ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ದರ ಏರಿಕೆಗೂ ರಾಜ್ಯ ಸರ್ಕಾರಕ್ಕೂ ಸಂಬಂಧವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಹೇಳುತ್ತಿದ್ದರೆ, ರಾಜ್ಯ ಸರ್ಕಾರವೇ ಪ್ರಯಾಣ ದರ ಹೆಚ್ಚಿಸಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ.
ಈ ನಡುವೆ ಇಂದು ಮೆಟ್ರೋ ಪ್ರಯಾಣ ದರ ಏರಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಮೆಟ್ರೋ ದರ ಹೆಚ್ಚಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜನರು ಪ್ರಶ್ನಿಸಬೇಕು. ಕೇಂದ್ರ ಸರ್ಕಾರವನ್ನಲ್ಲ ಎಂದರು.
ನಗರದ ನೈಜ ಪರಿಸ್ಥಿತಿ ರಾಜ್ಯ ಸರ್ಕಾರಕ್ಕೆ ಗೊತ್ತಿರುತ್ತದೆ. ಮೆಟ್ರೋದ ಮೇಲೆ ಹೆಚ್ಚಿನ ಹಕ್ಕು ಮತ್ತು ಅಧಿಕಾರಗಳು ಇರುವುದು ರಾಜ್ಯ ಸರ್ಕಾರಗಳಿಗೆ ಇರುತ್ತದೆ. ದರ ಏರಿಕೆ ಸಮಿತಿ ದೆಹಲಿಯಲ್ಲಿ ಇಲ್ಲ. ದರ ಏರಿಕೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಗಳು ಸಿದ್ಧಪಡಿಸುತ್ತವೆ. ಮೆಟ್ರೋ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು ರಾಜ್ಯ ಸರ್ಕಾರ. ಹಾಗಾಗೀ ಹಾಗಾಗಿ ಇದನ್ನು ಮುಖ್ಯಮಂತ್ರಿ ಅವರಿಗೆ ಕೇಳಬೇಕು ಎಂದು ಹೇಳಿದರು.
ಮೆಟ್ರೋ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರಗಳು ನಿಗಾ ವಹಿಸುತ್ತವೆ. ಅದು ಕರ್ನಾಟಕ ಆಗಿರಲಿ ಅಥವಾ ಯಾವುದೇ ರಾಜ್ಯಗಳಾಗಿರಲಿ. ಬೆಲೆ ಏರಿಕೆ ಪ್ರಸ್ತಾವನೆಗಳು ಆಯಾ ರಾಜ್ಯಗಳಿಗೆ ಸಂಬಂಧಪಟ್ಟರುವ ವಿಚಾರ. ಮೆಟ್ರೋದ ಮೇಲೆ ಹೆಚ್ಚಿನ ಹಕ್ಕು ಮತ್ತು ಅಧಿಕಾರಗಳು ಇರುವುದು ರಾಜ್ಯ ಸರ್ಕಾರಗಳಿಗೆ. ಮೆಟ್ರೋ ದರ ಏರಿಕೆ ಪ್ರಸ್ತಾವನೆ ಮತ್ತು ದರ ಏರಿಕೆ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳಾಗಿವೆ ಎಂದು ತಿಳಿಸಿದ್ದಾರೆ.
ವಾರದ ಹಿಂದೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಪ್ರಯಾಣ ದರವನ್ನು ದುಪ್ಪಟ್ಟು ಹೆಚ್ಚಿಸಿತ್ತು. ರಾಜ್ಯ ಸರ್ಕಾರದ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ ನಂತರ ದರ ಪರಿಷ್ಕರಿಸಲು ಸಿಎಂ ಸಿದ್ದರಾಮಯ್ಯ, BMRCL ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ಅವರಿಗೆ ಸೂಚಿಸಿದ್ದರು.
ಬಳಿಕ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಗರಿಷ್ಠ ಶೇ. 71 ರಷ್ಟು ಏರಿಕೆಗೆ ನಿರ್ಧರಿಸಿದ್ದು, ಪ್ರಯಾಣ ದರವನ್ನು ಪರಿಷ್ಕರಣೆ ಮಾಡುವುದಾಗಿ ಗುರುವಾರ ಘೋಷಿಸಿತ್ತು.ಅದರಂತೆ ಸ್ಟೇಜ್ ಗಳ ಆಧಾರದಲ್ಲಿ ಕೆಲವು ಕಡೆಗಳಲ್ಲಿ ದರವನ್ನು ಪರಿಷ್ಕರಣೆ ಮಾಡಲಾಗಿದೆ.