ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಬಣ್ಣಿತವಾಗಿರುವ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಬುಧವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ವಿವಿಧ ಮಠಗಳ ಹರ-ಗುರು-ಚರ ಮೂರ್ತಿಗಳ ಸಮ್ಮುಖದಲ್ಲಿ ಹಿಂದುಸ್ತಾನಿ ಗಾಯಕ
ಪಂಡಿತ್ ವೆಂಕಟೇಶ ಕುಮಾರ್ ಅವರು ಮಹಾರಥೋತ್ಸವಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಮಹಾರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ನೆರೆದಿದ್ದ ಲಕ್ಷಾಂತರ ಭಕ್ತರು ರಥಕ್ಕೆ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಜಯ ಶ್ರೀ ಗವಿಸಿದ್ದೇಶ ಎಂದ ಭಕ್ತರ ನಾಮಸ್ಮರಣೆ ಮುಗಿಲುಮುಟ್ಟಿತ್ತು.ಮಹಾರಥೋತ್ಸವದಲ್ ಲಿ ಪಾಲ್ಗೊಂಡಿದ್ದ ಹರ-ಗುರು-ಚರ ಮೂರ್ತಿಗಳು ಕೊಪ್ಪಳ ಶ್ರೀ ಗವಿಮಠದ ಜಾತ್ರೆಯಲ್ಲಿ ನೆರೆದಿದ್ದ ಭಕ್ತ ಸಮೂಹವನ್ನು ಕಂಡು ಮನದುಂಬಿ ಕೊಂಡಾಡಿದರು. ಮಹಾರಥೋತ್ಸವಕ್ಕೆ ರಾಜ್ಯದ ಅನೇಕ ಕಡೆಯಿಂದ ಮೂಲೆ ಮೂಲೆಗಳಿಂದ ಬಂದಿದ್ದ ಭಕ್ತರನ್ನು ಭಕ್ತಿಯ ಸಾಗರದಲ್ಲಿ ತೇಲುವಂತೆ ಮಾಡಿತು. ಮಹಾರಥವು ಪಾದಗಟ್ಟೆಯನ್ನು ತಲುಪಿ ಮತ್ತೆ ಸ್ವಸ್ಥಾನಕ್ಕೆ ಬಂದಾಗ ಭಕ್ತರ ಭಕ್ತಿ ಮುಗಿಲು ಮುಟ್ಟಿತ್ತು. ರಥೋತ್ಸವಕ್ಕೆ ಹರಿದು ಬಂದಿದ್ದ ಜನಸಾಗರ, ಅವರ ಉದ್ಘೋಷಗಳನ್ನು ನೇರವಾಗಿ ಕಾಣೋದೆ ಒಂದು ಪುಣ್ಯ ಎಂಬಂತಿತ್ತು. ಜಾತ್ರೆಯಲ್ಲಿ ನಾಡಿನ ಹೆಸರಾಂತ ಶ್ರೀಗಳು ಮಹಾರಥೋತ್ಸವಕ್ಕೆ ಸಾಕ್ಷಿಯಾದರು. ಬಳಿಕ ಕೈಲಾಸ ಮಂಟಪದಲ್ಲಿ ಸಂಗೀತ ಕಾರ್ಯಕ್ರಮಗಳು ಜರುಗಿದವು. ಇನ್ನು ಮಹಾದಾಸೋಹ ಮಂಟಪದಲ್ಲಿ ಉತ್ತರ ಕರ್ನಾಟಕ ಶೈಲಿಯ ವಿವಿಧ ತರಹದ ಬಗೆ ಬಗೆಯ ಪ್ರಸಾದವನ್ನೂ ವಿತರಿಸಲಾಯಿತು.
ಜಾತ್ರೆಯಲ್ಲಿ ಸಚಿವರಾದ ಶಿವರಾಜ ತಂಗಡಗಿ, ಸಂಸದ ಕೆ. ರಾಜಶೇಖರ್ ಹಿಟ್ನಾಳ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ, ಬಿಜೆಪಿ ರಾಜ್ಯಾಧ್ಯಕ್ಷ ವಿಜೇಯಂದ್ರ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವರಾದ ಹಾಲಪ್ಪ ಆಚಾರ್, ಅಮೇರೇಗೌಡ ಪಾಟೀಲ ಬಯ್ಯಾಪೂರು, ಜಿಲ್ಲಾಧಿಕಾರಿ ನಳಿನ್ ಅತುಲ್, ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೇಯ, ಐಜಿಪಿ ಲೋಕೇಶ ಕುಮಾರ, ಎಸ್ ಪಿ ಶ್ರೀರಾಮ ಅರಸಿದ್ದಿ ಸೇರಿದಂತೆ ಇತರ ಅಧಿಕಾರಿಗಳು ಸೇರಿದಂತೆ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.