ಕರ್ನಾಟಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ-೨ ಕುರಿತು ವಿಚಾರ ಸಂಕಿರಣ: ವರದಿ ಜಾರಿಗೆ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಲು ನಿರ್ಧಾರ

Kannada Nadu
ಕರ್ನಾಟಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ-೨ ಕುರಿತು ವಿಚಾರ ಸಂಕಿರಣ: ವರದಿ ಜಾರಿಗೆ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಲು ನಿರ್ಧಾರ

ಬೆಂಗಳೂರು: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗೆ ಜಾತಿ ಜನಗಣತಿ ವರದಿಯ ಎರಡನೇ ಸಮೀಕ್ಷೆ ವರದಿ ಪ್ರಮಾಣಿಕವಾಗಿ ಮತ್ತು ಬದ್ಧತಾ ಪೂರ್ವಕವಾಗಿ ಜಾರಿ ಮಾಡಲು ಸರ್ಕಾರಕ್ಕೆ ಬೆಂಬಲಿತವಾಗಿ ಎಲ್ಲ ಶೋಷಿತ ಹಾಗೂ ಹಿಂದುಳಿದ ಸಮುದಾಯಗಳು ನಿಲ್ಲಬೇಕು ಎಂಬ ಮಹತ್ವಪೂರ್ಣ ನಿರ್ಧಾರ ಮಾಡಲಾಯಿತು.
ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಜಾಗೃತ ಕರ್ನಾಟಕ ವತಿಯಿಂದ ಕರ್ನಾಟಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಈಡೇರುವ ಸಮುದಾಯಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಹತ್ವದ ಎಂಟು ನಿರ್ಣಯಗಳು ತೆಗೆದುಕೊಳ್ಳುವ ಮೂಲಕ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರು ಹಾಗೂ ಮುಂದುವರಿದ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾತಿ, ಜನಗಣತಿ ಜೊತೆಗೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ವರದಿ ಅಧ್ಯಯನ ಸೆ.22ರಂದು ಆರಂಭವಾಗಲಿದ್ದು ಆ ವೇಳೆ ಎಲ್ಲ ಹಿಂದುಳಿದ ಮತ್ತು ಶೋಷಿತ ವರ್ಗದವರು ಭವಿಷ್ಯದಲ್ಲಿ ಸರ್ಕಾರದ ಸವಲತ್ತು ಹಾಗೂ ಮೀಸಲಾತಿ ಸೌಲಭ್ಯ ಪಡೆಯಲು ಅ ವರದಿ ಆಕಾರ ಗ್ರಂಥವಾಗಲಿದ್ದು ಈ ದಿಸೆಯಲ್ಲಿ ಎಲ್ಲ ಅಹಿಂದ ವರ್ಗಕ್ಕೆ ಸೇರಿದವರು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ತರಬೇಕು. ಯಾವುದೇ ರೀತಿಯ ಅಡ್ಡಿ ಆತಂಕಗಳು ಎದುರಾದರೂ ಸರ್ಕಾರದ ಪರ ನಿಲ್ಲಬೇಕು ಎಂಬ ಮಹತ್ವದ ನಿರ್ಧಾರ ಮಾಡಲಾಯಿತು.
ಆರಂಭದ ಗೋಷ್ಠಿಯಲ್ಲಿ ಅಜೀಂ ಪ್ರೇಂಜಿ ವಿವಿ ಪ್ರಾಧ್ಯಾಪಕ ಎ. ನಾರಾಯಣ ಮಾತನಾಡಿ, ಅರಸು ಅವರು ಶೋಷಿತರ ಮತ್ತು ಹಿಂದುಳಿದವರ ಪರವಾಗಿ ತೋರಿದಂತ ಇಚ್ಛಾ ಶಕ್ತಿಯನ್ನು ಪ್ರಸ್ತುತ ಸನ್ನಿವೇಶದಲ್ಲಿ ಆಳುವ ಸರ್ಕಾರಗಳು ಇಚ್ಛಾ ಶಕ್ತಿ ತೋರುವ ಪ್ರತಿಪಾದತೆಯ ಅಗತ್ಯವನ್ನು ವಿವರಿಸಿದರು.
ಕಾಂತಾರಾಜು ವರದಿಯನ್ನು ಸರ್ಕಾರ ಕೇವಲ ಸ್ವೀಕಾರ ಮಾಡಿದೆ. ಅದನ್ನು ಅಂಗೀಕರಿಸಿಲ್ಲ ಅಲ್ಲದೆ ತಿರಸ್ಕರಿಸಿಲ್ಲ. ಆದರೆ ಹಿಂದುಳಿದ ವರ್ಗದವರು ಇದನ್ನು ಜಾರಿ ಮಾಡಲು ಹೆಚ್ಚಿನ ಪ್ರಮಾಣದ ಒತ್ತಡ ಬರಲಿಲ್ಲ. ಹೀಗಾಗಿ ಮತ್ತೊಂದು ಅಧ್ಯಯನ ವರದಿ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಹಿಂದುಳಿದವರು ತಮ್ಮ ಹಕ್ಕುಗಳನ್ನು ಪಡೆಯಲು ಬಲ ಪ್ರದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.
ಉದ್ಯೋಗ, ಭದ್ರತೆ ಹಾಗೂ ಖಾಸಗಿ ರಂಗದಲ್ಲಿ ಮೀಸಲಾತಿ, ಭೂ ಒಡೆತನದಂತ ಸೌವಲತ್ತುಗಳು ಅಹಿಂದ ವರ್ಗದವರಿಗೆ ಸಿಗಬೇಕು. ಮತ್ತು ಕ್ಷೇತ್ರ ವಿಂಗಡಣೆಯಲ್ಲಿ ಪರಿಶಿಷ್ಟರಿಗೆ ಇದ್ದಂತೆ ಶಾಸನ ಸಭೆಯಲ್ಲಿ ಹಿಂದುಳಿದವರಿಗೂ ಸಹ ಮೀಸಲಾತಿ ದೊರೆಯಬೇಕು ಎಂದರು.
ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಜಿ. ಅತೀಕ್‌ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಮೀಸಲಾತಿ ಅಗತ್ಯ ಇದೆ. ಈ ದಿಸೆಯಲ್ಲಿ ಮೀಸಲಾತಿಗಾಗಿ ಪ್ರಬಲ ಕೋಮುಗಳ ವಿರೋಧದ ಕೆಲ ದೃಷ್ಟಾಂತಗಳನ್ನು ವಿವರಿಸಿ ಜಾತಿ ಜನಗಣತಿ ಜೊತೆಗೆ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಅಧ್ಯಯನವಾದರೆ ಸೌಲಭ್ಯ ವಂಚಿತ ಸಮುದಾಯಗಳಿಗೆ ಸವಲತ್ತು ಒದಗಿಸಲು ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ಮುಂಬರುವ ಸಾಮಾಜಿಕ, ಶೈಕ್ಷಣಿಕ ಅಧ್ಯಯನ ವರದಿಯ ಪರ ಎಲ್ಲರೂ ನಿಲ್ಲಬೇಕು ಎಂದು ಮನವಿ ಮಾಡಿದರು.
ಒಳ ಮೀಸಲಾತಿ ಹೋರಾಟಗಾರ ಅಂಬಣ್ಣ ಅರುಳ್ಳಿ ಮಾತನಾಡಿ, ಸಾಮಾಜಿಕ ನ್ಯಾಯ ನೀಡುವುದು ಸಾಮಾಜಿಕ ಹೊಣೆಗಾರಿಕೆಯೂ ಆಗಬೇಕು. ದೇವರಾಜ ಅರಸು ಅದನ್ನು ಮಾಡಿದ್ದರು ಎಂದ ಅವರು ಮುಂಬರುವ ದಿನಗಳಲ್ಲಿ ನಡೆಯುವ ಸಾಮಾಜಿಕ , ಶೈಕ್ಷಣಿಕ ಅಧ್ಯಯನ ವರದಿ ವೈಜ್ಞಾನಿಕವಾಗಿ ನಡೆಯಬೇಕು. ಮತ್ತು ಸಾಮಾಜಿಕ ಪರ ಇರುವವರ ಕೈಯಲ್ಲಿ ರಾಜಕೀಯ ಅಧಿಕಾರ ಇದ್ದಾಗ ಮಾತ್ರ ಅದು ಸಾಧ್ಯ. ಅದಕ್ಕೆ ಈಗ ಸಕಾಲ ಎಂದರು.
ಅಲೆಮಾರಿ ಸಮುದಾಯದವರಿಗೆ ಸ್ಪರ್ಶ ಜಾತಿಯಲ್ಲಿ ಸೇರ್ಪಡೆ ಮಾಡಿ ಮೀಸಲಾತಿ ಕಲ್ಪಿಸಿದ್ದೂ ಅನ್ಯಾಯವಾಗಿದೆ ಅದನ್ನು ಸರಿಪಡಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ರಾಮಚಂದ್ರಪ್ಪ ಮಾತನಾಡಿ, ನಮ್ಮ ಸಂಘಟನೆ ದುರ್ಬಲವಾಗಿದೆ. ಪ್ರಬಲರು ನಮ್ಮನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಕಾಂತರಾಜು ವರದಿ ಜಾರಿಯಾಗದಿರಲು ಅವರ ಒತ್ತಡವೇ ಕಾರಣ. ನಾವು ಈಗಲಾದರೂ ಜಾಗೃತರಾಗದಿದ್ದರೇ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದವರು ಎಲ್ಲ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಅದಕ್ಕೆ ನಾವು ಬಲ ಪ್ರದರ್ಶನಕ್ಕೆ ಮುಂದಾಗಬೇಕು ಎಂದರು.
ಎರಡನೇ ಗೋಷ್ಠಿಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎಂ.ಲಿಂಗಪ್ಪ, ಜಾತಿ ಸಮೀಕ್ಷೆಯಲ್ಲಿ ಗಣತಿದಾರರ ಪಾತ್ರ ಪ್ರಮುಖವಾದುದು. ಅವರು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು. ಸರ್ಕಾರ ಮತ್ತು ಆಯೋಗ ತರಾತುರಿಯಲ್ಲಿ ಸಮೀಕ್ಷೆ ನಡೆಸದೆ ಕರಾರುಹೊಕ್ಕಾಗಿ ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದಂತೆ ನಡೆಸಬೇಕು ಎಂದು ಸಲಹೆ ಮಾಡಿದರು.
ಜಾತಿ ಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಇಲ್ಲದ ಈ ಸಂದರ್ಭದಲ್ಲಿ ಜಾತಿ ಗಣತಿ ಅವಶ್ಯವಾಗಿದೆ. ಇಂತ ಸಂದರ್ಭದಲ್ಲಿ ಹೊಸದಾಗಿ ನಡೆಯುವ ಜಾತಿ ಗಣತಿಯಲ್ಲಿ ವಿದ್ಯುತ್‌ ಮೀಟರ್‌ಗಳನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ. ಹಲವು ಕಡೆ ವಿದ್ಯುತ್‌ ಸಂಪರ್ಕ ಇಲ್ಲದ ಹಟ್ಟಿ ಹಾಗೂ ತಾಂಡಾಗಳು ಇದ್ದು ಅವುಗಳನ್ನು ಪರಿಗಣಿಸಬೇಕೆಂದು ಆಯೋಗಕ್ಕೆ ಸಲಹೆ ಮಾಡಿದ್ದಲ್ಲದೆ, ಆಯೋಗ ಸಮೀಕ್ಷೆಗೆ ಬೇಕಾಗುವ ಪೂರ್ವ ಸಿದ್ಧತೆಗಳು ಈಗಲೇ ಮಾಡಿಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.
ಐಎಎಸ್‌ ಅಕಾಡೆಮಿಯ ಸಂಚಾಲಕ ನವೀನ್‌ ಮಾತನಾಡಿ, ರಾಜಕೀಯ ಪ್ರಾತಿನಿಧ್ಯ ನೀಡುವಾಗ ಹಿಂದುಳಿದ ವರ್ಗಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಬಂದಾಗ ಹಿಂದುಳಿದ ಎಲ್ಲರೂ ಬೆಂಬಲಿಸಬೇಕು. ಆದರೆ ತಾವು ದಾವಣಗೆರೆಯಲ್ಲಿ ಸ್ಪರ್ಧಿಸಿದಾಗ ಆ ಅವಕಾಶ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಲಕ್ಷ್ಮೀ ಅಂಕಲಿಗೆ ಮಾತನಾಡಿ, ಸಮೀಕ್ಷೆ ನಡೆದಾಗಲೆಲ್ಲ ಕೆಲ ಪ್ರಬಲ ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಕಾರಣದಿಂದ ಅದನ್ನು ತಿರಸ್ಕೃತ ಹೋದರೆ ಜನರ ತೆರಿಗೆ ಪೋಲಾಗುತ್ತದೆ. ಅದಕ್ಕಾಗಿ ಶೋಷಿತರ ಮತ್ತು ಹಿಂದುಳಿದವರ ರಾಜಕೀಯ ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆಗೆ ಹೊಸದಾಗಿ ನಡೆಸುವ ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಿ ಜಾರಿಗೆ ತರಬೇಕು ಎಂದರು.
ಮೂರನೇ ಗೋಷ್ಠಿಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕನಾಥ್‌, ಮುಂಬರುವ ಅಧ್ಯಯನ ವರದಿ ಸರ್ಕಾರದ ಕೈಸೇರಿದ ಮೇಲೆ ಜಾರಿಯಾಗುವುದೇ ಎಂಬ ಆತಂಕ ವ್ಯಕ್ತಪಡಿಸಿದರು. ಆ ರೀತಿಯಾಗದಂತೆ ಸರ್ಕಾರ ದೃಢಪಡಿಸಬೇಕು. ಹಿಂದುಳಿದ ಆಯೋಗದಲ್ಲಿ ಒಕ್ಕಲಿಗ ಮತ್ತು ಲಿಂಗಾಯತರಿಗೆ ಸದಸ್ಯತ್ವದ ಪ್ರಾತಿನಿಧ್ಯ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಕಾಂತರಾಜ ವರದಿಯನ್ನು ಅಂಗೀಕರಿಸದಿದ್ದರೂ ಅದನ್ನು ಬಹಿರಂಗಪಡಿಸಬೇಕು. ಹಿಂದುಳಿದ ವರ್ಗಗದವರಲ್ಲೂ ಸೌಲಭ್ಯ ವಂಚಿತ ಅತೀ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕು. ಇಲ್ಲಿವರೆಗೆ ಸರ್ಕಾರಿ ಅಧಿಕಾರಿಗಳಾಗಿ ಇದ್ದ ಮಾಹಿತಿಯನ್ನು ಅಧಾರವಾಗಿಟ್ಟುಕೊಂಡು ಸಮೀಕ್ಷೆ ಮಾಡಬೇಕು ಎಂದರು.
ಕಾಂಗ್ರೆಸ್‌ ಮುಖಂಡ ರವಿ ಭೋಸರಾಜು ಮಾತನಾಡಿ, ಆರ್‌ಎಸ್‌ಎಸ್‌ನವರು ಹಿಂದುತ್ವ ಭಾವನೆ ಕೆರಳಿಸಿ ಹಿಂದುಳಿದ ವರ್ಗದವರಿಗೆ ಯಾವುದೇ ರೀತಿಯ ಪ್ರಾತಿನಿಧ್ಯ ಕೊಡಿಸುವಲ್ಲಿ ಮುಂದಾಗುತ್ತಿಲ್ಲ. ರಾಹುಲ್‌ ಗಾಂಧಿ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಜಾತಿ, ಜನಗಣತಿಗೆ ಮುಂದಾಗಿದೆ. ಅದೇ ರೀತಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಪರಿಶಿಷ್ಟರ ಒಳ ಮೀಸಲಾತಿಗಾಗಿ ನಾಗಮೋಹನ್‌ ದಾಸ್‌ ವರದಿಯನ್ನು ಜಾರಿ ಮಾಡುವ ಮೂಲಕ ಐತಿಹಾಸಿಕ ನಿರ್ರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಮುಂಬರು ಅಧ್ಯುನ ವರದಿ ಜಾರಿಗೆ ಒತ್ತಾಯ ಮಾಡಬೇಕು ಎಂದರು.
ಜಯಲಕ್ಷ್ಮೀ ನಾಯಕ್‌ ಮಾತನಾಡಿ, ಬುಡಕಟ್ಟು ಜನಾಂಗದವರು ತಮ್ಮ ಹಕ್ಕನ್ನು ಕೇಳದಿದ್ದರೆ ಭವಿಷ್ಯದಲ್ಲಿ ಯಾವುದೇ ಸೌಲಭ್ಯ ಸಿಗುವುದಿಲ್ಲ. ಧ್ವನಿ ಇಲ್ಲದವರ ಪರ ಸರ್ಕಾರ ನಿಲ್ಲಬೇಕು. ಪಂಚ ಗ್ಯಾರಂಟಿ ನಂಬಿ ಕುಳಿತರ ಆಗುವುದಿಲ್ಲ. ಶಿಕ್ಷಣ, ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು. ಈ ನಿಟ್ಟಿನಲ್ಲಿ ಹೋರಾಟಕ್ಕೆ ಮುಂದಾಗಬೇಕು ಎಂದರು.
ಸಿದ್ದಪ್ಪ ಮೂಲಗಿ ಮಾತನಾಡಿ, ಮುಂದುವರೆದ ಸಮಾಜದಲ್ಲಿ ಸಹ ಸಾಮಾಜಿಕ ನ್ಯಾಯದ ಪರವಾಗಿ ಇರುವವರು ಇದ್ದಾರೆ. ಲಿಂಗಾಯತ ಹಾಗೂ ಒಕ್ಕಲಿಗರಲ್ಲಿ ನಮ್ಮ ಬೆಂಬಲಕ್ಕೆ ಪೂರಕವಾಗಿ ಪಡೆಯಬೇಕು. ಲಿಂಗಾಯತರು ಹಾಗೂ ಒಕ್ಕಲಿಗ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಇದ್ದಾರೆ ಎನ್ನುವುದನ್ನು ಬಿಟ್ಟರೇ ಆ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಯುವಕರಿಗೆ ಪ್ರಾತಿನಿಧ್ಯ ದೊರೆತಿಲ್ಲ. ಅಲೆಮಾರಿಗಳಿಗೆ ಆದ ಅನ್ಯಾಯವನ್ನು ತಪ್ಪಿಸಲು ಸಿಎಂ ಮುಂದಾಗಬೇಕು ಎಂದರು.
ಜಾಗೃತ ಕರ್ನಾಟಕ ವೇದಿಕೆ ಅಧ್ಯಕ್ಷ ಬಿ.ಸಿ.ಬಸವರಾಜು ಮಾತನಾಡಿ, ಸಮೀಕ್ಷೆಯಿಂದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದವರಿಗೂ ಅನುಕೂಲವಾಗಲಿದೆ. ಅಲೆಮಾರಿಗಳಿಗೆ ಆದ ಅನ್ಯಾಯ ಸರಿಪಡಿಸಬೇಕು. ವರದಿ ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ಮತ್ತು ಅಸಮತೋಲನ ನಿವಾರಣೆ ಮಾಡುವ ದೃಷ್ಟಿಯಲ್ಲಿ ವರದಿ ಜಾರಿ ಮಾಡಲು ಸರ್ಕಾರ ಸಂಕಲ್ಪ ಮಾಡಬೇಕು ಎಂದರು.
ಈ ವಿಚಾರ ಸಂಕಿರಣದಲ್ಲಿ ಎಂಟು ನಿರ್ಣಯಗಳನ್ನು ಅಂಗೀಕಾರ ಮಾಡಲಾಯಿತು.
ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸಿದ್ದರಾಜು, ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ, ರಾಯಚೂರು ಹಿಂದುಳಿದ ವರ್ಗಗಳ ಒಕ್ಕುಟದ ಅಧ್ಯಕ್ಷ ಕೆ.ಶಾಂತಪ್ಪ, ಕಾರ್ಯದರ್ಶಿ ಹನುಮಂತಪ್ಪ ಯಾದವ್‌, ಧರಣೇಶ್‌ ಭೂಕನಕೆರೆ, ವಾಸು ಸೇರಿದಂತೆ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ನಿರ್ಣಯಗಳು
ಜಾತಿ ಸಮೀಕ್ಷೆ ತೆಗೆದುಕೊಂಡ ನಿರ್ಣಯ ಸ್ವಾಗತಾರ್ಹ
ಜಾತಿ ಸಮೀಕ್ಷೆ ಕೇವಲ ಗಣತಿ ಅಲ್ಲ. ಇದು ಸವಲತ್ತು ನೀಡಲು ಪೂರಕ
ಪರಿಣಾಮಕಾರಿಯಾಗಿ ಸಮೀಕ್ಷೆ ವರದಿ ಜಾರಿ ಮಾಡಲು ಒತ್ತಾಯ
ಶಾಸನ ಸಭೆಯಲ್ಲಿ ಖಾಸಗಿ ವಲಯದಲ್ಲಿ ಒಬಿಸಿಗಳಿಗೆ ಮೀಸಲಾತಿ
ಅಧ್ಯಯನ ವರದಿ ಜಾರಿಗೆ ಜಿಲ್ಲೆ, ರಾಜ್ಯಾದ್ಯಂತ ಹಿಂದುಳಿದವರಿಂದ ಮನವಿ ಸಲ್ಲಿಸುವುದು.
ಹಿಂದುಳಿದವರ ಐಕ್ಯತೆ ಸಾಧಿಸಲು ಬಲ ಪ್ರದರ್ಶನ 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";