ಕೊಪ್ಪಳ: ಕೃಷಿ ಜಮೀನಿಗೆ ರಸ್ತೆ ಬಿಡಿ, ಬಗರ್ ಹುಕುಂ ಜಮೀನನ್ನು ಆರು ತಿಂಗಳೊಳಗೆ ಮಂಜೂರು ಮಾಡಿ: ಕೃಷ್ಣ ಬೈರೇಗೌಡ

ಅಣೆಕಟ್ಟೆಗಳ ನೀರಿನ ನಿರ್ವಹಣೆ ಬಗ್ಗೆ ಎಚ್ಚರ ಇರಲಿ

ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿ

ಬೆಳೆ ಸಮೀಕ್ಷೆ ಮುಗಿಸಿ, ಫ್ರೂಟ್ಸ್ ನಲ್ಲಿ ನಮೂದಿಸಲು ಕಾಲಮಿತಿ

ಕಂದಾಯ ಗ್ರಾಮ ಘೋಷಣೆಗೆ ತಾಕೀತು

ಕೊಪ್ಪಳ:  ಕೃಷಿ ಜಮೀನಿಗೆ ರೈತರು ಓಡಾಡಲು ರಸ್ತೆ ಕಲ್ಪಿಸಿಕೊಡಿ, ಬಾಕಿ ಇರುವ ಬಗರ್ ಹುಕುಂ ಅರ್ಜಿಗಳ ಪೈಕಿ ಅರ್ಹ ರೈತರಿಗೆ ಮುಂದಿನ ಆರು ತಿಂಗಳ ಒಳಗಾಗಿ ಸಾಗುವಳಿ ಚೀಟಿ ನೀಡಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ತಾಕೀತು ಮಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ತಮ್ಮದೇ ಕೃಷಿ ಭೂಮಿಗೆ ಓಡಾಡಲು ರೈತರಿಗೆ ರಸ್ತೆ ಇಲ್ಲದೆ ಸಾಕಷ್ಟು ತಿಂದರೆಗೀಡಾಗಿದ್ದರು.‌ ಈ ಸಮಸ್ಯೆಯನ್ನು ನೀಗಿಸುವ ಸಲುವಾಗಿಯೇ ಕಳೆದ‌ ವಾರ ರೈತರ ಕೃಷಿ ಭೂಮಿಗೆ ರಸ್ತೆ ಒದಗಿಸಬೇಕು ಎಂದು ಹೊಸ ಸುತ್ತೋಲೆ ಹೊರಡಿಸಲಾಗಿದೆ.

 

ಅಧಿಕಾರಿಗಳನ್ನು ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಪ್ರಸ್ತುತ ಎಲ್ಲಾ ರೈತರ ಕೃಷಿ ಭೂಮಿಗೆ ರಸ್ತೆ ಒದಗಿಸಬೇಕು. ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ಮುನ್ನ ಅಂತಹ ಪ್ರದೇಶಗಳಲ್ಲೂ ಕೃಷಿ ಭೂಮಿಗೆ ರಸ್ತೆ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ, ಮುಂದಿನ ಆರು ತಿಂಗಳ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಬಗರ್ ಹುಕುಂ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಮುಂದುವರೆದು, “ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ನಿಜಕ್ಕೂ ಉಳುಮೆಯಲ್ಲಿ ತೊಡಗಿರುವ ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಬೇಕು ಎಂದು ಅವರು ತಾಕೀತು ಮಾಡಿದರು.

ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಆ್ಯಪ್‌

ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸಹ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಅಲ್ಲದೆ, ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ.

ಹೀಗಾಗಿ ಬಗರ್ ಹುಕುಂ ತಂತ್ರಾಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ನ್ಯಾಯಸಮ್ಮತವಾಗಲಿದೆ. ಅಲ್ಲದೆ, ಶೀಘ್ರ ಪ್ರಕ್ರಿಯೆಗೂ ಈ ಆ್ಯಪ್ ಸಹಕಾರಿಯಾಗಲಿದೆ.

 

ಶೀಘ್ರದಲ್ಲೇ ಈ ಆ್ಯಪ್‌ ಅಧಿಕಾರಿಗಳ ಕೈಸೇರಲಿದೆ. ಈ ಆ್ಯಪ್‌ ಸಹಾಯದೊಂದಿಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ಬಹರ್ ಹುಕುಂ ಅರ್ಜಿ ವಿಲೇವಾರಿಗೊಳಿಸಬಹುದು. ಅಲ್ಲದೆ, ಅರ್ಜಿ ವಿಲೇವಾರಿಯಾದ ನಂತರ ಅರ್ಹ ಫಲಾನುಭವಿಗಳಿಗೆ ಇ-ಸಾಗುವಳಿ ಚೀಟಿಯನ್ನೂ ತಂತ್ರಾಂಶದ ಮೂಲಕವೇ ಒದಗಿಸಬಹುದು. ಕಾವೇರಿ 2.0 ಮೂಲಕ ನೋಂದಣಿ ಮಾಡಿಸಿಕೊಟ್ಟರೆ ಜನರಿಗೂ ಅನುಕೂಲವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಅಣೆಕಟ್ಟೆ ನೀರಿನ ನಿರ್ವಹಣೆ ಬಗ್ಗೆ ಇರಲಿ ಎಚ್ಚರ!

ಅಣೆಕಟ್ಟೆಗಳಲ್ಲಿ ನೀರಿನ ಸ್ವೇಚ್ಚಾಚಾರದ ನಿರ್ವಹಣೆಯಿಂದ ಇಂದು ಕುಡಿಯುವ ನೀರಿಗೂ ಸಮಸ್ಯೆ ಎದುರಿಸುವಂತಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

 “ಕಳೆದ ವರ್ಷ ರಾಜ್ಯದಲ್ಲಿ ಅತ್ಯುತ್ತಮ ಮಳೆ ಆಗಿತ್ತು. ಆದರೆ, ನೀರನ್ನು ಬೇಕಾಬಿಟ್ಟಿಯಾಗಿ ಬಳಸಿದ ಕಾರಣ ಜೂನ್ ತಿಂಗಳಿಗೇ ಸಮಸ್ಯೆ ಉಂಟಾಗಿತ್ತು. ಇದು ನಿಜಕ್ಕೂ ಸ್ವೇಚ್ಚಾಚಾರದ ನಡವಳಿಕೆ” ಎಂದು ಕಿಡಿಕಾರಿದರು.

ಈ ವರ್ಷ ಉತ್ತಮ ಮಳೆಯಾಗಿಲ್ಲ. ಈ ವರ್ಷವೂ ಸಹ ಅಧಿಕಾರಿಗಳು ಅಂತಹದ್ದೇ ನಡವಳಿಕೆ ಮುಂದುವರೆಸಿದರೆ, ಏಪ್ರಿಲ್-ಮೇ ತಿಂಗಳಿಗೆ ಅಣೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಇಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಲಿದೆ.‌ ಇದರಿಂದ ಅಕ್ಕಪಕ್ಕದ ಜಿಲ್ಲೆಗಳಿಗೂ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ

ಕೊಪ್ಪಳ ಭಾಗದಲ್ಲಿ ಎಲ್ಲೇ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

ಈ ವರ್ಷ ಬರಗಾಲ ಎದುರಾಗಿದೆ. ಮುಂದಿನ ಬೇಸಿಗೆ ಅಥವಾ ಅದಕ್ಕೂ ಮುನ್ನವೇ ಹಾವೇರಿ ಭಾಗದ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ.‌ಕೊಪ್ಪಳದ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂದು ಸರ್ವೆ ನಡೆಸಿ ನೀರಿನ ಸಮಸ್ಯೆ ಕಂಡುಬರುವ ಕಡೆಗಳಲ್ಲಿ ಖಾಸಗಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸಿ. ಯಾವ ಭಾಗದಲ್ಲೂ ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಿ ಎಂದರು.

 

ಕುಡಿಯುವ ನೀರಿಗಾಗಿ ಈಗಾಗಲೇ ಸರ್ಕಾರ ಹಣ ಬಿಡುಗಡೆಮಾಡಿದೆ.‌ ಜಿಲ್ಲಾಧಿಕಾರಿ ಖಾತೆಯಲ್ಲಿ 19.5 ಕೋಟಿ ಹಣ ಇದೆ. ಈ ಹಣವನ್ನು ಬಳಸಿಕೊಳ್ಳಬಹುದು. ಮುಂಜಾಗ್ರತಾ ಕ್ರಮವಾಗಿ ಇಲಾಖೆ ವತಿಯಿಂದಲೇ ಬೋರ್ ಕೊರೆಸಲು ಸಹ ಪಿಡಿಎಂ ಗಳು ಪಾಯಿಂಟ್ ಗುರುತಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಬೆಳೆ ಸಮೀಕ್ಷೆ ಮುಗಿಸಿ, ರೈತರಿಗೆ ಪರಿಹಾರ ತಲುಪಿಸಿ

ಬೆಳೆ ಪರಿಹಾರ ಆನ್‌ಲೈನ್ ಮೂಲಕವೇ ರೈತರಿಗೆ ತಲುಪಲಿದ್ದು, ಅವರ ಮಾಹಿತಿ ಬಿಟ್ಟುಹೋದರೆ ಮ್ಯಾನ್ಯುವಲ್ ಆಗಿ ಅವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಹೀಗಾಗಿ ಶೇ.100 ರಷ್ಟು ಎಲ್ಲಾ ರೈತರ ಬೆಳೆ ಸಮೀಕ್ಷೆ ನಡೆಸಿ ಅವರಿಗೆ ನ್ಯಾಯಯುತ ಪರಿಹಾರ ತಲುಪಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಈ ವರ್ಷ ಇತಿಹಾಸ ಕಾಣದ ಬರಕ್ಕೆ ತುತ್ತಾಗಿದೆ. ಮಳೆ ಇಲ್ಲದ ಕಾರಣ ರೈತರು ಪರಿತಪಿಸುವಂತಾಗಿದೆ. ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ. ಆದರೆ, ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಬೆಳೆ ಸಮೀಕ್ಷೆ ಅಗತ್ಯ.

ಅಧಿಕಾರಿಗಳು ಕೊಪ್ಪಳದಲ್ಲಿ ಈಗಾಗಲೇ ಶೇ.98 ರಷ್ಟು ಬೆಳೆ ಸಮೀಕ್ಷೆ ನಡೆಸಿದ್ದೀರಿ. ಆದರೆ, ರೈತರ ಎಲ್ಲಾ ಮಾಹಿತಿಯನ್ನೂ ‘ಫ್ರೂಟ್ಸ್’ ತಂತ್ರಾಂಶದಲ್ಲಿ ನಮೂದಿಸಿ ಈ ವಾರದೊಳಗೆ ಈ ಎಲ್ಲಾ ಕೆಲಸಗಳನ್ನು ಮುಗಿಸಿ ಎಂದು ಗಡುವು ನೀಡಿದರು.

ಕಂದಾಯ ಗ್ರಾಮ ಘೋಷಿಸಿ, ಬಡವರಿಗೆ ನ್ಯಾಯ ಸಲ್ಲಿಸಿ:

ಕಂದಾಯ ಗ್ರಾಮಗಳನ್ನು ಶೀಘ್ರ ಘೋಷಿಸಿ ಬಡವರಿಗೆ ನೆಮ್ಮದಿಯ ಬದುಕು ಮಾಡಲು ಬಿಡಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆದ ಸಚಿವರು, “ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು.

ಸಾರ್ವಜನಿಕರ 30 ವರ್ಷಗಳ ಬೇಡಿಕೆಗೆ ಅನುಗುಣವಾಗಿ 2013ರ ಕಾಂಗ್ರೆಸ್ ಸರ್ಕಾರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ನಿರ್ಧಾರ ತೆಗದುಕೊಂಡಿದ್ದರು. ಆದರೆ, ಕೊಪ್ಪಳದಲ್ಲಿ ಈ ಸಂಬಂಧ ಗಮನಾರ್ಹ ಕೆಲಸ ಆಗದಿರುವುದು ವಿಷಾಧನೀಯ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು.

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 36 ಕಂದಾಯ ಗ್ರಾಮಗಳು ರಚನೆಯಾಗಬೇಕಿತ್ತು. ಆದರೆ, ಈವರೆಗೆ  27 ಗ್ರಾಮಗಳಿಗೆ ಮಾತ್ರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ ಗ್ರಾಮಗಳನ್ನು ಕಂದಾಯ ಗ್ರಾಮಗಳು ಎಂದು ಘೋಷಿಸಿ ಹಕ್ಕುಪತ್ರ ನೀಡುವುದು ಯಾವಾಗ? ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇ ಆಫೀಸ್ ಶೇ.100 ರಷ್ಟು ಬಳಕೆಗೆ ತಾಕೀತು!

 

ಸಭೆಯ ವೇಳೆ ಇ-ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನಗೊಂಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ಎಲ್ಲಾ ಕಡತಗಳೂ ಇ-ಆಫೀಸ್ ಮೂಲಕ ವಿಲೇವಾರಿಯಾಗುತ್ತಿಲ್ಲ ಎಂದು ಬೇಸರ ಹೊರಹಾಕಿದರು. ಇ-ಆಫೀಸ್ ಮೂಲಕ ಕಡತ ವಿಲೇವಾರಿಗೆ ಮುಂದಾದರೆ, ಎಲ್ಲಾ ಕೆಲಸಗಳೂ ವೇಗ ಪಡೆಯುತ್ತದೆ. ಅಧಿಕಾರಿಗಳ-ಜನರ ಸಮಯವೂ ಉಳಿಯುತ್ತದೆ. ಹೀಗಾಗಿ ಶೀಘ್ರದಲ್ಲಿ ಕೊಪ್ಪಳದಲ್ಲಿ  ಇ-ಆಫೀಸ್ ಅನ್ನು ಶೇ.100 ರಷ್ಟು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top