ಅನ್ಯ ಭಾಷೆ ಕಲಿಯಿರಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ: ಸುರೇಶ್ ಬಾಬು

ದೇವನಹಳ್ಳಿ: ಸುಮಾರು ಎರಡೂವರೆ ಸಹಸ್ರಮಾನದ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಸಹ ಪ್ರಮುಖವಾಗಿದೆ. ಆದರೆ ವಿಷಾದವೆಂದರೆ ಇಂದಿನ ಪೋಷಕರು ಮಕ್ಕಳಿಗೆ ನಾಡಿನ ಭಾಷೆ, ಸಂಸ್ಕೃತಿಯ ಬಗ್ಗೆ ಅಷ್ಟು ಕಾಳಜಿ ತೋರುತ್ತಿಲ್ಲಾ ಶಾಲೆಯಲ್ಲೂ ಮನೆಯಲ್ಲೂ ಕನ್ನಡ ಮಾತನಾಡದಂತೆ ಪೋಷಕರು ಮಕ್ಕಳಿಗೆ ತಾಕೀತು ಮಾಡುತ್ತಾರೆ ಎಂಬುದು ನಿಜಕ್ಕೂ ವಿಪರ್ಯಾಸ. ಭವಿಷ್ಯಕ್ಕಾಗಿ ಇಂಗ್ಲಿಷ್ ಬಳಕೆ ಅಥವಾ ಕಲಿಕೆ ಅನಿವಾರ್ಯವಾದರೂ ಕನ್ನಡವನ್ನು ಕಡೆಗಣಿಸುವುದು ಬೇಸರದ ವಿಷಯ ಎಂದು ದೇವನಹಳ್ಳಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಕವಿಗಳಾದ ಮ.ಸುರೇಶ್ ಬಾಬು ತಿಳಿಸಿದರು.

ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಬಸವೇಶ್ವರ ಬಡಾವಣೆಯ ಶ್ರೀ ವಿಜಯ ವಿನಾಯಕ ದೇವಾಲಯ ಆವರಣದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ನೃತ್ಯ ಸಂಸ್ಥೆ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ 66 ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಜಾನಪದ ಹಾಗೂ ನೃತ್ಯದ ಮೂಲಕ ಅಮೋಘ ಕೊಡುಗೆ ಇದೆ ಕನ್ನಡಿಗರು ಕನ್ನಡ ಶಾಲೆಯಲ್ಲೆ ವ್ಯಾಸಂಗ ಮಾಡಬೇಕು ಆದರೆ ಪ್ರಸ್ತುತ ವಿದ್ಯೆ ವ್ಯಾಪಾರೀಕರಣವಾಗಿದೆ ಪ್ರತಿಯೊಬ್ಬರೂ ಸ್ವಾಭಿಮಾನ ಬೆಳೆಸಿಕೊಂಡು ಕನ್ನಡವನ್ನೇ ಮಾತಾಡಬೇಕೆಂದು ತಿಳಿಸಿದರು.

ವಿಜಯ ವಿನಾಯಕ ದೇವಾಲಯ ಧರ್ಮದರ್ಶಿ ಎಸ್.ಪಿ.ಕೃಷ್ಣಾನಂದ್ ಮಾತನಾಡಿ ಇಂದಿನ ಮುಂದುವರಿದ ತಂತ್ರಜ್ಞಾನದ ಯುಗದಲ್ಲಿ ಹೆಚ್ಚಾಗಿ ಪಾಶ್ಚಿಮಾತ್ಯದ ಗುಂಗಿನಲ್ಲಿ ಯುವ ಪೀಳಿಗೆ ಮಾರುಹೋಗಿದ್ದಾರೆ ಇಂತಹ ಸಂದರ್ಭದಲ್ಲಿ ದೇಶೀಯ ನೃತ್ಯ ಎಲ್ಲೋ ಎಲೆಮರೆಕಾಯಿಯಂತೆ ಇದೆ ಆದರೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಕ್ಕದ ತಾಲ್ಲೂಕಿನಿಂದ ಆಗಮಿಸುತ್ತಿದ್ದಾರೆ ಇದು ಸಂತೋಷದ ವಿಷಯ, ಹೆಚ್ಚಾಗಿ ನಮ್ಮ ದೇಸೀಯ ನೃತ್ಯದ ಕಡೆ ಒಲವು ತೋರಬೇಕು, ಕನ್ನಡ ನಾಡಿನ ಮಹತ್ವವನ್ನು ಕನ್ನಡಿಗರು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿಜಯ ವಿನಾಯಕ ದೇವಾಲಯ ಧರ್ಮದರ್ಶಿ ಆರ್.ರಾಜಶೇಖರ್, ನೃತ್ಯ ಸಂಸ್ಥೆ ಕಾರ್ಯದರ್ಶಿ ಸುಧೀರ್, ಮತ್ತಿತರರು ಇದ್ದರು. ಶ್ರೀ ಇಡಗುಂಜಿ ಮಹಾಗಣಪತಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ತಮ್ಮ ನೃತ್ಯ ಕಲೆಯನ್ನು ಪ್ರದರ್ಶಿಸಿದರು.

Leave a Comment

Your email address will not be published. Required fields are marked *

Translate »
Scroll to Top