ಸಚಿವರ ಸಮ್ಮುಖದಲ್ಲೇ ಕೆ.ಸಿ ವ್ಯಾಲಿ ನೀರಿನ ಗುಣಮಟ್ಟ ಪರಿಶೀಲನೆ

- ಕೋಲಾರ ಜಿಲ್ಲೆಯ ಲಕ್ಷ್ಮಿ ಸಾಗರ ಗ್ರಾಮಕ್ಕೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್ ಭೋಸರಾಜು ಭೇಟಿ

- ನೀರಿನ ಬಗ್ಗೆ ಗ್ರಾಮಸ್ಥರ ಗೊಂದಲಗಳನ್ನ ಐಐಎಸ್ಸಿ ಮತ್ತು ಇಹೆಚ್ಇಆರ್ ವಿಜ್ಞಾನಿಗಳಿಂದ ಸ್ಥಳದಲ್ಲೇ ಪರಿಹಾರ

ಕೋಲಾರ : ಕೆ.ಸಿ ವ್ಯಾಲಿ ನೀರಿನ ಗುಣಮಟ್ಟದ ಬಗ್ಗೆ ಇದ್ದಂತಹ ಗ್ರಾಮಸ್ಥರ ಅನುಮಾನಗಳನ್ನ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಅವರು ಐಐಎಸ್ಸ್ಸಿ ಮತ್ತು ಇಹೆಚ್ಇಆರ್ ವಿಜ್ಞಾನಿಗಳಿಂದ ಸ್ಥಳದಲ್ಲೇ ನೀರಿನ ಗುಣಮಟ್ಟ ಪರಿಶೀಲನೆಯ ಮೂಲಕ  ಪರಿಹರಿಸಿದರು.

 

ಕೆಸಿ ವ್ಯಾಲಿ ಸಂಸ್ಕರಿತ ನೀರಿನ ಬಗ್ಗೆ ಹಲವಾರು ಅನುಮಾನಗಳನ್ನ ಲಕ್ಷ್ಮಿ ಸಾಗರ ಗ್ರಾಮದ ಜನರು ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಭೋಸರಾಜು ಅವರು ವಿಜ್ಞಾನಿಗಳು, ಮೀನುಗಾರಿಕಾ ಇಲಾಖೆ ಅಧಿಕಾರಿಗಳೂ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನ ಒಳಗೊಂಡ ತಂಡದ ಮೂಲಕ ಪರಿಶೀಲನೆ ನಡೆಸಿದರು. 

ಇದನ್ನ ಖುದ್ದು ಪರಿಶೀಲಿಸುವ ದೃಷ್ಟಿಯಿಂದ ಇಂದು ಸಣ್ಣ ನೀರಾವರಿ ಸಚಿವರಾದ ಎನ್.ಎಸ್ ಭೋಸರಾಜು ಅವರು ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ತಮ್ಮೊಂದಿಗೆ ಕರೆದೊಯ್ದಿದ್ದ ಐಐಎಸ್ಸ್ಸಿ ಮತ್ತು ಇಹೆಚ್ಇಆರ್ ವಿಜ್ಞಾನಿಗಳ ಮೂಲಕ ಸ್ಥಳದಲ್ಲೇ ನೀರಿನ ಗುಣಮಟ್ಟದ ಪರಿಶೀಲನೆ ನಡೆಸಿ ಫಲಿತಾಂಶವನ್ನು ತೋರಿಸಿದರು. ಫಲಿತಾಂಶವನ್ನು ಕಂಡು ಸಂತಸ ವ್ಯಕ್ತಪಡಿಸಿದ ಗ್ರಾಮಸ್ಥರು ಕೆ.ಸಿ ನೀರಿನಿಂದ ಆಗಿರುವ ಅನುಕೂಲಗಳ ಬಗ್ಗೆ ಸಚಿವರೊಂದಿಗೆ ಸಂತಸ ವ್ಯಕ್ತಪಡಿಸಿದರು. 

ಕಾಲುವೆಗಳ ಮೇಲೆ ಫೆನ್ಸಿಂಗ್ ಮತ್ತು ಪ್ರೊಟೇಕ್ಷನ್ ನಿರ್ಮಾಣಕ್ಕೆ ಸೂಚನೆ :

 

ಊರಿನ ನಡುವೆ ರಭಸವಾಗಿ ಹರಿದು ಹೋಗುತ್ತಿರುವ ಕಾಲುವೆಗಳ ಮೇಲೆ ಕಾಲುಸೇತುವೆಗಳನ್ನು ನಿರ್ಮಾಣ ಮಾಡಬೇಕು. ಹಾಗೂ, ಕಾಲುವೆಗಳ ಅಕ್ಕಪಕ್ಕದಲ್ಲಿ ಗಿಡಮರಗಳು ಬೆಳೆಯದಂತೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚನೆ ನೀಡಿದರು. ಇದೇ ವೇಳೆ, ಕಾಲುವೆಗೆ ಮಕ್ಕಳು ಮತ್ತು ಜಾನುವಾರುಗಳು ಬೀಳದಂತೆ ತಡೆಯುವ ನಿಟ್ಟಿನಲ್ಲಿ ಫೆನ್ಸಿಂಗ್ ನಿರ್ಮಿಸಲೂ ಅಧಿಕಾರಿಗಳಿಗೆ ಸೂಚನೆ ನೀಡಿದರು.   

ನೀರಿನ ಗುಣಮಟ್ಟದ ಬಗ್ಗೆ ಯಾವುದೇ ಅನುಮಾನ ಬೇಡ :

 

ಕೆ.ಸಿ ವ್ಯಾಲಿಯಲ್ಲಿ ಹರಿಯುತ್ತಿರುವ ಎರಡನೇ ಹಂತದ ಸಂಸ್ಕರಿಸಿದ ನೀರು ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳದ ದೃಷ್ಟಿಯಿಂದ ಮಾತ್ರ ಹರಿಸಲಾಗುತ್ತಿದೆ. ಪ್ರತಿಯೊಂದು ಹಂತದಲ್ಲೂ ಕೂಡಾ ನೀರಿನ ಗುಣಮಟ್ಟದ ಬಗ್ಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ನೀರಿನ ಗುಣಮಟ್ಟದ ಬಗ್ಗೆ ಯಾವುದೇ ಅನುಮಾನ ಬೇಡ. ಆದರೆ, ಈ ನೀರನ್ನು ನೇರವಾಗಿ ಕುಡಿಯಲು ಹಾಗೂ ವ್ಯವಸಾಯಕ್ಕೆ ಬಳಸಬಾರದು ಎಂದು ಸಚಿವರು ಗ್ರಾಮಸ್ಥರಿಗೆ ಸೂಚಿಸಿದರು. 

ಕೆ.ಸಿ ವ್ಯಾಲಿಯ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಕೆರೆಗಳ ಸೇರ್ಪಡೆ :

ಕೆ.ಸಿ ವ್ಯಾಲಿ ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಕೆರೆಗಳನ್ನು ಸೇರ್ಪಡಿಸಬೇಕು ಎನ್ನುವುದು ಜನಪ್ರತಿನಿಧಿಗಳು ಹಾಗೂ ರೈತರ ಆಶಯವಾಗಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಬೆಂಗಳೂರು ಜಲಮಂಡಳಿಯ ವತಿಯಿಂದ ಸಂಸ್ಕರಣಾ ಘಟಕದ ಉನ್ನತೀಕರಣ ವಾಗುತ್ತಿದ್ದು ಇದರ ನಂತರ ಹೆಚ್ಚಿನ ಕೆರೆಗಳಿಗೆ ನೀರನ್ನ ಹರಿಸಲಾಗುವುದು ಎಂದು ಹೇಳಿದರು.

 

ಈ ಸಂಧರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram
Email
Tumblr

Leave a Comment

Your email address will not be published. Required fields are marked *

Translate »
Scroll to Top