ಹಸ್ತಕ್ಕೆ ಆಪರೇಷನ್ ಮಾಡಲು ಗೊತ್ತಿದೆ : ಸಿ.ಟಿ.ರವಿ

ಬೆಂಗಳೂರು : ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ಅತಿಯಾಗಿ ವರ್ತಿಸಿದರೆ ಹಸ್ತಕ್ಕೆ ಆಪರೇಷನ್ ಹೇಗೆ ಮಾಡಬೇಕೆಂದು ನಮಗೆ ಗೊತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ ಅವರು ಎಚ್ಚರಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಸ್ತಕ್ಕೆ ಆಪರೇಷನ್ ಮಾಡಿದರೆ ಏನಾಗುತ್ತದೆ ಎಂಬುದನ್ನು ನಾನೀಗ ಹೇಳುವುದಿಲ್ಲ. ನಮಗೆ ಹಿಂದೆ 104 ಸೀಟು ಬಂದಿತ್ತು. ಯಾರಿಗೂ ಬಹುಮತ ಇರಲಿಲ್ಲ. ಕಾಂಗ್ರೆಸ್- ಜೆಡಿಎಸ್ ಸೇರಿ ಸರಕಾರ ನಡೆಸಿದ್ದವು. 3 ತಿಂಗಳಿಗೇ ನಿಮ್ಮದು ಅಧ್ವಾನ ಆಗಿತ್ತು. ಒಬ್ಬರಿಗೆ ಒಬ್ಬರನ್ನು ಕಂಡರೆ ಆಗದ ಸ್ಥಿತಿ ಇತ್ತು ಎಂದು ವಿವರಿಸಿದರು. ಅದರ ಪರಿಣಾಮವಾಗಿ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಆದರೂ ಎರಡೂ ಪಕ್ಷಗಳು ಹೀನಾಯವಾಗಿ ಸೋತಿದ್ದವು ಎಂದು ಗಮನ ಸೆಳೆದರು.

ಅನಿಶ್ಚಿತತೆ, ಅರಾಜಕೀಯ ಪರಿಸ್ಥಿತಿ ಬಂದಾಗ ಶಾಸಕರಿಗೆ ಬಿಜೆಪಿಯೇ ಪರ್ಯಾಯ ಎನಿಸಿತ್ತು. ಈಗ ಪೂರ್ಣ ಬಹುಮತ ಇದೆ. ಅತಿಯಾಗಿ ಮಾಡಲು ಹೋದರೆ ಪರಿಸ್ಥಿತಿ ಕೆಟ್ಟದ್ದಾಗಲಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತ ಪಡೆದು ಆಡಳಿತ ನಡೆಸುತ್ತಿದೆ. ಒಳ್ಳೆಯ ಆಡಳಿತ ನಡೆಸುವ ಗುರಿ ಇಟ್ಟುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಇಲ್ಲದೇ ಇರುವುದನ್ನು ಮಾಡಲು ಹೊರಟರೆ ಸುಮ್ಮನೆ ಕುಳಿತುಕೊಳ್ಳುವವರು ನಾವಲ್ಲ. ನಾವೇನಾದರೂ ಮಾಡಿದರೆ ಮೇಲೇಳಲು ಆಗಲ್ಲ ಎಂದು ಎಚ್ಚರಿಕೆ ನೀಡಿದರು. ನಾವೇನು ಮಾಡುತ್ತೇವೆಂದು ಹೇಳುವುದಿಲ್ಲ. ಮುಟ್ಟಿನೋಡುವಂತೆ ಮಾಡುತ್ತೇವೆ ಎಂದರು.

ನಾವು ಮಾಡಿದಾಗ ಆಪರೇಷನ್ ಎನ್ನುತ್ತಾರೆ. ಅದೆಲ್ಲ ಪಟ್ಟಿ ನಮ್ಮಲ್ಲಿದೆ. ಅದನ್ನು ಮುಖಕ್ಕೆ ಹಿಡಿಯಬಯಸುತ್ತೇವೆ. ತಮ್ಮ ಪಕ್ಷದ ಹಿರಿಯ ಶಾಸಕರನ್ನು ಹಿಡಿದಿಡಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದೆ. ನಮ್ಮ ಪಕ್ಷ ಬಿಟ್ಟು ಯಾರೂ ಹೋಗುವುದಿಲ್ಲ ಎಂದು ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಇವತ್ತು 4 ಜನ ಸಚಿವರು ಪತ್ರ ಬರೆದಿದ್ದಾರೆ. ಎಲ್ಲವೂ ಸರಿ ಇದ್ದರೆ ಯಾಕೆ ಪತ್ರ ಬರೆಯುತ್ತಾರೆ ಎಂದು ಕೇಳಿದರು.

ಎಲ್ಲವೂ ಸರಿ ಇಲ್ಲದಾಗ ರಾಜಕೀಯದಲ್ಲಿ ಪ್ರೇಮಪತ್ರಗಳು ಶುರುವಾಗುತ್ತವೆ. ಈಗ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿ ಇಲ್ಲವೆಂದು ಸಚಿವರು, ಶಾಸಕರೇ ಹೇಳುವಾಗ ಯಾರೂ ಅಲ್ಲಿಗೆ ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ಮೀರಿ ಅತಿರೇಕಕ್ಕೆ ಕೈ ಹಾಕಿದರೆ ನಮಗೂ ಏನು ಮಾಡಬೇಕೆಂದು ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.

ನಮಗೆ ಪಾರ್ಟಿ ಕಟ್ಟಲು ಗೊತ್ತು. ಅದನ್ನು ಉಳಿಸಿಕೊಳ್ಳುವುದೂ ಗೊತ್ತು. ಅಡ್ಡ ಬಂದವರಿಗೆ ಹೇಗೆ ಉತ್ತರ ಕೊಡಬೇಕೆಂದು ಗೊತ್ತಿದೆ ಎಂದು ಸವಾಲೆಸೆದರು. ನಾವು ರಾಜಕೀಯ ದೃಷ್ಟಿಯಿಂದ ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ರಾಜಕೀಯದ ಪಗಡೆ ದಾಳ ಏಕಮುಖ ಅಲ್ಲ; ಚೆಸ್ ಏಕಮುಖ ಅಲ್ಲ. ನಮಗೆ ಚೆಕ್‍ಮೇಟ್ ಮಾಡಲು ಬಂದರೆ ನಾವೂ ಚೆಕ್‍ಮೇಟ್ ಮಾಡಲು ಸಿದ್ಧರಿದ್ದೇವೆ ಎಂದು ಮಾರ್ಮಿಕವಾಗಿ ತಿಳಿಸಿದರು.

ಸೈನಿಕನಿಗೆ ಚೆಕ್‍ಮೇಟ್ ಮಾಡುವುದಿಲ್ಲ. ನಮ್ಮ ಚೆಕ್‍ಮೇಟ್ ರಾಜನಿಗೇ ಇರುತ್ತದೆ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಡಿಸಿಎಂ ಆಗಿದ್ದಾರೆ. ತಮ್ಮ ಹುದ್ದೆಯ ಜವಾಬ್ದಾರಿಯಿಂದ ಮಾತನಾಡಲಿ. ಆ ದಿನಗಳ ಧ್ವನಿ ಅವರದಾಗಬಾರದು ಎಂದು ಪ್ರಶ್ನೆಗೆ ಉತ್ತರಿಸಿದರು.

ನೀವು ಮೊದಲು ಲೋಕಾಯುಕ್ತಕ್ಕೆ ಬಾಗಿಲು ಹಾಕಿದ್ದಿರಿ. ಕೇಸು ಮುಚ್ಚಿಹಾಕಲು ಎಸಿಬಿ ತಂದಿದ್ದೀರಿ. ಅರ್ಕಾವತಿ 8 ಸಾವಿರ ಕೋಟಿ ಕುರಿತ ನನ್ನ ಆರೋಪಕ್ಕೆ ಒಂದು ಶಬ್ದದಲ್ಲಾದರೂ ಪ್ರತಿಕ್ರಿಯೆ ಕೊಟ್ಟಿದ್ದೀರಾ ಎಂದು ಕಾಂಗ್ರೆಸ್ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು. ಇದ್ದ ಮೂವರಲ್ಲಿ ಕದ್ದವರ್ಯಾರು? ಎಂದು ಕೇಳಿದರು.

ಈಗ ಅವರು ಪ್ರಾಮಾಣಿಕರಲ್ಲವೇ? ಪ್ರಧಾನಿ ಹುದ್ದೆಗೆ ಟವೆಲ್ ಹಾಕಿದ್ದಾರಲ್ಲವೇ? ಎಂದು ಪ್ರಶ್ನಿಸಿದರಲ್ಲದೆ, ದೇವೇಗೌಡರೇ ಪ್ರಧಾನಿ ಆಗಿದ್ದಾರೆ; ಸಿದ್ದರಾಮಯ್ಯ ಯಾಕಾಗಬಾರದು ಎಂದು ವಿಶ್ವನಾಥ್ ಹೇಳಿದ್ದಾರೆ. ಈ ಮೂಲಕ ಪ್ರಿಯಾಂಕ ಮತ್ತು ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ ಎಂದು ವಿಶ್ಲೇಷಿಸಿದರು.

 

ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಗುವುದಿಲ್ಲ ಬಿಡಿ; ನರೇಂದ್ರ ಮೋದಿಜಿಯೇ ಮತ್ತೆ ಪ್ರಧಾನಿ ಆಗಲಿದ್ದಾರೆ. ಕಳೆದ ಸಾರಿಗಿಂತ ಹೆಚ್ಚು ಮೆಜಾರಿಟಿ ಬರಲಿದೆ. ಆದರೆ, ಕಾಂಗ್ರೆಸ್ಸಿನೊಳಗೆ ಪ್ರಿಯಾಂಕ ಮತ್ತು ರಾಹುಲ್ ಗಾಂಧಿಯ ನೇತೃತ್ವವನ್ನು ಒಪ್ಪುವುದಿಲ್ಲ ಎಂಬ ಸಂದೇಶವನ್ನು ಸಿದ್ದರಾಮಯ್ಯನವರು ವಿಶ್ವನಾಥ್ ಮೂಲಕ ಕೊಟ್ಟಿದ್ದಾರೇನೋ ಎಂಬ ಅನುಮಾನ ನನ್ನದು ಎಂದು ತಿಳಿಸಿದರು. ಅರ್ಕಾವತಿ, ನೈಸ್ ವಿಚಾರದಲ್ಲಿ ತಮ್ಮ ಪ್ರಾಮಾಣಿಕತೆ ಸಾಬೀತುಪಡಿಸಲು ಅವರು ಸಕ್ರಿಯರಾಗಲಿ. 35 ಸಾವಿರ ಕೋಟಿ ಏನಾಗಿದೆ ಎಂದು ಪತ್ತೆ ಹಚ್ಚಿದರೆ ಸಾಲ ಮಾಡುವುದಾದರೂ ತಪ್ಪಬಹುದಲ್ಲವೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು.

Facebook
Twitter
LinkedIn
Email
WhatsApp
Telegram
Tumblr

Leave a Comment

Your email address will not be published. Required fields are marked *

Translate »
Scroll to Top