ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಬಣ ಬಡಿದಾಟ ಜೋರಾಗಿದೆ. ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಬಿ ವೈ ವಿಜಯೇಂದ್ರ ವಿರೋಧ ಬಣ ಹೈಕಮಾಂಡ್ ಗೆ ಒತ್ತಡ ಹಾಕಿದ್ದು, ಇದೀಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಇನ್ನು ಮಾಜಿ ಸಚಿವ ಕೆ ಶಿವನಗೌಡ ಅವರು ವಿಜಯೇಂದ್ರ ಮುಖ್ಯಮಂತ್ರಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಈ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ವಿಜಯೇಂದ್ರ ಮುಂದೆ ಸಿಎಂ ಆಗೇ ಆಗುತ್ತಾರೆ. ಅಧಿಕಾರದ ಕತ್ತಿ ಹಿಡಿದು ಸರ್ಕಾರವನ್ನು ತರಬೇಕಿದೆ ಎಂದು ಹೇಳಿದ್ದಾರೆ.
ಅಲ್ಲದೇ ನೀವು ಅಧಿಕಾರಕ್ಕೆ ಬಂದು ನಮಗೆ ನವಲಿ ಜಲಾಶಯ ಮಾಡಿ, ಹತ್ತಾರು ಕೆರೆಗಳನ್ನ ಮಾಡಿ ನೀರು ತುಂಬಿಸಬೇಕು. ಜಿಲ್ಲೆಯಲ್ಲಿ ಜನ ಏಮ್ಸ್ ಹೋರಾಟ ನಿರಂತರವಾಗಿ ಮಾಡುತ್ತಿದ್ದಾರೆ. ವಿಜಯೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಜೆ.ಪಿ ನಡ್ಡಾ, ಅಮಿತ್ ಶಾ ಅವರ ಮನವೊಲಿಸಿ ಏಮ್ಸ್ ತರಬಹುದು. ಅದು ವಿಜಯೇಂದ್ರ ಅವರಿಂದ ಸಾಧ್ಯವಿದೆ ಎಂದು ಹೇಳಿದ್ದಾರೆ. ಮಾಜಿ ಸಚಿವ ಕೆ ಶಿವನಗೌಡ ಅವರ ಹೇಳಿಕೆ ಕುರಿತು ಬಿಜೆಪಿ ರಾಜ್ಯಾಧಕ್ಷ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಮುಂದೆ ಭಗವಂತ ಶಕ್ತಿ ಕೊಟ್ಟಾಗ ಜಿಲ್ಲೆಯ ನೀರಾವರಿ ಯೋಜನೆಗಳು, ಯುವಕರಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇನೆ. ಈಗಲೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಭಗವಂತ ಶಕ್ತಿ ಕೊಟ್ಟರೆ ಈ ಭಾಗದ ಜನರ ಸರ್ವಾಂಗೀಣ ಅಭಿವೃದ್ಧಿಗೆ ನಾನು ಶ್ರಮವಹಿಸಿ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ಏಮ್ಸ್ ಬೇಡಿಕೆ ಇದೆ. ಅದಕ್ಕಾಗಿ ನಿರಂತರ ಹೋರಾಟ ನಡೆದಿದೆ. ನೀರಾವರಿ ಯೋಜನೆ ಬಗ್ಗೆಯೂ ಕೇಳುತ್ತಿದ್ದಾರೆ. ಈ ವಿಚಾರವಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಸಿಎಂ ಆಗುವ ಇಂಗಿತವನ್ನ ಪರೋಕ್ಷವಾಗಿ ವಿಜಯೇಂದ್ರ ವ್ಯಕ್ತಪಡಿಸಿದ್ದಾರೆ.
ಭಗವಂತನ ಕೃಪೆಯಿಂದ, ಪರಮಪೂಜ್ಯರ ಆಶೀರ್ವಾದದಿಂದ ಮುಂದೆ ಭಗವಂತ ಶಕ್ತಿ ಕೊಟ್ಟ ದಿನಗಳಲ್ಲಿ ಈ ಭಾಗದ ನೀರಾವರಿ ಯೋಜನೆಗಳಿಗೆ ಒತ್ತು ಕೊಡುತ್ತೇನೆ. ಯುವಕರಿಗೆ ಉದ್ಯೋಗ ಕೊಡಲು ಕೈಗಾರಿಕೆಗಳನ್ನು ಆರಂಭಿಸಲು ಶ್ರಮಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಇಲ್ಲಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. ಶುದ್ಧ ಕುಡಿಯುವ ನೀರಿಗಾಗಿ ತಾಯಂದಿರು ಕೊಡಪಾನದೊಂದಿಗೆ ಮೂರ್ನಾಲ್ಕು ಕಿಮೀ ದೂರಕ್ಕೆ ಹೋಗಬೇಕಾದ ದಾರುಣ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಭಗವಂತ ಶಕ್ತಿ ಕೊಟ್ಟರೆ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಾನು, ಶಿವನಗೌಡ ನಾಯಕ್, ಬೈರತಿ ಬಸವರಾಜು, ಜನಾರ್ದನ ರೆಡ್ಡಿ, ಡಾ.ಶಿವರಾಜ ಪಾಟೀಲ್ ಸೇರಿ ಎಲ್ಲರೂ ಒಟ್ಟಾಗಿ ಒಂದಾಗಿ ಈ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕ ಭಾಗದ ಮಹಾ ಜನತೆ ಹೂಮಳೆಗರೆದು ನೀಡಿದ ಸ್ವಾಗತಕ್ಕೆ ಹೃದಯ ತುಂಬಿ ಬಂತು ಎಂದ ಅವರು ಇಲ್ಲಿನ ಜನರ ಹೃದಯ ಶ್ರೀಮಂತಿಕೆಯನ್ನು ಕೊಂಡಾಡಿದರು. ಶಿವನಗೌಡ ನಾಯಕರು ತಮ್ಮ ಪರಂಪರೆಯ ರಾಜ ಮನೆತನದ ಮದುವೆಗಿಂತಲೂ ಕಡಿಮೆ ಇಲ್ಲದ ರೀತಿಯಲ್ಲಿ ಇಂದು ಅದ್ದೂರಿಯಾಗಿ ಮದುವೆ ನೆರವೇರಿಸಿದ್ದಾರೆ. ಸಮಾಜದ ಎಲ್ಲ ಸ್ತರದ ಬಂಧುಗಳನ್ನು ಸಂಪರ್ಕಿಸಿ ಹೆಣ್ಣು ಮಕ್ಕಳಿಗೆ ಮಾಂಗಲ್ಯ ಧಾರಣೆಯ ಕಲ್ಯಾಣ ಕಾರ್ಯ ನೆರವೇರಿಸುತ್ತಿದ್ದಾರೆ. ಇಂದು ವಿವಾಹವಾಗುತ್ತಿರುವ ಗಂಡು ಮಕ್ಕಳ ಜೀವನದಲ್ಲಿ ಒಂದು ಹೊಸ ಬೆಳಕನ್ನು ಮೂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು, ಪರಮಪೂಜ್ಯ ವೀರಭದ್ರ ಶಿವಾಚಾರ್ಯ ಶ್ರೀಗಳು, ಪೂಜ್ಯ ಹಜರತ್ ಸೈಯದ್ ನುಸರತ್ ಮೀಯಾ ಚಿಸ್ತಿ ಗುರುಗಳು, ಮಾಜಿ ಸಚಿವ ಹಾಗೂ ರಾಜ್ಯ ಉಪಾಧ್ಯಕ್ಷ ಬೈರತಿ ಬಸವರಾಜು, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಮಾಜಿ ಸಂಸದ ಬಿ.ವಿ.ನಾಯಕ್, ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಡಾ ಶೈಲೇಂದ್ರ ಬೆಲ್ದಾಳೆ, ರಾಯಚೂರು ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ್ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ಮಾಜಿ ಶಾಸಕ ಬಸವರಾಜ್ ದಡೇಸುಗೂರು ಸೇರಿದಂತೆ ವಿವಿಧ ಮಠಗಳ ಪರಮಪೂಜ್ಯ ಶ್ರೀಗಳು, ಸಮಾಜದ ಪ್ರಮುಖರು ಹಾಗೂ ಬಂಧುಗಳು ಉಪಸ್ಥಿತರಿದ್ದರು.