ಬಳ್ಳಾರಿ: ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಇಂದು ನಗರದಲ್ಲಿ ’ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಬಳಿಯ ಪ್ರದೇಶದಲ್ಲಿ ಭೂಮಿ ಪೂಜೆ ಮಾಡಿ, ಮಣ್ಣನ್ನು ಅಗೆದು ಕಳಶದಲ್ಲಿ ತುಂಬಿ, ಪೂಜೆ ಸಲ್ಲಿಸುವ ಮೂಲಕ ’ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮಕ್ಕೆ ಬಳ್ಳಾರಿ ನಗರ ಮಾಜಿ ಶಾಸಕ, ಹಿರಿಯ ಧುರೀಣ ಜಿ.ಸೋಮಶೇಖರರೆಡ್ಡಿ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಗೋನಾಳ್ ಮುರಹರಗೌಡ, ಎಸ್.ಗುರುಲಿಂಗನಗೌಡ ಮತ್ತು ಇತರೆ ಪ್ರಮುಖರು ಪ್ರಾರಂಭಿಸಿದರು.
ಬಿಜೆಪಿ ವತಿಯಿಂದ ರಾಷ್ಟ್ರದಾದ್ಯಂತ ಎಲ್ಲಾ ರಾಜ್ಯಗಳಲ್ಲಿಯೂ ’ನನ್ನ ಮಣ್ಣು ನನ್ನ ದೇಶ’ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದೊಂದು ದೇಶ ಭಕ್ತಿಯ ಪ್ರತೀಕದ ಐತಿಹಾಸಿಕ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ ಕೂಡ ನಡೆಸಲಾಗುತ್ತಿದೆ. ಎಲ್ಲಾ ಗ್ರಾಮಗಳಲ್ಲಿ, ನಗರ – ಪಟ್ಟಣಗಳಲ್ಲಿ, ಆಉಆ ಊರುಗಳಲ್ಲಿನ ಮಣ್ಣನ್ನು ಕಳಸದಲ್ಲಿ ಸಂಗ್ರಹಿಸಿ ಬೆಂಗಳೂರಿಗೆ ಆನಂತರ ದೆಹಲಿಗೆ ತೆಗೆದುಕೊಂಡು ಹೋಗಲಾಗುತ್ತದೆ. ದೆಹಲಿಯಲ್ಲಿ ನವೆಂಬರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಎಲ್ಲಾ ರಾಜ್ಯಗಳ ಮಣ್ಣನ್ನು ಸೇರಿಸಿ ಅಮೃತ ಉದ್ಯಾನವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ದಏಶದ ಎಲ್ಲಾ ರಾಜ್ಯಗಳ ಪವಿತ್ರ ಮಣ್ಣಿನಿಂದ ನಿರ್ಮಿಸಲಾಗುತ್ತದೆ ಎಂದು ಸೋಮಶೇಖರರೆಡ್ಡಿ ಮತ್ತಿತರರು ತಿಳಿಸಿದರು.
ಸನಾತನ ಧರ್ಮದ ಬಗ್ಗೆ ವಿಪಕ್ಷಗಳ ಮುಖಂಡರು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು. ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರು ಸನಾತನ ಧರ್ಮದವರೇ ಆಗಿದ್ದಾರೆ. ಸನಾತನ ಧರ್ಮ ಇಲ್ಲ ಎನ್ನುವವರು ನಮ್ಮ ದೇಶದ ಜನರೇ ಅಲ್ಲ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ – ಜೆಡಿಎಸ್ ಮೈತ್ರಿಯಿಂದ ಒಳ್ಳೆಯದಾಗಲಿದೆ
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಒಳ್ಳೆಯದಾಗಲಿದೆ. ನಮ್ಮ ಪಕ್ಷದ ವರಿಷ್ಠರು ಎಲ್ಲಾ ಕೋನಗಳಲ್ಲಿ ಆಲೋಚಿಸಿ ನಿರ್ಧಾರ ಕೈಗೊಂಡಿರುತ್ತಾರೆ ಎಂದು ಬಿಜೆಪಿ ಹಿರಿಯ ಧುರೀಣ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಅಭಿಪ್ರಾಯ ಪಟ್ಟರು.
ಬಳ್ಳಾರಿಯಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಹಾಗೂ ರಾಜ್ಯದ ಎಲ್ಲಾ ೨೮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಈ ಮೈತ್ರಿ ಸಹಕಾರಿ ಆಗಬಹುದು. ಹಳೆ ಮೈಸೂರು ಭಾಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ಶಕ್ತಿ ಇದೆ. ಅವರದ್ದೇ ಆದ ಕಾರ್ಯಕರ್ತರಿದ್ದಾರೆ. ಈ ಮೈತ್ರಿದಿಂದಾಗಿ ಪಕ್ಷಕ್ಕೆ ಒಳ್ಳೆಯ ಪರಿಣಾಮ ಬೀರುತ್ತದೆ, ಒಳ್ಳೆಯದು ಆಗುತ್ತದೆ ಎಂದರು.
ಹೆದರುವ ಪ್ರಶ್ನೆಯೇ ಇಲ್ಲ: ಬಿಜೆಪಿ ದುರ್ಬಲವಾಗಿರುವುದರಿಂದ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ಕಾಂಗ್ರೆಸ್ ಜನಪ್ರಿಯತೆಗೆ ಹೆದರಿಕೊಂಡಿದೆ ಎಂಬುದಾಗಿ ಕಾಂಗ್ರೆಸ್ ಮುಖಂಡರು ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಸೋಮಶೇಖರರೆಡ್ಡಿಯವರು, ಬಿಜೆಪಿ ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ. ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಶಕ್ತಿಯುತವಾಗಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ದೇಶದ ಜನತೆ ಪ್ರಜ್ಞಾವಂತ ಮತದಾರರು ನಿರ್ಧರಿಸಿದ್ದಾರೆ. ರಾಜ್ಯವೂ ಸೇರಿದಂತೆ ದೇಶದೆಲ್ಲೆಡೆ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಭರ್ಜರಿ ಗೆಲುವು ಗ್ಯಾರೆಂಟಿ ಎಂದರು.
ಚುನಾವಣೆಗೆ ರೆಡಿ: ಲೋಕಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಬಿಜೆಪಿಯು ಇದಕ್ಕೆ ಸರ್ವ ಸನ್ನದ್ಧವಾಗಿದೆ. ಪಕ್ಷ ಸಂಘಟನೆಗೆ ಹೈಕಮಾಂಡ್ ಒತ್ತು ನೀಡಿದೆ. ವಿವಿಧ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಹೈಕಮಾಂಡ್ ನಿರ್ಧಾರ: ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಪಕ್ಷವು ಯಾರಿಗೆ ಟಿಕೆಟ್ ನೀಡಿದರೂ ಸಹ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ. ಹಾಲಿ ಸಂಸದ ದೇವೇಂದ್ರಪ್ಪನವರಿಗೆ ಆಗಲೀ, ಅಥವಾ ಮತ್ತಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇವೆ. ನಮ್ಮದು ಶಿಸ್ತಿನ ಪಕ್ಷ ಎಂದು ಸೋಮಶೇಖರರೆಡ್ಡಿ ಸ್ಪಷ್ಟವಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ, ಧುರೀಣರಾದ ಎಸ್.ಗುರುಲಿಂಗನಗೌಡ, ಕಾರ್ಪೋರೇಟರ್ ಶ್ರೀನಿವಾಸ್ ಮೋತ್ಕರ್, ಎಸ್.ಮಲ್ಲನಗೌಡ, ಶಂಕರಪ್ಪ, ರಾಜೀವ್ ತೊಗರಿ, ಮಹಿಳಾ ಮೋರ್ಚಾದ ಶಿವಕೃಷ್ಣಮ್ಮ, ಕೆ.ಸುಗುಣ ಮತ್ತು ಇತರರು ಉಪಸ್ಥಿತರಿದ್ದರು.