ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ ಯುವ ಜನೋತ್ಸವಕ್ಕೆ ಅದ್ದೂರಿ ಚಾಲನೆ

ಮಂಡ್ಯ,ಜ.04: ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿರುವ 2021-22 ನೇ ಸಾಲಿನ ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ , ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ಉದ್ಘಾಟಿಸಿದರು.

ಯುವ ಶಕ್ತಿ ಸದ್ಬಳಕೆಯಾಗಬೇಕು:ಚುಂಚಶ್ರೀ ಎಲ್ಲಾ ಸಂಪನ್ಮೂಲಗಳಂತೆ ಮಾನವ ಸಂಪನ್ಮೂಲ ಕೂಡ ಪ್ರಮುಖವಾಗಿದೆ. ಅದರಂತೆ ನಮ್ಮ ದೇಶದಲ್ಲಿ ಮಾನವ ಸಂಪನ್ಮೂಲ ಹೆಚ್ಚಿದ್ದು, ಯುವಕರ ಶಕ್ತಿ ಹೆಚ್ಚಿದೆ. ದೇಶ ಕಟ್ಟುವಲ್ಲಿ ಇರುವ ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳದಿದ್ದರೇ ಮಾನವ ಸಂಪನ್ಮೂಲ ಇದ್ದರೂ ವ್ಯರ್ಥವಾಗುತ್ತದೆ. ರಾಜ್ಯದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಮಕ್ಕಳು ಬಂದಿದ್ದೀರಾ, ನಿಮಗೆಲ್ಲರಿಗೂ ಕಾಲಬೈರವೇಶ್ವರ ಸ್ವಾಮಿ ಒಳಿತು ಮಾಡಲಿ. ಇಲ್ಲಿ ಗೆದ್ದು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ ಯಶಸ್ಸು ಸಿಗಲಿ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಆಶೀರ್ವದಿಸಿದರು.

ದೇಶದ ಅಭಿವೃದ್ಧಿಗೆ ಯುವಕರ ಪಾತ್ರ ಮುಖ್ಯ: ರಾಜ್ಯಪಾಲರು ದೇಶದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ರಾಜ್ಯ ಉತ್ಸವ, ರಾಷ್ಟ್ರ ಉತ್ಸವ ಆಗಿ ಸಾಂಸ್ಕೃತಿಕ ,ಅಧ್ಯಾತ್ಮಿಕ ವಾಗಿ ಅವರ ಸೆಳೆಯುತ್ತದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಯುವಕರ ಪಾತ್ರ ಬಹುಮುಖ್ಯ. ನಮ್ಮ ಭಾರತ ಶ್ರೇಷ್ಠ ಭಾರತ. ಪ್ರತಿ‌ ವರ್ಷ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತವೆ , ಮಾರ್ಷಲ್ ಆರ್ಟ್ಸ್, ಯುವಕರ ಕಲಾಪ್ರದರ್ಶನದ ಕಾರ್ಯಾಗಾರಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಯುವಕ ಯುವತಿಯರನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಲು ಈ ರೀತಿಯ ಕಾರ್ಯಕ್ರಮ ಗಳು ಸಹಕಾರಿಯಾಗುತ್ತದೆ. ಆದಿಚುಂಚನಗಿರಿ ಮಠವೂ ಆಧ್ಯಾತ್ಮಿಕವಾಗಿ , ಶೈಕ್ಷಣಿಕವಾಗಿ ಎಲ್ಲಾ ರೀತಿಯಲ್ಲೂ ವಿದ್ಯಾರ್ಥಿಗಳ ಬಾಳನ್ನು ಬೆಳಗಲು , ಯುವಕರು ,ಯುವತಿಯರು ಸಾಮಾಜಿಕ‌ವಾಗಿ, ಆರ್ಥಿಕವಾಗಿ ಶಕ್ತಿಯುತವಾಗಲು ಆದಿ ಚುಂಚನಗಿರಿ‌ ಶ್ರಮಿಸುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಯುವಜನತೆಗೆ ಶಕ್ತಿ ತುಂಬಲು ಸರ್ಕಾರ ಬದ್ಧ: ಸಚಿವ ಡಾ.ನಾರಾಯಣಗೌಡ ಇದು ಯುವ ಸಬಲೀಕರಣ ‌ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಯುತ್ತಿರುವ 25 ನೇ ಕಾರ್ಯಕ್ರಮ. ಪುಣ್ಯಕ್ಷೇತ್ರ ಆದಿಚುಂಚನಗಿರಿ ಕ್ಷೇತ್ರದಲ್ಲಿ ಅದ್ದೂರಿಯಾಗಿ ಯುವ ಜನೋತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ಮಹಾಮಾರಿ ಕೊರೋನಾ ಭೀತಿಯಿಂದಾಗಿ ಸರಳವಾಗಿ ಆಚರಿಸಲಾಗುತ್ತಿದೆ. ಯುವಜನತೆಗೆ ಶಕ್ತಿಯನ್ನು ತುಂಬಲು ಸರ್ಕಾರ ಬದ್ದವಾಗಿದ್ದು, ಆರ್ ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ನೀಡುವ ಸಲಹೆಗಳನ್ನು ಸ್ವೀಕರಿಸಿ ನೀತಿಗಳನ್ನು ರಚಿಸಲಾಗುತ್ತದೆ. ನಮ್ಮ ಕ್ರೀಡಾ ಇಲಾಖೆಯಿಂದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ. ಮುಂದಿನ ಒಲಂಪಿಕ್‌ಗೆ ಕರ್ನಾಟಕದಿಂದ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಬೇಕೆಂಬ ಗುರಿ ಹೊಂದಲಾಗಿದ್ದು, ಅಮೃತ ಕ್ರೀಡಾ ದತ್ತು ಯೋಜನೆಯಲ್ಲಿ 75 ಕ್ರೀಡಾಪಟುಗಳನ್ನು ದತ್ತು ಪಡೆಯಲಾಗಿದೆ. ಕ್ರೀಡೆಗೆ ಹೆಚ್ಚಿನ ಶಕ್ತಿಯನ್ನು ತುಂಬಲು ನಮ್ಮ ಸರ್ಕಾರ ಬದ್ದವಾಗಿದೆ. ಕೊರೋನಾ ನಿಯಮಗಳನ್ನು ಪಾಲಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಸಚಿವ ಡಾ.ನಾರಾಯಣಗೌಡ ಅವರು ಕರೆ ನೀಡಿದರು.

ದೇಶದ ಪರಿವರ್ತನೆಗೆ ಯುವಶಕ್ತಿ ಮುಖ್ಯ: ಸಚಿವ ಸುನೀಲ್ ಕುಮಾರ್ಯು ವ ಮನಸ್ಸಿಗಳಿಗೆ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಯುವ ಜನೋತ್ಸವ ಹಮ್ಮಿಕೊಳ್ಳಲಾಗಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಯುವಕರು ಮನಸ್ಸು ಮಾಡಿದರೇ ಮಾತ್ರ ಪರಿವರ್ತನೆ ಸಾಧ್ಯ.. ಅಮೃತ ಮಹೋತ್ಸವದ ಸಂಭ್ರಮದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಪರಿವರ್ತನೆ ಆಗಬೇಕು. ಅದಕ್ಕಾಗಿ ಗ್ರಾಮಗ್ರಾಮಗಳಲ್ಲಿ ಯುವಕರು ಕಾರ್ಯಪ್ರವೃತ್ತರಾಗಬೇಕು. ಯುವ ಜನೋತ್ಸವವೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೇ ಸಮಾಜ ನಿರ್ಮಾಣದ ಪರಿಕಲ್ಪನೆಯೊಂದಿಗೆ ಯುವ ಸಂಘಟನೆಗಳು ಕಾರ್ಯನಿರ್ವಹಿಸಬೇಕು ಎಂದು ಸಚಿವ ವಿ ಸುನೀಲ್ ಕುಮಾರ್ ಹೇಳಿದರು.

ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸಲು ಯುವ ಜನೋತ್ಸವವನ್ನು ಆಚರಿಸಲಾಗುತ್ತಿದೆ. ಯುವ ಜನೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಗಾಯನ, ವಾದ್ಯ, ನೃತ್ಯ, ಏಕಾಂಕ ನಾಟಕ, ಆಶುಭಾಷಣ ಸ್ಪರ್ಧೆ ಸೇರಿದಂತೆ ಸುಮಾರು 18 ಪ್ರಕಾರದ ಕಾರ್ಯಕ್ರಮಗಳು ನಡೆಯಲಿದ್ದು, ಪ್ರತಿ ಜಿಲ್ಲೆಯಿಂದ ತಲಾ 57 ಸ್ಪರ್ಧಿಗಳಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸ್ಪರ್ಧಿಗಳು ಆಗಮಿಸಿದ್ದಾರೆ‌. ಸ್ಪರ್ಧೆಯಲ್ಲಿ‌ ವಿಜೇತರಾದ 100 ಜನರನ್ನು ಪುದುಚೇರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಕಳುಹಿಸಿಕೊಡಲಾಗುತ್ತದೆ. ಕಾರ್ಯಕ್ರಮದಲ್ಲಿ ಇಂಧನ ಸಚಿವರಾದ ವಿ ಸುನೀಲ್ ಕುಮಾರ್, ಯುವ ನೀತಿ ರಚನಾ ಸಮಿತಿ ಅಧ್ಯಕ್ಷರಾದ ಆರ್ ಬಾಲಸುಬ್ರಹ್ಮಣ್ಯಂ, ನಾಗಮಂಗಲ ಶಾಸಕ ಸುರೇಶ್ ಗೌಡ, ಮಂಡ್ಯ ಶಾಸಕ ಶ್ರೀನಿವಾಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆಯುಕ್ತ ಹೆಚ್ ಎನ್ ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಅಶ್ವತಿ ಅವರ ಜೊತೆ ಹಲವು ಗಣ್ಯರು ಪಾಲ್ಗೊಂಡಿದ್ರು.

ಯುವಜನೋತ್ಸವಕ್ಕೆ ಚಾಲನೆ ನೀಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಚುಂಚನಗಿರಿ ಆಗಮಿಸುತ್ತಿದ್ದಂತೆ ಪೂರ್ಣಕುಂಭದೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತವನ್ನು ನೀಡಲಾಯಿತು. ಮೆರವಣಿಗೆಯುದ್ದಕ್ಕೂ ಜಾನಪದ ಕಲಾಪ್ರಕಾರಗಳ ಮೇಳೈಸುವಿಕೆ ಗಮನ ಸೆಳೆಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪೂರ್ಣಕುಂಭ ಸ್ವಾಗತದ ಮೂಲಕ ಕಾಲಭೈರವನ ಸನ್ನಿಧಿಗೆ ತೆರಳಿದ ರಾಜ್ಯಪಾಲರು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯಪಾಲರಿಗೆ ಸಚಿವರಾದ ಕೆ.ಸಿ ನಾರಾಯಣಗೌಡ ಅವರು ಸಾಥ್ ನೀಡಿದರು.

ಕೊರೋನ ನಿಯಮ ಪಾಲನೆ: ಕೋರೊನಾ ಮಹಾಮಾರಿ ಭೀತಿಯಲ್ಲಿ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ‌. ವೇದಿಕೆಗೆ ಕಲಾವಿದರು ಸೇರಿದಂತೆ ಸಾರ್ವಜನಿಕರು ಆಗಮಿಸುವುದಕ್ಕೂ ಮೊದಲು ತಪಾಸಣೆಗೆ ಒಳಪಡಿಸಿ ಬಿಜಿಎಸ್ ಸಭಾ ಭವನಕ್ಕೆ ಬಿಡಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಗಣ್ಯರು, ಕಲಾವಿದರು ಮತ್ತು ಕಲಾಸಕ್ತರ ತಪಾಸಣೆಯನ್ನು ಹೆಬ್ಬಾಗಿಲಿನಲ್ಲೇ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಕೊರೋನ ನಿಯಮದೊಂದಿಗೆ ಕಾರ್ಯಕ್ರಮ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top