ನವದೆಹಲಿ: ಖರ್ಗೆ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ಅವರನ್ನು ನಿಮ್ಹಾನ್ಸ್ ಗೆ ಕಳಿಸೋಣ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ ಖರ್ಗೆ ಅವರ ಬಣ್ಣ ಮತ್ತು ತಲೆಗೂದಲು ಬಗ್ಗೆ ಆರಗ ಜ್ಞಾನೇಂದ್ರ ಅವರು ಅವಹೇಳನ ಮಾಡಿರುವ ಬಗ್ಗೆ ಮಾಧ್ಯಮದವರು ಬುಧವಾರ ಪ್ರಸ್ತಾಪಿಸಿದಾಗ ಶಿವಕುಮಾರ್ ಅವರು ಹೀಗೆ ಹೇಳಿದರು. ಬೆಂಗಳೂರಲ್ಲಿ ನಿಮಾನ್ಸ್ ಆಸ್ಪತ್ರೆ ಉತ್ತಮವಾಗಿದೆ. ಅದು ಫರ್ಸ್ಟ್ ಕ್ಲಾಸ್ ಆಗಿದೆ. ಅಲ್ಲಿಗೆ ಆರಗ ಜ್ಞಾನೇಂದ್ರ ಅವರನ್ನು ಕಳುಹಿಸೋಣ ಎಂದರು. ಮಂತ್ರಿಗಳು ಸೇರಿ ಕರ್ನಾಟಕದ ಸುಮಾರು 50 ಮಂದಿ ನಾಯಕರ ಸಭೆಯನ್ನು ವರಿಷ್ಠರು ಕರೆದಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು ಎಲ್ಲ ರಾಜ್ಯದ ಮುಖಂಡರ ಸಭೆ ನಡೆಸುತ್ತಿದ್ದಾರೆ. ಕರ್ನಾಟಕದ ಸಭೆ ವಿಶೇಷವೇನಲ್ಲ.
ಹಿಂದೆಯೇ ಬೆಂಗಳೂರಲ್ಲಿ ಸಭೆ ನಡೆಯಬೇಕಿತ್ತು. ರಾಹುಲ್ ಗಾಂಧಿ ಅವರ ಜತೆ ಎಲ್ಲ ಮಂತ್ರಿಗಳ ಫೋಟೋ ಸೆಷನ್ ಕೂಡ ಇತ್ತು. ಉಮಾನ್ ಚಾಂಡಿ ಅವರ ನಿಧನದ ಹಿನ್ನೆಲೆಯಲ್ಲಿ ಆ ಸಭೆ ರದ್ದಾಗಿತ್ತು. ಅದು ಈಗ ದೆಹಲಿಯಲ್ಲಿ ನಡೆಯುತ್ತಿದೆ. ಸಚಿವರ ಪ್ರತ್ಯೇಕ ಸಭೆ ಕೂಡ ನಡೆಯಲಿದೆ. ಲೋಕಸಭೆ ಚುನಾವಣೆ, ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ಆಗಲಿದೆ ಎಂದರು. ಬೆಂಗಳೂರು ವಾಹನ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆ, ಮೇಲು ಸೇತುವೆ ರಸ್ತೆ ನಿರ್ಮಾಣ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜತೆ ಚರ್ಚೆ ಮಾಡುವುದಾಗಿ ತಿಳಿಸಿದರು.