ಬೆಂಗಳೂರು: ಸುಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಸಂಭ್ರಮದಲ್ಲೇ ಗಂಗಾರತಿ ಮಾದರಿಯಲ್ಲೇ ಕಾವೇರಿ ಆರತಿ ಪ್ರಾರಂಭವಾಗಲಿದೆ.ರಾಜ್ಯದ ಪ್ರವಾಸೋದ್ಯಮದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಲಿರುವ ಈ ಉತ್ಸವಕ್ಕೆ ಈಗಾಗಲೇ ವ್ಯಾಪಕ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪ್ರಾಯೋಗಿಕ ಕಾವೇರಿ ಆರತಿ ಅಕ್ಟೋಬರ್ 3 ರಿಂದ ಮೂರು ದಿನಗಳ ಕಾಲ ಶ್ರೀರಂಗಪಟ್ಟಣದಲ್ಲಿ ಆರಂಭವಾಗಲಿದೆ.
ಗಂಗಾರತಿ ಮಾದರಿಯಲ್ಲೇ ರಾಜ್ಯದ ಜೀವನದಿ ಕಾವೇರಿ ನದಿಗೂ ಆರತಿ ಮಾಡುವ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಜಲಸ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನಿರ್ಧಾರ ಕೈಗೊಂಡಿದ್ದರು. ಅದರಂತೆ ಗಂಗಾರತಿ ಅಧ್ಯಾಯನಕ್ಕಾಗಿ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಕಾವೇರಿ ಭಾಗದ ಶಾಸಕರು ಹಾಗೂ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ತಂಡ ಇತ್ತೀಚೆಗೆ ಹರಿದ್ವಾರಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತ್ತು.
ಈ ದಸರಾ ಸಂದರ್ಭದಲ್ಲೇ ಕಾವೇರಿ ಆರತಿಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಪ್ರಾಯೋಗಿಕವಾಗಿ ಅ. 3 ರಿಂದ 5 ದಿನ ಕಾವೇರಿ ಆರತಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ತಿಳಿಸಿದ್ದಾರೆ.
ಕಾವೇರಿ ಆರತಿಗೆ ಕೆ.ಆರ್.ಎಸ್. ಶ್ರೀರಂಗಪಟ್ಟಣ, ನಿಮಿಶಾಂಭ ದೇವಾಲಯದ ನದಿ ಪಾತ್ರದಲ್ಲಿ ಕಾವೇರಿ ಆರತಿ ನಡೆಸುವ ಸಂಬಂಧ ಪರಿಶೀಲನೆ ನಡೆಸಲಾಗಿತ್ತು. ಬೃಂದಾವನ ಬಳಿ ಪಾರ್ಕಿಂಗ್ ಮತ್ತಿತರೆ ಸಮಸ್ಯೆಗಳು ಇರುವ ಕಾರಣ ಕಾವೇರಿ ಆರತಿ ನಡೆಸಲು ಸಾಧುವಲ್ಲ ಎಂಬ ನಿಲುವಿಗೆ ಬರಲಾಗಿದೆ. ನಿಮಿಶಾಂಭ ದೇವಾಲಯದ ಆವರದಲ್ಲೂ ಇದೇ ರೀತಿಯ ಸಮಸ್ಯೆಗಳಿವೆ. ಹೀಗಾಗಿ ಶ್ರೀರಂಗಪಟ್ಟಣದಲ್ಲಿ ಮೊದಲ ಹಂತದಲ್ಲಿ ಕಾವೇರಿ ಆರತಿ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.