ಮಾನವ ರಹಿತ ವೈಮಾನಿಕ ವಾಹನಗಳಿಗೆ (UAV) ಕ್ಲಸ್ಟರ್ ಮತ್ತು ಡ್ರೋನ್ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ FICCI ಒತ್ತಾಯ
ಕಲ್ಬುರ್ಗಿ : ದೇಶೀಯ ಮತ್ತು ಅಂತಾರಾಷ್ಟ್ರೀಯ ಕಂಪೆನಿಗಳ ಪಾಲುದಾರಿಕೆಯಲ್ಲಿ ಕರ್ನಾಟಕ ಸರ್ಕಾರ ಜಾಗತಿಕ ಆವಿಷ್ಕಾರ ಮೈತ್ರಿಯನ್ನು ರಚಿಸುವ ಅಥವಾ ರೂಪಿಸುವ ಪ್ರಕ್ರಿಯೆಯಲ್ಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ಮತ್ತು ರೋಟರಿ ಜಂಟಿಯಾಗಿ ಆಯೋಜಿಸಿದ್ದ ‘ಬೆಂಗಳೂರು ಉದ್ಯಮ ಸಮ್ಮೇಳನ’ ವನ್ನು ಉದ್ಘಾಟಿಸಿ ಸಚಿವ ಪ್ರಿಯಾಂಕ್ ಖರ್ಗೆಯವರು ಮಾತನಾಡಿದರು.
ವಲಯವಾರು ಕಾರಿಡಾರ್‌ಗಳನ್ನು ರಚಿಸುವ ಬಗ್ಗೆ ರಾಜ್ಯ ಸರ್ಕಾರವು ಆಸ್ಟ್ರೇಲಿಯಾ, ಜರ್ಮನಿ, ಇಸ್ರೇಲ್ ಮುಂತಾದ ವಿವಿಧ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಈ ವಿಧಾನವು ಸಂಪೂರ್ಣವಾಗಿ ವಲಯ-ಚಾಲಿತವಾಗಿದೆ. ಕರ್ನಾಟಕವು ದೇಶದ ‘ಸಂಶೋಧನೆ ಮತ್ತು ಆವಿಷ್ಕಾರ ಕೇಂದ್ರ’ ವಾಗಲು ಜಾಗೃತ ಪ್ರಯತ್ನಗಳನ್ನು ಹೇಗೆ ಮಾಡುತ್ತಿದೆ ಎಂಬುದನ್ನು ಸಚಿವರು ಪ್ರಸ್ತಾಪಿಸಿದರು, ಪದವಿ ಗಳಿಸಿ ಕಂಪೆನಿಯ ಬ್ಯಾಕ್ ಆಫೀಸ್ ಕೆಲಸದಿಂದ ಹಿಡಿದು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದವರೆಗೆ ಮತ್ತು ಈಗ ಮುಂದಿನ ಹಂತದವರೆಗೆ ಬೆಳೆಯಲು ಕರ್ನಾಟಕ ಸರ್ಕಾರ ಹೇಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂಬುದನ್ನು ಸಚಿವರು ವಿವರಿಸಿದರು. ಕರ್ನಾಟಕವು ಈಗಾಗಲೇ 400 ಕ್ಕೂ ಹೆಚ್ಚು ಫಾರ್ಚೂನ್ 500 ಕಂಪನಿಗಳಿಗೆ ನೆಲೆಯಾಗಿದೆ ಮತ್ತು ಅಗ್ರ ಹೂಡಿಕೆಯ ತಾಣವಾಗಿ ಮುಂದುವರೆದಿದೆ. ಬೆಂಗಳೂರಿನಲ್ಲಿ ಚಿಕ್ಕಪೇಟೆ, ಸುಲ್ತಾನಪೇಟೆ, ತರಗುಪೇಟೆ ಮುಂತಾದ ನಗರಗಳು ವಿವಿಧ ಕ್ಲಸ್ಟರ್‌ಗಳನ್ನು ಹೊಂದಿರುವ ವಿಶೇಷ ಆರ್ಥಿಕ ವಲಯಗಳಿಗೆ ಮುನ್ಸೂಚನೆಯಾಗಿದೆ ಎಂದು ಅವರು ಹೇಳಿದರು. ಕರ್ನಾಟಕವು ಆರ್ಥಿಕ ಶಕ್ತಿ ಕೇಂದ್ರವಾಗಿದ್ದು, ಅದು ಆಕಸ್ಮಿಕವಾಗಿ ಆದದ್ದಲ್ಲ ಬದಲಿಗೆ ರಚನೆಯಿಂದ ಎಂದು ಹೇಳಿದರು.
‘ಸಂಶೋಧನೆ ಮತ್ತು ಆವಿಷ್ಕಾರ’ವನ್ನು ಉತ್ತೇಜಿಸಲಿದ್ದು, ಅದಕ್ಕಾಗಿ ಪರಿಸರ ವ್ಯವಸ್ಥೆಯನ್ನು ರಚಿಸಲು ಸರ್ಕಾರ ಸಹಾಯ ಮಾಡುತ್ತದೆ ಎಂದು ಭರವಸೆ ನೀಡಿದರು. ಕೇಂದ್ರ ಸರ್ಕಾರದ ‘ಆತ್ಮ ನಿರ್ಭರ ಭಾರತ್’ ಅಭಿಯಾನವನ್ನು ಪರೋಕ್ಷವಾಗಿ ಟೀಕಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕ ರಾಜ್ಯವು ಹಿಂದಿನಿಂದಲೂ ಸ್ವಾವಲಂಬಿಯಾಗಿದೆ, ಶ್ರೇಷ್ಠ ಆಡಳಿತ, ಪ್ರತಿಭಾನ್ವಿತರು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು, ಸಾರ್ವಜನಿಕ ವಲಯ ಸಂಸ್ಥೆಗಳು, ವೈಜ್ಞಾನಿಕ ಸಂಸ್ಥೆಗಳು, ಬ್ಯಾಂಕಿಂಗ್ ಸಂಸ್ಥೆಗಳು ಇತ್ಯಾದಿಗಳು ಸಾಕಷ್ಟು ಇವೆ. ಕರ್ನಾಟಕವು ಅತಿ ಹೆಚ್ಚು ಪದವೀಧರರ ಕೆಲಸದ ಪಡೆಯನ್ನು ಹೊಂದಿದೆ.
ಕರ್ನಾಟಕ ರಾಜ್ಯವು, ತೆಲಂಗಾಣ ಅಥವಾ ಭಾರತದ ಯಾವುದೇ ರಾಜ್ಯದೊಂದಿಗೆ ಸ್ಪರ್ಧೆಯಲ್ಲ, ಅದರ ಸ್ಪರ್ಧೆ ಇರುವುದು ಚೀನಾ ದೇಶದೊಂದಿಗೆ. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುತ್ತಿದ್ದು, ಆವಿಷ್ಕಾರ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ, ಸೇವೆಗಳ ರಫ್ತಿನಲ್ಲಿ, ಎಲೆಕ್ಟ್ರಾನಿಕ್ಸ್ ವಿನ್ಯಾಸದಲ್ಲಿ ಮೊದಲ ಸ್ಥಾನದಲ್ಲಿದೆ. ದೇಶದ ವಿದೇಶಿ ನೇರ ಹೂಡಿಕೆಯಲ್ಲಿ ರಾಜ್ಯದ ಪ್ರಮಾಣ ಶೇಕಡಾ 38ರಷ್ಟಿದೆ.
ಎಫ್‌ಐಸಿಸಿಐ- FICCI ಅಧ್ಯಕ್ಷ ಶ್ರೀ ಉಲ್ಲಾಸ್ ಕಾಮತ್ ಅವರು ಮಾನವ ರಹಿತ ವೈಮಾನಿಕ ವಾಹನಗಳಿಗೆ(UAV) ಕ್ಲಸ್ಟರ್ ಮತ್ತು ಡ್ರೋನ್ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು, ರಾಜ್ಯವು ಅಂತರಿಕ್ಷಯಾನ ಮತ್ತು ರಕ್ಷಣಾ ಕೇಂದ್ರವಾಗಿದ್ದು, ಈ ವಲಯಗಳ ಉತ್ಪಾದನೆಯಲ್ಲಿ ಸುಮಾರು ಶೇಕಡಾ 65ರಷ್ಟು ಕೊಡುಗೆ ನೀಡುತ್ತಿದೆ ಎಂದರು.
ಕೃಷಿಯನ್ನು ಮತ್ತಷ್ಟು ರೂಪಾಂತರಗೊಳಿಸುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರ ಸೂಚನೆ ನೀಡಿದ ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ, ರಾಜ್ಯದಲ್ಲಿ ತಾಂತ್ರಿಕ ಪ್ರಗತಿಯ ಮಹತ್ವ ಮತ್ತು ಕೃಷಿಯ ಮೇಲೆ ಅದರ ಪ್ರಭಾವವನ್ನು ಒತ್ತಿ ಹೇಳಿದರು.