ಕನಕಪುರ ಸೇರಿ ರಾಮನಗರದ ಎಲ್ಲಾ ತಾಲೂಕುಗಳು ಬೆಂಗಳೂರಿಗೆ ಸೇರಿದ್ದು
ಬೆಂಗಳೂರು/ಮೈಸೂರು: “ರಾಮನಗರ ಬೆಂಗಳೂರಿನ ಭಾಗ. ನಂತರ ಅದು ಗ್ರಾಮಾಂತರ ಆಗಿ ಈಗ ಪ್ರತ್ಯೇಕ ಜಿಲ್ಲೆ ಆಗಿದೆ. ಕುಮಾರಸ್ವಾಮಿಗೆ ಸಾಮಾನ್ಯ ಪರಿಜ್ಞಾನ ಇಲ್ಲವಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಕನಕಪುರ ಬೆಂಗಳೂರಿಗೆ ಸೇರಿದ್ದು ಎಂಬ ತಮ್ಮ ಹೇಳಿಕೆಗೆ ಕುಮಾರಸ್ವಾಮಿ ಅವರ ಟೀಕೆ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಹಾಗೂ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ವೇಳೆ ಶಿವಕುಮಾರ್ ಅವರು ಹೇಳಿದ್ದಿಷ್ಟು:
“ದೇಶದಲ್ಲಿ ವಿದ್ಯಾವಂತರು, ಬುದ್ದಿವಂತರು ಇಲ್ಲದಿದ್ದರೂ ಪ್ರಜ್ಞಾವಂತರು ಇರಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದವರು, ಅವರಿಗೆ ಸಾಮಾನ್ಯ ಪರಿಜ್ಞಾನ ಇದೆ ಎಂದು ಭಾವಿಸಿದ್ದೆ. ಆದರೆ ಇಲ್ಲ. ಇಂತಹ ವಿಚಾರವಾಗಿ ಅವರ ತಂದೆ ಅವರನ್ನಾದರೂ ಕೇಳಿ ಅವರು ಟ್ವೀಟ್ ಮಾಡಬೇಕಿತ್ತು.
ಹಿರಿಯರಾದ ದೇವೇಗೌಡರಿಗೆ ರಾಮನಗರದಲ್ಲಿ ಇರುವವರು ಯಾರು? ರಾಮನಗರ ಜಿಲ್ಲೆ ಇತಿಹಾಸವೇನು ಎಂಬುದು ಗೊತ್ತಿದೆ.
ಕುಮಾರಸ್ವಾಮಿ ಮಾತಾಡಿದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಭಾಗದ ಅಭಿವೃದ್ಧಿಗೆ ನಮ್ಮ ಬಳಿ ನೀಲನಕ್ಷೆ ಇದೆ. ಅಧಿಕಾರದಲ್ಲಿ ಇದ್ದಾಗ ನಾನು ಹಾಗೂ ನಮ್ಮ ಸರ್ಕಾರ ಜನರಿಗೆ ಏನು ಮಾಡುತ್ತೇವೆ ಎಂಬುದು ಮುಖ್ಯ.
ರಾಮನಗರ ಜಿಲ್ಲೆ ಮಾಡಿದ್ದು, ಮೂರು ಕಟ್ಟಡ ನಿರ್ಮಾಣ ಮಾಡಿದ್ದಕ್ಕೆ ಕುಮಾರಸ್ವಾಮಿ ಕ್ರೆಡಿಟ್ ತೆಗೆದುಕೊಳ್ಳಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ರಾಮನಗರದ ನಾಲ್ಕೈದು ತಾಲೂಕು ಬೆಂಗಳೂರಿನದ್ದು. ಈ ಬಗ್ಗೆ ಕುಮಾರಸ್ವಾಮಿ ದಾಖಲೆ ತೆಗೆಸಿ ನೋಡಲಿ. ಶ್ರೀ ಬಾಲಗಂಗಧರನಾಥ ಸ್ವಾಮೀಜಿ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿಗಳು, ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಅವರು ರಾಮನಗರ ಜಿಲ್ಲೆಯವರು.
ಮೂಲತಃ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಆಡಳಿತಾತ್ಮಕ ದೃಷ್ಟಿಯಿಂದ ನಂತರ ಇದು ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಆಯಿತು.
ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರದಲ್ಲಿ ಕೋವಿಡ್ ನಂತರ ಅನೇಕರು ತಮ್ಮ ಆಸ್ತಿ ಮಾರಿಕೊಳ್ಳುತ್ತಿದ್ದಾರೆ. ರಾಮನಗರ, ಮಾಗಡಿ, ಚನ್ನಪಟ್ಟಣದ ಜನರಿಗೂ ನಾನು ಆಸ್ತಿ ಮಾರಿಕೊಳ್ಳಬೇಡಿ ಎಂದು ಸಲಹೆ ನೀಡುತ್ತೇನೆ. ನಾನು ಮೊದಲು ಸಾತನೂರಿನಲ್ಲಿದ್ದೆ. ಕನಕಪುರಕ್ಕೆ ಬಂದ ನಂತರ ಇಲ್ಲಿನ ಭೂಮಿಯ ಮೌಲ್ಯ ಎಷ್ಟು ಏರಿಕೆಯಾಗಿದೆ, ಏನು ಬದಲಾವಣೆ ಆಗಿದೆ ಎಂದು ನಮಗೆ ಗೊತ್ತಿದೆ.
ನಿಮಗೆ ಇತಿಹಾಸ ಎಷ್ಟು ಗೊತ್ತಿದೆಯೊ ನನಗೆ ತಿಳಿದಿಲ್ಲ. ಕನಕಪುರ ಲೋಕಸಭಾ ಕ್ಷೇತ್ರ ಎಂದು ಆ ಕಾಲದಲ್ಲಿ ಯಾಕೆ ಇಟ್ಟರು? ಈಗ ಏಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಎಂದು ಚುನಾವಣಾ ಆಯೋಗದವರು ಹೆಸರು ಇಟ್ಟಿದ್ದಾರೆ? ಯಾವುದಾದರೂ ಬೇರೆ ಹೆಸರು ಇಡಬಹುದಿತ್ತಲ್ಲವೇ?
ಹೊಸಕೋಟೆ, ದೇವನಹಳ್ಳಿ, ಮಾಗಡಿ, ಆನೇಕಲ್, ಚನ್ನಪಟ್ಟಣ, ದೊಡ್ಡಬಳ್ಳಾಪುರ, ರಾಮನಗರ, ಕನಕಪುರ ಇದೆಲ್ಲಾ ಮೂಲತಃ ಬೆಂಗಳೂರು ಜಿಲ್ಲೆ. ಈ ಊರನ್ನು ಕಟ್ಟಿದ್ದು, ಹೆಸರನ್ನು ಕೊಟ್ಟಿದ್ದು ಕೆಂಪೇಗೌಡರು. ವಿಧಾನಸೌಧ ಕಟ್ಟಿದ್ದು ಕೆಂಗಲ್ ಹನುಮಂತಯ್ಯ ಅವರು. ಈ ಹೆಸರನ್ನು ಉಳಿಸಬೇಕೆಂಬುದು ನಮ್ಮ ಭಾವನೆ.
ಕುಮಾರಸ್ವಾಮಿ ಅವರು ಈ ಭಾಗಕ್ಕೆ ಬರಲಿಲ್ಲವೇ? ಇಲ್ಲಿ ಆಸ್ತಿ ತೆಗದುಕೊಂಡಿಲ್ಲವೇ? ನಾವು ಯಾವತ್ತಾದರೂ ತಕರಾರು ಮಾಡಿದ್ದೇವೆಯೇ?
ವಿದ್ಯಾ ಕ್ಷೇತ್ರಕ್ಕೆ ನಮ್ಮ ಎಷ್ಟು ಆಸ್ತಿಯನ್ನು ದಾನ ಮಾಡಿದ್ದೇವೆ ಎನ್ನುವುದು ಏನಾದರೂ ನಿಮಗೆ ಗೊತ್ತಿದೆಯೇ? ನನ್ನ ಜನರು 1,23,000 ಅಂತರದಿಂದ ಗೆಲ್ಲಿಸಿದ್ದಾರೆ ಎಂಬುದು ಗೊತ್ತಿದೆಯೇ? ನನ್ನ ಖಾತೆಗೆ, ಬೇರೆಯವರ ಖಾತೆಗೆ ಏನು ಬರುತ್ತದೆ ಎನ್ನುವ ಬಗ್ಗೆ ಆನಂತರ ಮಾಹಿತಿ ನೀಡೋಣ.
ಯಾವ, ಯಾವ ತಾಲ್ಲೂಕಿನಲ್ಲಿ ಏನೇನು ನಡೆದಿದೆ ಎಂಬುದು ವಿಧಾನಸಭೆಯಲ್ಲಿ ಚರ್ಚೆಯಾಗಲಿ. ಇಲ್ಲಿ ಪತ್ರಿಕಾ ಮಾಧ್ಯಮದಲ್ಲಿ ಚರ್ಚೆಯಾಗುವುದು ಬೇಡ. ಅಲ್ಲಿ ದಾಖಲಾಗಲಿ. ನೀವು ಸಿದ್ಧತೆ ಮಾಡಿಕೊಂಡು ಬನ್ನಿ, ನಾನು ಸಹ ಸಿದ್ಧತೆ ಮಾಡಿಕೊಂಡು ಬರುತ್ತೇನೆ. ನೀವು ಏನೇನು ಹೇಳಬೇಕೊ ಎಲ್ಲಾ ಹೇಳಿ, ಅದೆಷ್ಟು ಗಂಟೆಗಳ ಕಾಲ ಬೇಕಾದರೂ ಚರ್ಚೆ ನಡೆಯಲಿ. ನಾನು ಸಿದ್ದನಿದ್ದೇನೆ.
ಇದು ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ ಕ್ಷೇತ್ರದ ಸ್ವಾಭಿಮಾನಿಗಳ ಬದುಕಿನ ವಿಚಾರ. ನಾನು ಆ ಕ್ಷೇತ್ರವನ್ನು ಪ್ರತಿನಿಧಿಸುವವನು, ಆ ಕ್ಷೇತ್ರದ ಜನರ ಶ್ರೇಯಸ್ಸನ್ನು ಬಯಸುವುದು ನನ್ನ ಕರ್ತವ್ಯ.
ನಾನು ಹೇಳಿದ ಈ ಭಾಗಗಳು ಬೆಂಗಳೂರದ್ದಲ್ಲವೇ? ಗೆಜೆಟಿಯರ್ ತೆಗೆದು ತೋರಿಸಲೆ? ಅವರಿಗೆ ಇತಿಹಾಸದ ಅರಿವಿಲ್ಲವೇ?
ನನ್ನ ಮಾತಿನ ಅರ್ಥ ಕನಕಪುರವನ್ನು ಮಾತ್ರ ಬೆಂಗಳೂರಿಗೆ ಸೇರಿಸುತ್ತೇನೆ ಎಂದಲ್ಲ. ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣದ ನಾವೆಲ್ಲರೂ ಬೆಂಗಳೂರಿನವರು, ನಮ್ಮ ಆ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದು ಅರ್ಥ.
ಈ ಮೊದಲು ಆ ಭಾಗದಲ್ಲಿ 2-3 ಲಕ್ಷಕ್ಕೆ ಜಮೀನು ಸಿಗುತ್ತಿತ್ತು. ನೀವು ರಾಮನಗರದಲ್ಲಿ ಜಮೀನು ತೆಗದುಕೊಂಡಿರಲ್ಲ ಕುಮಾರಣ್ಣ, ಅದಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ, ಎಷ್ಟಕ್ಕೆ ನೋಂದಣಿ ಆಗಿದೆ ಎಂದು ನಿಮ್ಮ ತಂದೆಯರನ್ನು ಕೇಳಿನೋಡಿ? ಈಗೆಷ್ಟು ಗೈಡೆನ್ಸ್ ವ್ಯಾಲ್ಯೂ ಇದೆ ಎಂಬ ಮಾಹಿತಿ ತೆಗೆದುಕೊಳ್ಳಿ.
ನಮ್ಮ ಊರಿನ, ಬೆಂಗಳೂರಿನ ಹೆಸರನ್ನು ಉಳಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ಈ ಪ್ರಶ್ನೆಯನ್ನ ನಾನು ನಿಮಗೆ ಕೇಳುತ್ತಿಲ್ಲ, ನನ್ನ ಜನರಿಗೆ ಕೇಳುತ್ತಿದ್ದೇನೆ.
ನಮ್ಮ ತಂದೆ ದೊಡ್ಡಾಲಹಳ್ಳಿ ಎಂದು ಹೆಸರಲ್ಲಿ ಸೇರಿಸಿದ್ದಾರೆ? ನನ್ನ ಹೆಸರಿನ ಪಕ್ಕ ‘ಡಿ.ಕೆ.’ ಎಂದು ಏಕೆ ಸೇರಿಸಿದ್ದಾರೆ? ನಿಮ್ಮ ಹೆಸರಿನ ಮುಂದೆ ‘ಎಚ್.ಡಿ’ ಎಂದು ಏಕೆ ಇಟ್ಟುಕೊಂಡಿದ್ದಿeರಿ? ದೇವೇಗೌಡರು ಎಂದು ತಂದೆ ಹೆಸರು ಏಕೆ ಸೇರಿಸಿಕೊಂಡಿರಿ? ಹರದನಹಳ್ಳಿ ಅಥವಾ ಹೊಳೆನರಸೀಪುರ ಎಂದು ಬದಲಾಯಿಸಿ ಕೊಳ್ಳಬಹುದಿತ್ತಲ್ಲವೇ?
If you forget the route, you will not get the fruit ಎಂಬಂತೆ ಎಲ್ಲರಿಗೂ ಅವರ ಊರು, ಆಚಾರ, ವಿಚಾರ, ಇತಿಹಾಸವನ್ನ ಕಾಪಾಡಬೇಕು ಎನ್ನುವ ಆಸೆಯಿರುತ್ತದೆ. ಈ ವಿಚಾರದಲ್ಲಿ ನಾನು ತೊಡಗಿಕೊಂಡಿದ್ದೇನೆ, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾತನಾಡುತ್ತಾ ಹೋಗುತ್ತೇನೆ.”
ನಿಜವಾದ ಮೀರ್ ಸಾದಿಕ್ ಯಾರು?
ನಮ್ಮ ನಾಡಿನ ಮುಖ್ಯಮಂತ್ರಿಗಳಿಗೆ ‘ಮೀರ್‌ಸಾಧಿಕ್’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಅವರು ಹಾರ್ವರ್ಡ್ ವಿವಿಯಲ್ಲಿ ಡಾಕ್ಟರೇಟ್ ತೆಗೆದುಕೊಂಡಿರಬೇಕು ಎಂದು ಕಾಣುತ್ತದೆ.
ಕುಮಾರಸ್ವಾಮಿ ಅವರೇ ತಮ್ಮ ನುಡಿಮುತ್ತುಗಳನ್ನು ವಿಧಾನಸಭೆಯಲ್ಲೇ ಮಂಡಿಸಿದ್ದೀರಿ. ನಿಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತೆಗೆದವರು ಸಿದ್ದರಾಮಯ್ಯ ಎಂದು ಒಂದಷ್ಟು ದಿನ, ಡಿ.ಕೆ.ಶಿವಕುಮಾರ್ ಎಂದು ಮತ್ತೊಂದಷ್ಟು ದಿನ ಹೇಳುತ್ತೀರಿ.
ಆದರೆ, ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ರಾಜಿನಾಮೆ ನೀಡಿದ ನಂತರ, “ಈ ಸರ್ಕಾರ ಬೀಳಲು ಯಡಿಯೂರಪ್ಪ ಅವರು ಮತ್ತು ಅವರ ಎಲ್ಲಾ ಸಹೋದ್ಯೋಗಿಗಳು ಹಣಕೊಟ್ಟು, ಪಿತೂರಿ ನಡೆಸಿದ್ದರು ಎನ್ನುವ ಭಾಷಣ ಮಾಡಿ ಸಾಕ್ಷಿ ಗುಡ್ಡೆಯನ್ನು ಬಿಟ್ಟು ಹೋಗಿದ್ದೀರಿ. ಅದು ಮರೆತು ಹೋಯಿತೇ”.
ನಾವು ಕೊಟ್ಟ ಬೆಂಬಲವನ್ನು ಉಳಿಸಿಕೊಳ್ಳಲಾಗದೆ, ಸರ್ಕಾರವನ್ನು ಉರುಳಿಸಲು ಹಗಲು-ರಾತ್ರಿ ಶ್ರಮಪಟ್ಟ ಬೆಳಗಾವಿ, ಚನ್ನಪಟ್ಟಣ ಹಾಗೂ ಬೆಂಗಳೂರಿನವನ ಜೊತೆ ಸೇರಿದ್ದೀರಿ. ನಿಮ್ಮ ರಾಜಕಾರಣದ ಮೌಲ್ಯ ಏನಾಯಿತು?
ಯಾರು ನಿಮ್ಮ ಬೆನ್ನಿಗೆ ಚೂರಿ ಹಾಕಿದರು, ಸರ್ಕಾರವನ್ನು ಬೀಳಿಸಿದರು, ಅವರ ಜೊತೆ ಕೈ ಜೋಡಿಸಿದ್ದೀರಲ್ಲ. 17 ಜನ ರಾಷ್ಟ್ರೀಯ ನಾಯಕರುಗಳು ಬಂದು ಆಶೀರ್ವಾದ ಮಾಡಿದಂತಹ ಸರ್ಕಾರವನ್ನು ಉಳಿಸಿಕೊಳ್ಳಲು ನಿಮ್ಮಿಂದ ಸಾಧ್ಯ ಆಗಲಿಲ್ಲ.
ನಿಮ್ಮ ಜೊತೆ ಹಗಲು- ರಾತ್ರಿ ಬೆನ್ನಿಗೆ ನಿಂತುಕೊಂಡ, ಅಂದು ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ರಾತ್ರೋರಾತ್ರಿ ರಾಜ್ಯಪಾಲರನ್ನು ಭೇಟಿಮಾಡಿ, ತಾವು ಯಾವುದೇ ಹುದ್ದೆಗಳನ್ನು ಅಲಂಕರಿಸದೆ, ಯಾವುದೇ ಷರತ್ತುಗಳನ್ನು ವಿಧಿಸದೆ, ಐದು ವರ್ಷಗಳ ಕಾಲ ನೀವೇ ಮುಖ್ಯಮಂತ್ರಿಗಳಾಗಿ ಎಂದು ಆಶೀರ್ವಾದ ಮಾಡಿದರು.
ನಿಮಗೆ ಬೆಂಬಲ ನೀಡಿದ ಕಾಂಗ್ರೆಸ್ ಪಕ್ಷದ 80 ಜನ ಶಾಸಕರ ಉಪಕಾರಕ್ಕೆ ಕೃತಜ್ಞತೆ ಬೇಡವೇ? ಮಾನ್ಯತೆ ಬೇಡವೇ?.
ನಿಮ್ಮನ್ನು ಅಧಿಕಾರದಿಂದ ಇಳಿಸಿದವರ ಜೊತೆ ಸೇರಿ ಈಗ ಸಿದ್ದರಾಮಯ್ಯ ಅವರನ್ನು ‘ಮೀರ್‌ಸಾಧಿಕ್’ ಎನ್ನುತ್ತಿದ್ದೀರಲ್ಲ ಇದು ನ್ಯಾಯವೇ? ನಿಜವಾದ ಮೀರ್‌ಸಾಧಿಕ್ ಯಾರು? ಎಂಬುದು ಜನರಿಗೆ ಅರಿವಾಗುತ್ತಿದೆ.
ಬನ್ನಿ, ವಿಧಾನಸಭೆಯಲ್ಲಿ ಮಾತನಾಡೋಣ. ಇಲ್ಲಿ ಕೇವಲ ಮಾಧ್ಯಮಗಳ ಮುಂದೆ ಮಾತನಾಡಿದರೆ ಟೀಕೆಗಳು ಬೇಗ ಸತ್ತು ಹೋಗುತ್ತವೆ. ಅಧಿವೇಶನದಲ್ಲಿ ಮಾತನಾಡಿದರೆ ದಾಖಲೆಗಳಲ್ಲಿ ಉಳಿಯುತ್ತದೆ. ಇಂದು ನಾನು ಪತ್ರಿಕಾಗೋಷ್ಠಿಯಲ್ಲಿ ಏನು ಮಾತನಾಡುತ್ತಿದ್ದೇನೆ, ಅದನ್ನು ಸೇರಿ ಬೆಳಗಾವಿಯ ಅಧಿವೇಶನದಲ್ಲಿ ಎಲ್ಲ ವಿಚಾರವನ್ನು ದಾಖಲೆಗೆ ತರೋಣ.
ಯಾವುದೇ ಚರ್ಚೆಗೆ ಬನ್ನಿ ಎಂದರೆ ನೀವಿಬ್ಬರು ಮಾಧ್ಯಮಗಳ ಮುಂದೆ ಬರುವುದಿಲ್ಲ. ಇಂದು ನಾನು ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ, ಇನ್ನೊಂದು ಪಕ್ಷದ ಅಧ್ಯಕ್ಷರು ಹಾಗೂ ಮಾಜಿ ಸಿಎಂ ಜೊತೆ ಚರ್ಚೆಗೆ ಕುಳಿತುಕೊಳ್ಳಲು ಸಿದ್ಧನಿದ್ದೇನೆ.
ಇಷ್ಟು ದಿನ ನನ್ನ ಸಮಾಜದ ಹಿರಿಯರು ಮಾತನಾಡಬೇಡಿ ಎಂದು ನನಗೆ ಹೇಳುತ್ತಿದ್ದರು. ಆದ ಕಾರಣ ನಾನು ಇಷ್ಟು ದಿನ ಧಮ್ ತಡೆದುಕೊಂಡು ಇದ್ದೆ. ಆದರೆ ನಿಮಗೆ ಹೇಗೆ ಸ್ವಾಭಿಮಾನ ಇರುತ್ತದೆಯೋ ಅದರಂತೆ ನಮಗೂ ಸ್ವಾಭಿಮಾನ ಇರುತ್ತದೆಯಲ್ಲವೇ ಕುಮಾರಣ್ಣ?
ಕಳೆದ ವರ್ಷ ಈ ಪವಿತ್ರ ದಿನದಂದು ಭಾರತ ಜೋಡೋ ಯಾತ್ರೆಯಲ್ಲಿ ಹೆಜ್ಜೆ, ಇಂದು ವಿಜಯದಶಮಿಯ ಮಾರನೆಯ ದಿನ. ಕಳೆದ ವರ್ಷ ಚಾಮರಾಜನಗರದ ಗುಂಡ್ಲುಪೇಟೆ ಮೂಲಕ ಬದನವಾಳಿಗೆ ಭೇಟಿ ನೀಡಿ, ಮೈಸೂರಿಗೆ ಬಂದು, ಕರ್ನಾಟಕದಲ್ಲಿ ಹೆಜ್ಜೆ ಹಾಕಿದ ದಿನ.
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಈ ಮೂರು ಜನರು ಪವಿತ್ರವಾದ ನವರಾತ್ರಿಯ ದಿನ ಈ ನೆಲದಲ್ಲಿ ಹೆಜ್ಜೆ ಹಾಕಿದರು. ಸೋನಿಯಾ ಗಾಂಧಿ ಅವರು ಎಚ್.ಡಿ.ಕೋಟೆಯ ಒಂದು ಹಳ್ಳಿಗೆ ಹೋಗಿ ದಸರಾ ಆಚರಣೆ ಮಾಡಿದರು.
ತಾಯಿ ಚಾಮುಂಡಿ ಆಶೀರ್ವಾದದಿಂದ ನಾವು ಇಂದು ದೇವಿಗೆ ಪುಷ್ಪಾರ್ಚನೆ ಮಾಡಿದ್ದೇವೆ.
ಪ್ರಶ್ನೋತ್ತರ
ರಾಮನಗರಕ್ಕೆ ಶಿವಕುಮಾರ್ ಕೊಡುಗೆ ಏನು ಎಂದು ಕೇಳುತ್ತಿದ್ದಾರೆ ಎನ್ನುವ ಪ್ರಶ್ನೆಗೆ “ರಾಮನಗರಕ್ಕೆ ನನ್ನದಲ್ಲ, ನಿಮ್ಮ ಕೊಡುಗೆ ಏನು ಎಂಬುದನ್ನು ವಿಧಾನಸಭೆಗೆ ತೆಗೆದುಕೊಂಡು ಬನ್ನಿ ಅಣ್ಣಾ!. ರಾಜ್ಯದ ಜನ ಎರಡು ಬಾರಿ ನಿಮ್ಮನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದ್ದಾರೆ. ನಾನು ಕೇವಲ ಉಪಮುಖ್ಯಮಂತ್ರಿ” ಎಂದು ಸವಾಲು ಹಾಕಿದರು.
ರಾಮನಗರ ಚಿತ್ರಣವನ್ನು ಒಂದು ಜನ್ಮವಲ್ಲ, ಏಳು ಜನ್ಮವಾದರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರು ಟ್ವೀಟ್ ಮಾಡಿರುವ ಬಗ್ಗೆ ಕೇಳಿದಾಗ “ಅವರಿಗೆ ತಲೆಕೆಟ್ಟಿದೆಯೇ, ಯಾರಾದರೂ ತಲೆಕೆಟ್ಟಿರುವವರು ಈ ರೀತಿ ಮಾತನಾಡಬೇಕಷ್ಟೇ. ಚಿತ್ರಣ ಬದಲು ಮಾಡಲು ಆಗುವುದಿಲ್ಲ ಎಂದು ಸುಮ್ಮನೆ ಹೇಳುವವರು ಮೆಂಟಲ್ ಗಿರಾಕಿಗಳು. ರಾಮನಗರ ಮೂಲತಃ ಬೆಂಗಳೂರಿನದ್ದು, ನಾನು ಇದು ಒಂದಾಗಿರಬೇಕು, ಬೆಂಗಳೂರಿನ ಒಳಗಿರಬೇಕು ಎಂದು ಬಯಸುತ್ತಿದ್ದೇನೆ. ಚನ್ನಪಟ್ಟಣ ಗಡಿ, ಸಾವನದುರ್ಗದಿಂದ ಹಿಡಿದು, ಕೆಂಪೇಗೌಡರು ಎಲ್ಲೆಲ್ಲಿ ಗಡಿ ಬರೆದಿದ್ದಾರೋ ಅದೆಲ್ಲವೂ ಬೆಂಗಳೂರೇ. ಬ್ರಿಟೀಷರು ಕೂಡ ಗಡಿ ಗುರುತು ಮಾಡಿದ್ದಾರೆ.
ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ, ಹಾರೋಹಳ್ಳಿ ಒಟ್ಟು 5 ತಾಲ್ಲೂಕುಗಳಿವೆ. ಹಾರೋಹಳ್ಳಿಯನ್ನ ಕುಮಾರಸ್ವಾಮಿ ಅವರೇ ತಾಲೂಕಾಗಿ ಮಾಡಿದ್ದು. ಕನಕಪುರದ ಎರಡು ಹೋಬಳಿಯನ್ನೇ ತಾಲ್ಲೂಕಾಗಿ ಮಾಡಿದ್ದಾರೆ” ಎಂದರು.
ಆಸ್ತಿ ಮೌಲ್ಯವನ್ನು ಹೆಚ್ಚಿಸಿ ನೀವೇ ಜಾಸ್ತಿ ಹಣ ಮಾಡಲು ಹೊರಟಿದ್ದೀರಿ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ ಎಂದಾಗ “ಜನರ ಆಸ್ತಿ ಮೌಲ್ಯ ಹೆಚ್ಚಾಗಬಾರದೇ? ಬೆಂಗಳೂರು ಸುತ್ತಾ ಇರುವ ಜನರ ಆಸ್ತಿ ಮೌಲ್ಯ ಹೆಚ್ಚಾದರೆ ಯಾರಿಗೆ ಅನುಕೂಲ? ಮಾಜಿ ಸಿಎಂ ಬಂಗಾರಪ್ಪ ಅವರು, ನಾನು ಅರ್ಜಿ ಹಾಕದೇ ಇದ್ದರು ಒಂದು ಸೈಟ್ ನೀಡಿದ್ದರು. ಅದರ ಈಗಿನ ಮೌಲ್ಯ 6 ಕೋಟಿ ಆಗಿದೆ. ನಾನು ಪಾಲಿಸಿದ್ದನ್ನೆ ಜನರಿಗೆ ಸಲಹೆ ನೀಡಿದ್ದೇನೆ ತಪ್ಪೇನು?” ಎಂದರು
1983 ಕ್ಕಿಂತ ಮುಂಚಿತವಾಗಿ ಅಂದರೆ ದೇವೆಗೌಡರು ಲೋಕೋಪಯೋಗಿ ಸಚಿವರಾಗುವುದಕ್ಕೆ ಮುಂಚಿತವಾಗಿ ಕನಕಪುರದಲ್ಲಿ ಒಂದೇ ಒಂದು ರಸ್ತೆ ಇರಲಿಲ್ಲ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ ಎಂದು ಕೇಳಿದಾಗ, “ಇದರ ಬಗ್ಗೆ ಎಲ್ಲೆಲ್ಲೊ ಚರ್ಚೆ ನಡೆಸಲು ಹೋಗುವುದಿಲ್ಲ. ಗಾಳಿಯಲ್ಲಿ ಗುಂಡು ಹೊಡೆದರೆ ಆಗುವುದಿಲ್ಲ. ಯಾವುದೇ ಟಿವಿ ಮಾಧ್ಯಮದಲ್ಲಿ ನಾನು ನೇರವಾಗಿ ಚರ್ಚೆಗೆ ತಯಾರಿದ್ದೇನೆ. ಎರಡು ಮೂರು ದಿನ ಸಮಯ ಕೊಡಿ, ನಾನು ಬಹಿರಂಗ ಚರ್ಚೆಗೆ ಸಿದ್ದ.
ಕಲ್ಲು ಹಿಡಿದು ಹಾಕಿದ್ದೇನೆ, ಚಿತ್ರ ಮಾಡಿದ್ದೇನೆ ಎಂದು ಹೇಳುತ್ತಿದ್ದಾರಲ್ಲ ಈ ಬಹಿರಂಗ ಚರ್ಚೆಗೆ ನಾನು ತಯಾರಾಗಿದ್ದೇನೆ” ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ಇರುವ ಕಾರಣ ಒಕ್ಕಲಿಗ ನಾಯಕತ್ವಕ್ಕೆ ಜಟಾಪಟಿ ನಡೆಯುತ್ತಿದೆಯೇ ಎನ್ನುವ ಪ್ರಶ್ನೆಗೆ “ನಾನು ಬರೀ ಒಕ್ಕಲಿಗ ನಾಯಕನಲ್ಲ, ಕಾಂಗ್ರೆಸ್ ಪಕ್ಷದ ನಾಯಕ. ನಾನು ಜಾತಿ ರಾಜಕಾರಣ ಮಾಡುವವನಲ್ಲ. ನಾನು ನೈತಿಕ, ಹಾಗೂ ಸಿದ್ದಾಂತದ ಮೇಲೆ, ಮೌಲ್ಯಗಳ ಮೇಲೆ ರಾಜಕಾರಣ ಮಾಡುವವನು” ಎಂದು ಸ್ಪಷ್ಟನೆ ನೀಡಿದರು.