ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಅಧಿಕವಾಗುತ್ತಿರುವ ನಡುವೆ ರಾಜ್ಯ ಸರ್ಕಾರ ಮಂಗಳವಾರ ಡೆಂಘೀಯನ್ನು ‘ಸಾಂಕ್ರಾಮಿಕ ಕಾಯಿಲೆ’ ಎಂದು ಘೋಷಿಸಿದೆ.
ಹಾಗೆಯೇ ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ 2020ಗೆ ತಿದ್ದುಪಡಿ ಮಾಡಿದ್ದು, ಆಗಸ್ಟ್ 31ರ ಕರ್ನಾಟಕ ಗೆಜೆಟ್ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಮುಂದೆ ನೈರ್ಮಲ್ಯ(ಸ್ವಚ್ಚತೆ) ಕಾಪಾಡದವರಿಗೆ ದಂಡ ಬೀಳಲಿದೆ.
ಮನೆಗಳಿಗೆ ಹೊರಾಂಗಣ ಹಾಗೂ ಒಳಾಂಗಣದಲ್ಲಿ ನಿಯಮ ಉಲ್ಲಂಘನೆ ಮಾಡಿದರೆ 400 ರೂಪಾಯಿ ದಂಡ, ನಗರ ಪ್ರದೇಶ ಗ್ರಾಮಾಂತರದಲ್ಲಿ ಓಳಾಂಗಣ ಹಾಗೂ ಹೊರಾಂಗಣಕ್ಕೆ 200 ರೂಪಾಯಿ ದಂಡ ವಿಧಿಸಲಾಗುತ್ತದೆ.
ಹೋಂ ಸ್ಟೇ, ರೆಸಾರ್ಟ್, ಹೋಟೆಲ್, ರೆಸ್ಟೋರಂಟ್, ಲಾಡ್ಜ್, ಮಾರ್ಕೆಟ್, ಸೂಪರ್ ಮಾರ್ಕೆಟ್, ಮಾಲ್, ಪಾರ್ಕ್, ಥಿಯೇಟರ್, ಕಾರ್ಖಾನೆ, ಕೈಗಾರಿಕೆ, ಶಾಲೆಗಳು, ಕನ್ವೆಷನ್ ಹಾಲ್, ವಾಣಿಜ್ಯ ಸಂಸ್ಥೆಗಳು, ಬೀದಿ ಬದಿ ತೆಂಗಿನಕಾಯಿ ಮಾರಾಟ, ಮೊದಲಾದವು ಕಡೆಗಳಲ್ಲಿ ನಿಯಮವನ್ನು ಉಲ್ಲಂಘಿಸಿದರೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಗ್ರಾಮಾಂತರ ಭಾಗದಲ್ಲಿ 500 ರೂಪಾಯಿ ದಂಡ ವಿಧಿಸಲಾಗುತ್ತದೆ.
ತೆರೆದ ಸ್ಥಳಗಳಲ್ಲಿ ಡೆಂಘೀ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದರೆ- ನಗರದ ಪ್ರದೇಶದಲ್ಲಿ 2 ಸಾವಿರ ರೂಪಾಯಿ ದಂಡ, ಗ್ರಾಮಾಂತರದಲ್ಲಿ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ಡೆಂಘೀ ನಿಯಂತ್ರಣ: ನಿಯಮಗಳನ್ನು ತಿಳಿಯಿರಿ
ಆಯಾ ಜಾಗದಲ್ಲಿ ಸೊಳ್ಳೆ ಬಾರದಂತೆ ಆ ಜಾಗದ ಮಾಲೀಕರು ಕ್ರಮ ವಹಿಸಬೇಕಾಗುತ್ತದೆ. ಹಾಗೆಯೇ ಸೊಳ್ಳೆಗಳ ಸಂತಾನೋತ್ಪತ್ತಿ ಹರಡಲು ಅವಕಾಶ ನೀಡಬಾರದು. ಖಾಲಿ ಜಾಗದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು.
ಸ್ವತ್ತಿನ ಮಾಲೀಕರು ನಿಗಾ ವಹಿಸದಿದ್ದರೆ, ಸಂಬಂಧ ಪಟ್ಟ ಅಧಿಕಾರಿ ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು. ರಾಸಾಯನಿಕವನ್ನು ಸಿಂಪಡಿಸಿ, ಇದಕ್ಕೆ ಖರ್ಚಾದ ವೆಚ್ಚವನ್ನು ಸಂಬಂಧ ಪಟ್ಟ ಸ್ವತ್ತಿನ ಮಾಲೀಕರು ನೀಡುವಂತೆ ಕ್ರಮ ವಹಿಸಬೇಕು.
ಬಿಬಿಎಂಪಿ ಮತ್ತು ಮಂಗಳೂರಿನಲ್ಲಿ ತೆರೆದ ಸ್ಥಳದಲಿ ನಿಂತಿರುವ ನೀರು ತೆರವು ಮಾಡುವ ಜವಾಬ್ದಾರಿಯನ್ನು ಆಯಾ ಮಾಲೀಕರೇ ಹೊರಬೇಕು. ಸರಿಯಾಗಿ ಡೆಂಘೀ ನಿಯಂತ್ರಣ ಕ್ರಮಕೈಗೊಳ್ಳಲಾಗುತ್ತಿದೆಯೇ ಎಂದು ಅಧಿಕಾರಿಗಳು ಪರಿಶೀಲನೆ ನಡೆಸಬೇಕು.