೆ ಕಾರಾವಾಸ ಅಥವಾ ಒಂದು ಜಾನುವಾರಿಗೆ ರೂ. 50 ಸಾವಿರದಿಂದ 5 ಲಕ್ಷಗಳವರೆಗೆ ಜುಲ್ಮಾನೆಗೆ ಅವಕಾಶವಿದ್ದು, ಎರಡನೇ ಅಥವಾ ಮುಂದುವರೆದ ಸಂದರ್ಭದಲ್ಲಿ ರೂ 1 ಲಕ್ಷದಿಂದ 10 ಲಕ್ಷಗಳವರೆಗೆ ಜುಲ್ಮಾನೆ ಅಥವಾ ಏಳು ವರ್ಷ ಕಾರಾವಾಸ ಅಥವಾ ಅವೆರಡರಿಂದಲೂ ದಂಡಿತನಾಗಲು ಅವಕಾಶವಿದೆ ಎಂದು ಹೇಳಿದರು. ಕರ್ನಾಟಕದ ಇತಿಹಾಸದಲ್ಲೇ ಗೋಶಾಲೆ ಆರಂಭಿಸಲು ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವಾಗಿ ಭೂಮಿ ಪೂಜೆ ಮಾಡಲು ತಿಳಿಸಿದರಲ್ಲದೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಉಪ ನಿರ್ದೇಶಕರು ತಹಶೀಲ್ದಾರ್ ಮೂಲಕ ಗೋಮಾಳದ ಜಾಗ ಗುರುತಿಸಿ, ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಿದರೆ, ಮಂಜೂರಾತಿ ನೀಡಲಾಗುವುದು ಎಂದು ಹೇಳಿದರು. ಪ್ರಾಣಿ ಕಲ್ಯಾಣ ಮಂಡಳಿಯ ಕಾರ್ಯ ವೈಖರಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಪ್ರಾಣಿ ಸಹಾಯವಾಣಿ ಕೇಂದ್ರವು ಸದಾ ಚಾಲ್ತಿಯಲ್ಲಿರಬೇಕು ಮತ್ತು ದೂರುಗಳ ವಿವರ ಹಾಗೂ ಒದಗಿಸಲಾದ ಸಹಾಯದ ವಿವರಗಳನ್ನು ಲಿಖಿತವಾಗಿ ಕಚೇರಿಗೆ ಸಲ್ಲಿಸುವಂತೆ ತಿಳಿಸಿದರು.
ರಾಜ್ಯಕ್ಕೆ 291 ಪಶು ಸಂಜೀವಿನಿ ಆ್ಯಂಬುಲೆನ್ಸ್‌ಗಳನ್ನು ನೀಡಲು ನಿರ್ಧರಿಸಲಾಗಿದ್ದು, ಈಗಾಗಲೇ 15 ಜಿಲ್ಲೆಗಳಿಗೆ ನೀಡಲಾಗಿದೆ ಎಂದರಲ್ಲದೆ, 1962 ಸಂಖ್ಯೆಗೆ ಕರೆ ಮಾಡುವ ಮೂಲಕ ಪಶು ಸಂಜೀವಿನಿ ಆ್ಯಂಬುಲೆನ್ಸ್ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1ಲಕ್ಷ 82 ಸಾವಿರ ಜಾನುವಾರುಗಳಿದ್ದು, ಜಿಲ್ಲೆಯಲ್ಲಿನ ಜಾನುವಾರುಗಳಿಗೆ ಅಗತ್ಯವಿರುವ ಮೇವು, ಲಸಿಕೆ, ಆರೋಗ್ಯ ಶಿಬಿರ, ರೈತರಿಗೆ ತರಬೇತಿಗಳ ಕುರಿತ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರಲ್ಲದೆ, ಪಶು ಇಲಾಖೆಗೆ ಸಂಬಂಧಿಸಿದ ಕಟ್ಟಡಗಳ ಶಿಥಿಲೀಕರಣ, ದುರಸ್ತಿ, ನವೀಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಹೇಳಿದರು.
ಪಶುವೈದ್ಯಾಧಿಕಾರಿಗಳು ಸೇರಿದಂತೆ ಇಲಾಖೆಗೆ ಅಗತ್ಯವಿರುವ 400 ಸಿಬ್ಬಂದಿಗಳನ್ನು ಶೀಘ್ರದಲ್ಲೇ ನೇಮಕಾತಿ ಮಾಡಲಿದ್ದೇವೆ ಎಂದರಲ್ಲದೆ, ಪಶು ಪಾಲನಾ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯತೆಯ ಮಾಹಿತಿ ಪಡೆದರು ಹಾಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವಂತೆ ತಿಳಿಸಿದರು. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರು ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ನೀಡಿ, ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರವಾಗಿ ನೇಮಕಾತಿ ನಡೆಸಲು ಮನವಿ ಮಾಡಿದರು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್. ಅವರು ಮಾತನಾಡಿ, ದೇವನಹಳ್ಳಿ ತಾಲ್ಲೂಕಿನಲ್ಲಿ ಹೈನುಗಾರಿಕೆ ಪ್ರಮುಖವಾಗಿದ್ದು, ದೇವನಹಳ್ಳಿ ಕ್ಷೇತ್ರವನ್ನು ಮೀಸಲಾತಿ ಕ್ಷೇತ್ರಕ್ಕೆ ಪರಿಗಣಿಸಿ, ವಿಶೇಷ ಅವಕಾಶ ನೀಡಬೇಕೆಂದು ಕೋರಿದರಲ್ಲದೆ, ತಾಲ್ಲೂಕಿಗೆ 3 ರಿಂದ 4 ಪಶು ಪಾಲನಾ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ (ಕೋವಿಡ್-19) ಸಚಿವರಾದ ಎನ್.ನಾಗರಾಜು, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವಣ್ಣಪ್ಪ, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್, ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಜಿ.ಎಂ.ನಾಗರಾಜ್, ಸಹಾಯಕ ನಿರ್ದೇಶಕರು, ಪಶುವೈದ್ಯಾಧಿಕಾರಿಗಳು, ಸೇರಿದಂತೆ ವಿವಿಧ ಇಲಾಖೆಯ ಅಧಕಾರಿಗಳು ಉಪಸ್ಥಿತರಿದ್ದರು.