ಕಾಸರಗೋಡು ಕನ್ನಡತನವೇ ಮೇಳೈಸಿರುವ ಸಪ್ತ ಭಾಷಾ ಸಂಗಮದ ಕನ್ನಡದ ಬೀಡು: ಕೆ.ವಿ.ಪ್ರಭಾಕರ್ 

ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿ ರಾಜಕೀಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಡಿನಾಡ ಅಭಿವೃದ್ಧಿಗೆ ಸದಾ ಸಿದ್ಧರು

ಕಾಸರಗೋಡು : ಕಾಸರಗೋಡು ಸಪ್ತಭಾಷಾ ಸಂಗಮದ ಕನ್ನಡದ ಬೀಡಾಗಿದೆ. ನಿತ್ಯ ಕನ್ನಡತನವೇ ಮೇಳೈಸಿರುವ, ಕನ್ನಡತನವನ್ನೇ ಆಚರಿಸುತ್ತಿರುವ ಕನ್ನಡದ ಬೀಡು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ  ಅಕಾಡೆಮಿ ಹಮ್ಮಿಕೊಂಡಿದ್ದ ಗಡಿನಾಡ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿದ ಬಳಿಕ ನಾನಾ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.

 

ಕಾಸರಗೋಡು ಗಡಿ ನಾಡು ಆಗಿದ್ದರೂ ಇಲ್ಲಿ ಕನ್ನಡದ ಮನಸ್ಸುಗಳು ಕನ್ನಡತನದ ವಾತಾವರಣವನ್ನು ನಿತ್ಯ ಆಚರಣೆಯಲ್ಲಿ ಇಟ್ಟಿವೆ. ಇವರೆಲ್ಲರೂ ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಂಕಣಿ ಮನೆಮಾತಾಗಿದ್ದ ಮಂಜೇಶ್ವರದ ಗೋವಿಂದ ಪೈಗಳು ಕನ್ನಡದ ಮೊದಲ ರಾಷ್ಟ್ರಕವಿಗಳು. 

ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಎಂದು ತಮ್ಮ ಕವನದ ಮೂಲಕ ಇಲ್ಲಿನ ಕನ್ನಡ ಸಮುದಾಯವನ್ನು ಎಚ್ಚರಿಸಿದ ಶತಾಯುಷಿ ಕಯ್ಯಾರ ಕಿಞ್ಣಣ್ಣ ರೈ ಅವರ ಮನೆ ಮಾತು ತುಳು. ಇವರು ಕೊನೆಯ ಉಸಿರಿನವರೆಗೂ ನಾನು ಸಾಯುವುದು “ಕರ್ನಾಟಕದಲ್ಲಿ ಕಾಸರಗೋಡು ವಿಲೀನವಾದ ನಂತರ” ಎನ್ನುತ್ತಲೇ ಇದ್ದರು.

 

ಕಾಸರಗೋಡಿನ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿರುವ ರತ್ನಾಕರ ಬಳ್ಳಮೂಲೆ ಅವರ ಮನೆ ಮಾತು ಮಲಯಾಳ. ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ ಕೂಡ ಇಲ್ಲಿಯವರು. ಹೀಗೆ ಬೇರೆ ಬೇರೆ ಭಾಷೆಗಳ ಮನೆಮಾತಾದವರೆಲ್ಲ ಇಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಬದುಕನ್ನು ರೂಪಿಸಿದ್ದಾರೆ ಎಂದು ಕಾಸರಗೋಡಿನ ಕನ್ನಡ ಸಾಂಸ್ಕೃತಿಕ ಚರಿತ್ರೆಯನ್ನು ಸ್ಮರಿಸಿಕೊಂಡರು. 

ಕಾಸರಗೋಡು ಕನ್ನಡದ ಬೀಡು, ಇಲ್ಲಿರುವುದು ಕನ್ನಡದ ನೆಲೆ’ ಎನ್ನುವುದು ಇಲ್ಲಿನ ಕನ್ನಡದ ವಾತಾವರಣ ನೋಡಿ ಮನದಟ್ಟಾಗಿದೆ. ಬೆಂಗಳೂರು ಕೇಂದ್ರಿತ ಕನ್ನಡ ಹೋರಾಟಗಾರರ ಅಭಿಪ್ರಾಯ ಭಿನ್ನವಾಗಿರಬಹುದು. ಆದರೆ ನಾನು ಇಲ್ಲಿಗೆ ಬರುವಾಗ ದಾರಿಯುದ್ದಕ್ಕೂ ಕನ್ನಡದ ಫಲಕ ಮತ್ತು ಬ್ಯಾನರ್ ಗಳನ್ನು ನೋಡಿಕೊಂಡೇ ಬಂದೆ. ಇಲ್ಲಿನ ಕನ್ನಡದ ವಾತಾವರಣ ಗಟ್ಟಿಯಾಗಿದೆ ಎಂದರು.

ಈಗ ಈ ನಾಡನ್ನು ಸಪ್ತಭಾಷಾ ಸಂಗಮ ಭೂಮಿ ಎಂದು ಕರೆಯುವ ಮೂಲಕ ಕೇರಳ ಸರ್ಕಾರ ಹಂತಹಂತವಾಗಿ ಕನ್ನಡ ನುಡಿ, ಸಂಸ್ಕೃತಿಗೆ ಮಾರಕ ಆಗುತ್ತಿದೆ ಎನ್ನುವ ಅಸಮಾಧಾನ ಹಲವರಲ್ಲಿದೆ. ಇದು ಸಪ್ತಭಾಷಾ ಸಂಗಮದ ನಾಡು ಎನ್ನುವುದು ನಿಜವೇ. ಆದರೆ, ಇದು ಸಪ್ತ ಭಾಷಾ ಸಂಗಮದ ಕನ್ನಡದ ಬೀಡು” ಎನ್ನುವುದು ಇಲ್ಲಿನ‌ ಕನ್ನಡದ ವಾತಾವರಣ ಋಜು ಮಾಡುತ್ತಿದೆ ಎಂದರು.

 

ಭಾಷಾ ಅಲ್ಪಸಂಖ್ಯಾತ ಪ್ರದೇಶವೆಂದು ಗುರುತಿಸಲಾದ ಕಾಸರಗೋಡು ಪ್ರದೇಶದಲ್ಲಿ ಕನ್ನಡ ಕಲೆ, ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಗಳಾಗಿದ್ದಾಗಲೂ ಸಾಕಷ್ಟು ಆಸಕ್ತಿ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರುಗಳಾಗಿದ್ದ ಎಸ್.ಜಿ.ಸಿದ್ದರಾಮಯ್ಯ ಮತ್ತು ಎಲ್.ಹನುಮಂತಯ್ಯ ಅವರು ನಿರಂತರವಾಗಿ ನಾನಾ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಂಡಿದ್ದರು. ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದಾಗಿನಿಂದಲೂ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಡಿನಾಡ ಕನ್ನಡಿಗರ ಹಿತ ಕಾಪಾಡಲು ನಿರಂತರ ಶ್ರಮಿಸಿದ್ದಾರೆ ಎಂದರು. 

ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ನಾಡಿಗೆ ಸೇವೆ ಸಲ್ಲಿಸಿದ ಹಲವರಿಗೆ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಇದೇ ಸಂದರ್ಭದಲ್ಲಿ ನೀಡಿ ಸನ್ಮಾನಿಸಲಾಯಿತು.

 

ಒಡೆಯೂರು ಸಂಸ್ಥಾನದ ಮಾತೆ ಅಮೃತಾನಂದಮಯಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ರಮೇಶ್ ಜಿಗಜಿಣಗಿ ಸೇರಿ ಅಕಾಡೆಮಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

Facebook
Twitter
LinkedIn
WhatsApp
Print
Telegram

Leave a Comment

Your email address will not be published. Required fields are marked *

Translate »
Scroll to Top