ಪವನ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿಯೇ ಕರ್ನಾಟಕ ನಂ1

Kannada Nadu
ಪವನ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿಯೇ ಕರ್ನಾಟಕ ನಂ1
ಬೆಂಗಳೂರು:  ರಾಜ್ಯವು 2024-25ನೇ ಸಾಲಿನಲ್ಲಿ ಪವನ ವಿದ್ಯುತ್‌ ಕ್ಷೇತ್ರಕ್ಕೆ 1331.48 ಮೆ.ವ್ಯಾ. ಸೇರ್ಪಡೆಗೊಳಿಸುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ‘ಗ್ಲೋಬಲ್ ವಿಂಡ್ ಡೇ’ 2025 “ಪವನ್-ಉರ್ಜಾ: ಪವರಿಂಗ್‌ ದಿ ಫ್ಯೂಚರ್ ಆಫ್ ಇಂಡಿಯಾ” ಸಮಾರಂಭದಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಅವರಿಂದ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ಪ್ರಶಸ್ತಿ ಸ್ವೀಕರಿಸಿದರು.
2024-25ನೇ ಸಾಲಿನಲ್ಲಿ ಪವನ ವಿದ್ಯುತ್‌ ವಲಯಕ್ಕೆ 1331.48 ಮೆ.ವ್ಯಾ. ಸಾಮರ್ಥ್ಯ ಸೇಪರ್ಡೆಗೊಳಿಸಿರುವ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ, 1136.37 ಮೆ.ವ್ಯಾ. ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿರುವ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. 954.74 ಮೆ.ವ್ಯಾ ಸೇರ್ಪಡೆಗೊಳಿಸಿರುವ ಗುಜರಾತ್‌ ಮೂರನೇ ಸ್ಥಾನದಲ್ಲಿದೆ.
ಕಳೆದ ಸಾಲಿನಲ್ಲಿ ಗುಜರಾತ್‌ ಮೊದಲ ಸ್ಥಾನ, ಕರ್ನಾಟಕ ಎರಡನೇ ಸ್ಥಾನ ಹಾಗೂ ತಮಿಳುನಾಡು ಮೂರನೇ ಸ್ಥಾನದಲ್ಲಿತ್ತು. ಪ್ರಸಕ್ತ ಸಾಲಿನಲ್ಲಿ ಈ ಎರಡೂ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ಅಗ್ರ ಸ್ಥಾನಕ್ಕೇರಿದೆ.
ವಿಶ್ವ ಪವನ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್‌,”2025ರ ಮೇ ವೇಳೆಗೆ  ಪವನ ವಿದ್ಯುತ್ತಿನ ಸ್ಥಾಪಿತ ಸಾಮರ್ಥ್ಯ 7,351 ಮೆಗಾವ್ಯಾಟ್‌ನಷ್ಟಿತ್ತು. ಕಳೆದ ಆರ್ಥಿಕ ಸಾಲಿನಲ್ಲಿ 1,331 ಮೆಗಾವ್ಯಾಟ್‌ಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ ಅಗ್ರಮಾನ್ಯ ಸ್ಥಾನದಲ್ಲಿದ್ದೇವೆ,” ಎಂದು ತಿಳಿಸಿದರು.
“ಇದು ಕೇವಲ ಅಂಕಿ-ಅಂಶವಲ್ಲ. ನಮ್ಮ ಬದ್ಧತೆ, ಯೋಜನೆಗಳನ್ನು  ಕಾರ್ಯಗತಗೊಳಿಸುವ ನಮ್ಮ ಸಾಮರ್ಥ್ಯದ ಪ್ರತೀಕ. ರಾಜ್ಯದ ಕೈಗಾರಿಕೆಗಳಿಗೆ, ನಮ್ಮ ರೈತರಿಗೆ, ಮನೆಗಳಿಗೆ ಶುದ್ಧ ಇಂಧನ ಒದಗಿಸುವ ಇಚ್ಛಾ ಶಕ್ತಿಯಾಗಿದೆ,” ಎಂದು ಹೇಳಿದರು.
“ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ಹೆಜ್ಜೆಗಳು ಹೊಸತೇನಲ್ಲ. 2009ರಲ್ಲಿ ನವೀಕರಿಸಬಹುದಾದ ಇಂಧನ ನೀತಿಯನ್ನು ಪ್ರಕಟಿಸಿದ ದೇಶದ ಮೊದಲ ರಾಜ್ಯ ನಮ್ಮದು. ನಾವು ಇಂದು ಈ ಎತ್ತರಕ್ಕೆ ಏರಲು ಅಂದೇ ಅಡಿಪಾಯ ಹಾಕಲಾಗಿತ್ತು. ನವೀಕರಿಸಬಹುದಾದ ಇಂಧನ ನೀತಿ 2022–2027 ನಮ್ಮ  ದೂರದೃಷ್ಟಿಯ ಪ್ರತೀಕ. ಕೇವಲ ಸಾಮರ್ಥ್ಯ ಸೇರ್ಪಡೆ ಮಾತ್ರವಲ್ಲದೇ, ನಾವೀನ್ಯತೆ, ಹೂಡಿಕೆ ಮತ್ತು ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರೂಪಿಸಲಾದ ನೀತಿ ಇದು.  ಐಎಸ್‌ಟಿಎಸ್‌ ಮತ್ತು ಐಎನ್‌ಎಸ್‌ಟಿಎಸ್‌ ಯೋಜನೆಗಳು, ಹೈಬ್ರಿಡ್ ಮಾದರಿಗಳು, ಹಳೆಯ ಟರ್ಬೈನ್‌ಗಳಿಗೆ ಮರುಶಕ್ತಿ ತುಂಬುವುದು ಸೇರಿದಂತೆ ಡಿಜಿಟಲೀಕರಣ ಮತ್ತು ಜಿಯೋ-ಟ್ಯಾಗಿಂಗ್ ಮೂಲಕ ಸುಲಲಿತ ವ್ಯವಹಾರವನ್ನು ಬೆಂಬಲಿಸುತ್ತಿದೆ,” ಎಂದು ವಿವರಿಸಿದರು.
“ಕೇಂದ್ರ ಸರ್ಕಾರವು 2030ರ ವೇಳೆಗೆ 500 ಗಿಗಾವ್ಯಾಟ್‌ಗಳಷ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗುರಿ ಹೊಂದಿದ್ದು, ಪವನ ಶಕ್ತಿಯಿಂದಲೇ 100 ಗಿಗಾವ್ಯಾಟ್‌ಗಳಷ್ಟು ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದೆ.ಈ ಗುರಿ ಸಾಧನೆಗೆ ಕರ್ನಾಟಕ ಬದ್ಧವಾಗಿದ್ದು, 17 ಗಿಗಾವ್ಯಾಟ್‌ ಪವನ ಶಕ್ತಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ನವೀಕರಿಸಬಹುದಾದ ಇಂಧನ ಕ್ಲಸ್ಟರ್‌ ಕಾರ್ಯಕ್ರಮದಡಿ, 5 ಗಿಗಾವ್ಯಾಟ್‌ಗಿಂತ ಹೆಚ್ಚು ಪವನ ವಿದ್ಯುತ್‌ ಸಾಮರ್ಥ್ಯ ಸೇರ್ಪಡೆಗೊಳಿಸಲಿದ್ದೇವೆ. ಇದನ್ನು ಸಾಧ್ಯವಾಗಲಿಸಲು 20ಕ್ಕೂ ಹೆಚ್ಚು ಸಬ್‌ ಸ್ಟೇಷನ್‌ಗಳು, 400 ಕೆ.ವಿ. ಕಾರಿಡಾರ್‌ಗಳು ಹಾಗೂ ನವೀಕರಿಸಬಹುದಾದದ ಇಂಧನದ ಮೀಸಲು ವಲಯ ಮುಂತಾದ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುತ್ತಿದ್ದೇವೆ,” ಎಂದು ಮಾಹಿತಿ ನೀಡಿದರು.
“ಕರ್ನಾಟಕವು ಜಾಗತಿಕ ಮಟ್ಟದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದರಲ್ಲೂ ಮುಂಚೂಣಿಯಲ್ಲಿದ್ದು, ಹೂಡಿಕೆದಾರರಿಗೆ ರಾಜ್ಯದ ಬಗ್ಗೆ ಇರುವ  ವಿಶ್ವಾಸವನ್ನು ಇದು ಎತ್ತಿ ತೋರಿಸುತ್ತದೆ. 2025ರ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ನವೀಕರಿಸಬಹುದಾದ ಇಂಧನ ವಲಯಕ್ಕೆ  4 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಹೂಡಿಕೆ ಒಪ್ಪಂದಗಳಾಗಿವೆ. ಇದು ರಾಜ್ಯವು ಪಡೆದುಕೊಂಡಿರುವ ಒಟ್ಟು ಹೂಡಿಕೆಯ ಸುಮಾರು ಶೇ.40 ರಷ್ಟು,” ಎಂದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";