ಫೆ.10 ರಿಂದ ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ಕುಂಭಮೇಳ

Kannada Nadu
ಫೆ.10 ರಿಂದ ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ಕುಂಭಮೇಳ

ಬೆಂಗಳೂರು: ಫೆಬ್ರವರಿ 10ರಿಂದ ಮೂರು ದಿನಗಳ ಕಾಲ ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ಕುಂಭಮೇಳ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾಡಳಿತವು ಪೂರ್ವ ಸಿದ್ಧತೆಯನ್ನು ನಡೆಸಿದೆ. ಕರ್ನಾಟಕ ಸರ್ಕಾರ ಕುಂಭಮೇಳಕ್ಕಾಗಿ 6 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.ತಿ. ನರಸೀಪುರದಲ್ಲಿ ನಡೆಯುವ ಕುಂಭಮೇಳ-2025ಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿರುವ ಕುರಿತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.

ಕರುನಾಡಿನ ಐತಿಹಾಸಿಕ ಕುಂಭಮೇಳವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸುವ ಸಲುವಾಗಿ ಮಹತ್ವದ ನಿರ್ಧಾರವೊಂದರಲ್ಲಿ ರಾಜ್ಯ ಸರ್ಕಾರವು ತಿ. ನರಸೀಪುರದ ಕುಂಭಮೇಳಕ್ಕೆ 6 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.ತಿ.ನರಸೀಪುರದ ತ್ರಿವೇಣಿ ಸಂಗಮ ದಕ್ಷಿಣಕಾಶಿಯಲ್ಲಿ ನಡೆಯುವ ಕುಂಭಮೇಳ ಭಾರತೀಯರಿಗೆ ಸನಾತನ ಸಂಸ್ಕೃತಿ ಮತ್ತು ದಿವ್ಯ ಜೀವನ ಧರ್ಮವನ್ನು ಸಾರುವ ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದು ತಿಳಿಸಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಭಕ್ತರು, ಪ್ರವಾಸಿಗರು ಆಗಮಿಸುವುದರಿಂದ ನರಸೀಪುರ ಪಟ್ಟಣದಲ್ಲಿಯೇ ಸಕಲ ಸೌಲಭ್ಯಗಳನ್ನು ಕಲ್ಪಿಸಲು ತಯಾರಿ ಮಾಡಿಕೊಳ್ಳಲು ಈ ಅನುದಾನ ಬಳಸಿಕೊಳ್ಳಲಾಗುವುದು ಎಂದು ಸಚಿವರು ಪೋಸ್ಟ್ ಹಾಕಿದ್ದಾರೆ.

ಆರು ವರ್ಷಗಳ ಬಳಿಕ ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ಫೆಬ್ರವರಿ 10, 11 ಮತ್ತು 12ರಂದು ಕುಂಭಮೇಳ ನಡೆಯುತ್ತಿದೆ. ಇದು ತಿ. ನರಸೀಪುರದಲ್ಲಿ ನಡೆಯುತ್ತಿರುವ 12ನೇ ಕುಂಭಮೇಳವಾಗಿದೆ. 1989ರಿಂದ ಪ್ರತಿ ಮೂರು ವರ್ಷಗಳಿಗೊಮೆ ಕುಂಭಮೇಳ ಆಯೋಜನೆ ಮಾಡಲಾಗುತ್ತಿದೆ. 2021ರಲ್ಲಿ ಕೋವಿಡ್ ಕಾರಣದಿಂದಾಗಿ ಕುಂಭಮೇಳ ನಡೆಸಿರಲಿಲ್ಲ.

ಕುಂಭಮೇಳದ ಕುರಿತು ಮೈಸೂರು ಜಿಲ್ಲಾಡಳಿತ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆಯನ್ನು ನಡೆಸಿದೆ. ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಸ್ವಾಮೀಜಿಗಳಿಂದ ಮಾರ್ಗದರ್ಶನ ಪಡೆದಿದೆ.

ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿನಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ 2019ರಲ್ಲಿ ಯಶಸ್ವಿಯಾಗಿ 11ನೇ ಕುಂಭಮೇಳ ನಡೆದಿತ್ತು. ಆದರೆ ಕೋವಿಡ್ ಕಾರಣದಿಂದಾಗಿ 2021ರಲ್ಲಿ ಕುಂಭಮೇಳ ಆಯೋಜನೆ ಮಾಡಿರಲಿಲ್ಲ. ಈ ಬಾರಿ 12ನೇ ಕುಂಭಮೇಳ ನಡೆಯಲಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಜಲದರ್ಶಿನಿ ಅತಿಥಿ ಗೃಹದಲ್ಲಿ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಕುಂಭಮೇಳದ ಸಿದ್ಧತೆ ಕುರಿತು ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ನಮ ಸಂವಿಧಾನದಲ್ಲಿರುವ ಧಾರ್ಮಿಕ ಹಕ್ಕಿನ ಅನ್ವಯ ವೈಚಾರಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯಲ್ಲಿ ಉತ್ಸವ ಅಚರಿಸಲು ತೀರ್ಮಾನಿಸಿದ್ದು, ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯ, ಸೂಕ್ತ ಸಾರಿಗೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ, ಸಿಸಿಟಿವಿ ಕಣ್ಗಾವಲು, ಸ್ವಚ್ಛತೆಗೆ ಆದ್ಯತೆ ನೀಡುವುದು. ಸ್ನಾನಘಟ್ಟದಲ್ಲಿ ಪುಣ್ಯ ಸ್ನಾನ ಮಾಡುವವರಿಗೆ ಮುಂಜಾಗ್ರತಾ ಕ್ರಮ ಹಾಗೂ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆಗಳನ್ನು ಸಚಿವರು ಕೊಟ್ಟಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";