ಹೊಸಪೇಟೆ: “ರಾಜ್ಯ ಸರ್ಕಾರ ಕೇವಲ ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತಿಲ್ಲ. ಜನರಿಗೆ ‘ಭೂ ಗ್ಯಾರಂಟಿ’ ಯೋಜನೆ ಮೂಲಕ 1 ಕೋಟಿಗೂ ಹೆಚ್ಚು ಜನರಿಗೆ ಭೂ ದಾಖಲಾತಿ ಪತ್ರ ನೀಡಿ ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಜ್ಯ ಸರಕಾರಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಜಯನಗರದ ಹೊಸಪೇಟೆಯಲ್ಲಿ ನಡೆಯಲಿರುವ ಸಾಧನೆ ಸಮಾವೇಶದ ಪೂರ್ವಸಿದ್ಧತೆ ಪರಿಶೀಲನೆ ಬಳಿಕ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಸುದ್ದಿಗಾರರ ಜತೆ ಮಾತನಾಡಿದ ಅವರು, “ನೂರು ವರ್ಷಗಳಲ್ಲಿ ಮಾಡಲಾಗದ ಕೆಲಸವನ್ನು ನಮ್ಮ ಸರ್ಕಾರ ಕಂದಾಯ ಇಲಾಖೆ ಮೂಲಕ ಮಾಡಿ, ಹೊಸ ಇತಿಹಾಸ ಬರೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಲೋಪದೋಷಗಳಿವೆಯೇ ಇಲ್ಲವೇ ಎಂದು ಅಧಿಕಾರಿಗಳ ಜತೆ ಭಾನುವಾರ ನಡೆಸಿದ ಸಭೆಯಲ್ಲಿ ಪರಿಶೀಲನೆ ಮಾಡಲಾಗಿದೆ. ಕಂದಾಯ ಇಲಾಖೆಯ ಮೂಲಕ ನೀಡುತ್ತಿರುವ ಈ ಭೂ ಗ್ಯಾರಂಟಿ ಇತಿಹಾಸದ ಪುಟ ಸೇರಲಿದೆ. ಪ್ರತಿಯೊಬ್ಬ ವ್ಯಕ್ತಿಗೂ ತಾನು ವಾಸವಿರುವ ಜಾಗವನ್ನು ತನ್ನದಾಗಿಸಿಕೊಳ್ಳುವ ಆಸೆ ಇರುತ್ತದೆ. ಪರಿಶಿಷ್ಟರು, ಹಿಂದುಳಿದವರು ಹಾಗೂ ಭೂರಹಿತವಾಗಿರುವವರು ಕಳೆದ ಹಲವು ವರ್ಷಗಳಿಂದ ದಾಖಲೆ ಇಲ್ಲದೆ ಮನೆ ಕಟ್ಟಿಕೊಂಡು ಪರದಾಡುತ್ತಿದ್ದರು. ಹೀಗಾಗಿ ನಮ್ಮ ಸರ್ಕಾರ ಇದಕ್ಕೆ ಪರಿಹಾರ ನೀಡಿದೆ” ಎಂದರು.
“ಬಿಜೆಪಿ ಸರ್ಕಾರ ಕಲಬುರ್ಗಿಯಲ್ಲಿ 20 ಕೋಟಿ ಖರ್ಚು ಮಾಡಿ ದಾಖಲೆ ನೀಡುತ್ತೇವೆ ಎಂದು ಕಾರ್ಯಕ್ರಮ ಮಾಡಿತ್ತಾದರೂ ಇದನ್ನು ಕಾರ್ಯರೂಪಕ್ಕೆ ಹೇಗೆ ತರಬೇಕು ಎಂದು ತಿಳಿಯದೇ ಯೋಜನೆ ಕೈಬಿಟ್ಟಿತ್ತು. ಸಚಿವ ಕೃಷ್ಣ ಭೈರೇಗೌಡರು ಹಾಗೂ ಅವರ ಅಧಿಕಾರಿಗಳ ತಂಡ ಅಧ್ಯಯನ ಮಾಡಿ ಇದಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. 4 ಸಾವಿರ ಅಡಿವರೆಗಿನ ಕಂದಾಯ ಅಥವಾ ಖಾಸಗಿ ಭೂಮಿಯಲ್ಲಿ ಅನೇಕ ವರ್ಷಗಳಿಂದ ವಾಸವಿರುವ ಜಾಗವನ್ನು ಸರ್ಕಾರದ ವಶಕ್ಕೆ ಪಡೆದು, ತಹಶೀಲ್ದಾರ್ ಅದರ ಮಾಲೀಕತ್ವರಾಗಿ, ನಂತರ ಅವರ ಮೂಲಕ ಉಪ ನೋಂದಣಿ ಕಚೇರಿಯಲ್ಲಿ ಕ್ರಯದ ರೂಪದಲ್ಲಿ ಜನರಿಗೆ ಈ ಭೂಮಿಯನ್ನು ಉಚಿತವಾಗಿ ನೀಡುವ ವ್ಯವಸ್ಥೆ ತರಲಾಗಿದೆ. 1,11,11,111 ಆಸ್ತಿ ದಾಖಲೆ ಸಿದ್ಧವಾಗಿದ್ದು, ಆಯಾ ತಾಲೂಕುಗಳಲ್ಲಿ ತಹಶೀಲ್ದಾರ್ ಅವರು ಆಸ್ತಿಯ ದಾಖಲೆ ನೀಡಲಿದ್ದಾರೆ. ಈ ರೀತಿ ದಾಖಲೆ ಪಡೆದ ಆಸ್ತಿಯನ್ನು ಯಾರೂ 15 ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ. ಈ ದಾಖಲೆಗಳನ್ನು ತಹಶೀಲ್ದಾರ್ ಅವರು ನೋಂದಣಿ ಮಾಡಿ ಆಸ್ತಿ ಮಾಲೀಕರಿಗೆ ನೀಡುತ್ತಿದ್ದಾರೆ. ಪಿಡಿಒ ಇಲಾಖೆ ಜತೆಗೂಡಿ ಖಾತೆ ಮಾಡಿಸಿಕೊಡಲಾಗುವುದು. ಇದಕ್ಕೆ ನೀಡಬೇಕಾದ ಶುಲ್ಕ ಪಾವತಿಯನ್ನು ಮುಂದಕ್ಕೆ ಹಾಕಲಾಗಿದೆ” ಎಂದು ತಿಳಿಸಿದರು.
“ವಿಜಯನಗರ ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯನ್ನಾಗಿ ಮಾಡಿದ್ದು, 79 ಸಾವಿರ ರೈತರಿಗೆ ಪೋಡಿ ದಾಖಲೆ ನೀಡಲಾಗಿದೆ. ಇಡೀ ದೇಶಕ್ಕೆ ಇದು ಹೊಸ ಮಾದರಿ. ನಮ್ಮ ಸರ್ಕಾರ ಎರಡು ವರ್ಷ ಪೂರೈಸಿದ್ದು, ನಾವು ಕೇವಲ ಸಂಭ್ರಮಾಚರಣೆ ಮಾಡಲು ಈ ಕಾರ್ಯಕ್ರಮ ಮಾಡುತ್ತಿಲ್ಲ. ಜನರು ನಮಗೆ ಕೊಟ್ಟ ಅವಕಾಶ, ಆಶೀರ್ವಾದಕ್ಕೆ ಋಣ ತೀರಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ನಾವು ಕೇವಲ ಗ್ಯಾರಂಟಿ ಯೋಜನೆಗಳ ಮೇಲೆ, ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿಲ್ಲ. ಜನರ ಬದುಕು ಕಟ್ಟಿಕೊಟ್ಟು ರಾಜಕಾರಣ ಮಾಡುತ್ತಿದ್ದೇವೆ” ಎಂದು ಹೇಳಿದರು.
“ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗಮಿಸಲಿದ್ದಾರೆ. ನಮ್ಮ ಸರ್ಕಾರದ ಮಂತ್ರಿಗಳು ಶಾಸಕರು ಭಾಗವಹಿಸಲಿದ್ದಾರೆ. ವಿರೋಧ ಪಕ್ಷದ ಶಾಸಕರಿಗೂ ಗೌರವಯುತ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿಗಳೇ ಖುದ್ದಾಗಿ ವಿರೋಧ ಪಕ್ಷದ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಇಂದಿರಾಗಾಂಧಿ ಅವರು ಈ ಪುಣ್ಯ ಭೂಮಿಯಲ್ಲಿ ಬಂದು ಭಾಷಣ ಮಾಡಿದ್ದರು. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಇಂದಿರಾ ಗಾಂಧಿ ಅವರ ಪುತ್ಥಳಿ ನಿರ್ಮಿಸಿದ್ದಾರೆ. ಇದನ್ನು ಸಹ ಅನಾವರಣ ಮಾಡಲಾಗುವುದು” ಎಂದು ತಿಳಿಸಿದರು.