ಬೆಂಗಳೂರು: ಸೆಪ್ಟೆಂಬರ್‌ನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ ಎಂದು ಕಾಂಗ್ರೆಸ್‌ನ ಶಾಸಕ ಕೆ.ಎನ್.ರಾಜಣ್ಣ ನೀಡಿದ್ದ ಮುನ್ಸೂಚನೆಗೆ ಅನುಗುಣವಾಗಿ ರಾಜಕೀಯದಲ್ಲಿ ಹಲವಾರು ಬೆಳವಣಿಗೆಗಳು ನಡೆಯುತ್ತಿದ್ದು, ಇವು ತೀವ್ರ ಕುತೂಹಲಕ್ಕೆ ಕಾರಣವಾಗಿವೆ.
ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಜೊತೆ ಮಹತ್ವದ ಮಾತುಕತೆ ನಡೆಸಿದ್ದು, ರಾಜ್ಯ ರಾಜಕಾರಣದ ಬಗ್ಗೆ ಗಹನವಾಗಿ ಚರ್ಚಿಸಿದ್ದಾರೆ. ಈ ಹಿಂದೆ ಗೋವಾ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ರಾಜಕೀಯ ಪಲ್ಲಟಗಳ ಹಿನ್ನೆಲೆಯಲ್ಲಿ ಈ ಭೇಟಿ ಭಾರೀ ಜಿಜ್ಞಾಸೆಗೆ ಕಾರಣವಾಗಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ವರದಿ ನೀಡುವಂತೆ ಗುಪ್ತಚರ ಇಲಾಖೆಗೆ ಸೂಚನೆ ನೀಡಿರುವುದು ಸಹ ರಾಜಕೀಯ ಚರ್ಚೆಗಳು ಗರಿಗೆದರುವಂತೆ ಮಾಡಿವೆ.
ಕೆ.ಎನ್.ರಾಜಣ್ಣ ಸೆಪ್ಟೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ನಡೆಯಲಿದೆ ಎಂದು ಹೇಳಿದ್ದರು. ಅದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪದತ್ಯಾಗಕ್ಕೆ ಸಂಬಂಧಪಟ್ಟಂತೆ ರಾಜಣ್ಣ ಹೇಳಿಕೆ ನೀಡಿರಬಹುದು ಎಂದು ಹಲವಾರು ಮಂದಿ ವಿಶ್ಲೇಷಿಸಿದ್ದರು. ಅದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಬೆಂಬಲಿಗರು, ರಾಜಣ್ಣ ಅವರ ವಿರುದ್ಧ ಮುಗಿ ಬಿದ್ದಿದ್ದರು. ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಗಳನ್ನು ಆರಂಭಿಸಲಾಗಿತ್ತು. ತರುವಾಯ ಹೈಕಮಾಂಡ್ ಮಧ್ಯ ಪ್ರವೇಶಿಸಿ ಎಲ್ಲವನ್ನೂ ಶಮನಗೊಳಿಸಿತ್ತು.
ಆದರೂ ರಾಜಣ್ಣ ಅವರ ಹೇಳಿಕೆಯನ್ನು ಅಷ್ಟು ಸುಲಭವಾಗಿ ಅಲ್ಲಗೆಳೆಯುವಂತಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಬೆಳವಣಿಗೆಗಳ ಮೇಲೆ ನಿಗಾ ಇರಿಸುವಂತೆ ಗುಪ್ತಚರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುಪ್ತಚರ ಇಲಾಖೆ ಸ್ವಪಕ್ಷದ ಶಾಸಕರೂ ಹಾಗೂ ಸಚಿವರ ಚಟುವಟಿಕೆಗಳ ಮೇಲೆಯೇ ತೀವ್ರ ನಿಗಾವಹಿಸಿದೆ. ಈ ಮಧ್ಯೆ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಗೋವಾ ಮುಖ್ಯಂತ್ರಿ ಪ್ರಮೋದ್ ಸಾವಂತ್ ಅವರು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ತಲ್ಲಣವನ್ನುಂಟು ಮಾಡಿದೆ.
ಇದರಿಂದ ಕರ್ನಾಟಕ ಕಾಂಗ್ರೆಸ್‌ನಲ್ಲಾಗುತ್ತಿರುವ ಆಂತರಿಕ ಬೆಳವಣಿಗೆಗಳ ರಾಜಕೀಯ ಲಾಭ ಪಡೆಯಲು ಎನ್‌ಡಿಎ ನಾಯಕರು ಯತ್ನಿಸುತ್ತಿದ್ದಾರೆಯೇ ಎಂಬ ಸಂದೇಹ ವ್ಯಕ್ತವಾಗುತ್ತಿದೆ.
ಉಭಯ ನಾಯಕರು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯವಾಗಿ ಭಾರಿ ಕುತೂಹಲ ಕೆರಳಿಸಿದೆ. ಸಾವಂತ್ ಮತ್ತು ಕುಮಾರಸ್ವಾಮಿ ಅವರು ದೇಶದ ಹಾಗೂ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಾಗುತ್ತಿರುವ ರಾಜಕೀಯ ವಿದ್ಯಮಾನಗಳ ಕುರಿತಂತೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಾಗುತ್ತಿರುವ ಬೆಳವಣಿಗೆಯ ಕುರಿತು ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ಎನ್‌ಡಿಎ ಜತೆ ಜೆಡಿಎಸ್ ಮೈತ್ರಿಯಾಗುವ ಸಂದರ್ಭದಲ್ಲಿ ಸಾವಂತ್ ಮಹತ್ತರ ಪಾತ್ರ ವಹಿಸಿದ್ದರು. ಇದಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು.
ಅದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರೊಂದಿಗೆ ಷಾ ಪ್ರತ್ಯೇಕ ಮಾತುಕತೆ ನಡೆಸಿದ್ದರು. ರಾಜಣ್ಣ ಹೇಳಿಕೆ ಆಧರಿಸಿ, ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಕಾಂಗ್ರೆಸ್‌ನಲ್ಲಿ ಬಿರುಗಾಳಿಯೇ ಬೀಸಲಿದೆ ಎಂಬೆಲ್ಲ ವ್ಯಾಖ್ಯಾನ ಮಾಡಿದ್ದರು.
ಈಗ ರಾಜಣ್ಣ ಸಂಪುಟದಿಂದ ವಜಾಗೊಂಡಿದ್ದು, ಅವರು ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್‌ನ ಶಾಸಕರೂ ಆಗಿರುವ ಡಿ.ಕೆ.ಶಿವಕುಮಾರ್ ಅವರ ಪರಮಾಪ್ತ ಎಚ್.ಸಿ. ಬಾಲಕೃಷ್ಣ ಬಹಿರಂಗ ಪಡಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ, ನಿಗಮಮಂಡಳಿಗಳ ಅಧ್ಯಕ್ಷ ಸ್ಥಾನ ಸೇರಿದಂತೆ ಅಧಿಕಾರ ದೊರೆಯದೇ ಹತಾಶರಾಗಿರುವ ಅನೇಕ ಮಂದಿ ಶಾಸಕರು ಒಳಗೊಳಗೆ ಕುದಿಯುತ್ತಿದ್ದಾರೆ. 140 ಶಾಸಕರ ಸಂಖ್ಯಾಬಲದ ಭರ್ಜರಿ ಬಹುಮತ ಇದೆ ಎಂಬ ಅತಿಯಾದ ಆತವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರು ಬೀಗುತ್ತಿದ್ದು, ಮತ್ತೊಂದೆಡೆ ಒಳಗೊಳಗೆ ಅನಪೇಕ್ಷಣಿಯ ಬೆಳವಣಿಗೆಗಳು ನಡೆಯುತ್ತಿವೆ.
ಮಾಜಿ ಸಚಿವ ಕೆ.ಎನ್. ರಾಜಣ್ಣ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ತತ್ವ, ಸಿದ್ಧಾಂತಕ್ಕೆ ವಿರುದ್ಧವಾಗಿ ಹೇಳಿಕೆಗಳನ್ನು ನೀಡುತ್ತಿರುವ, ಪಕ್ಷದ ನಾಯಕತ್ವಕ್ಕೆ ವಿರುದ್ಧವಾಗಿರುವವರ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿರುವ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.