ತೆಲಂಗಾಣ/ಕೊಲ್ಲಾಪುರ: ಕೊಲ್ಲಾಪುರ ಕಾಂಗ್ರೆಸ್ ಅಭ್ಯರ್ಥಿ ಜೂಪಲ್ಲಿ ಕೃಷ್ಣಾರಾವ್ ಅವರು ಈಗಾಗಲೇ ಗೆಲುವು ಸಾಧಿಸಿದ್ದಾರೆ, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ ಎಂದು ನಾನು ನಮ್ಮ ಪಕ್ಷದ ವಕ್ತಾರರಿಗೆ ತಿಳಿಸಿದ್ದೇನೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಪಾನಗಲ್ ಮಂಡಲದಲ್ಲಿ ಏರ್ಪಡಿಸಿದ್ದ ಮತ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಳೆದ ಐದು ವರ್ಷಗಳ ಕಾಲ ಟಿಆರೆಸ್ ದುರಾಡಳಿತದಿಂದ ಜನರು ಸಂಕಷ್ಟ ಅನುಭವಿಸಿದ್ದಾರೆ, ಅದಕ್ಕೆ ಸರಿಯಾದ ಉತ್ತರ ನೀಡುವ ಸಂದರ್ಭ ಈಗ ಬಂದಿದೆ, ಮತದಾರರು ತಕ್ಕ ಉತ್ತರ ನೀಡಿ ಟಿಆರೆಸ್ ಪಕ್ಷವನ್ನು ಕೆಳಗಿಳಿಸಬೇಕಿದೆ ಎಂದರು.
ಸಿಎಂ ಕೆಸಿಆರ್ ಅವರು ಸ್ವಜನಪಕ್ಷಪಾತ ಮಾಡಿದ್ದಾರೆ, ಕುಟುಂಬದ ಪರ ಇದ್ದಾರೆ, ಜನರ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ ಹೀಗಾಗಿ ಅವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ತೆಲಂಗಾಣ ರಾಜ್ಯ ರಚನೆ ಆಗಿ ಕೆಸಿಆರ್ ಸಿಎಂ ಆದ ನಂತರ ಯುವಕರಿಗೆ ಉದ್ಯೋಗ ನೀಡಲಿಲ್ಲ, ರಾಜ್ಯದಲ್ಲಿ 30 ಲಕ್ಷ ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಆಕಾಂಕ್ಷಿಗಳಿಗೆ ಉದ್ಯೋಗ ಸಿಗಲಿದೆ ಎಂದರು.
ಕರ್ನಾಟಕ ಕಾಂಗ್ರೆಸ್ ಭರವಸೆ ನೀಡಿದ್ದ ಗ್ಯಾರಂಟಿಗಳ ಬಗ್ಗೆ ತೆಲಂಗಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ, ಗ್ಯಾರಂಟಿಗಳನ್ನು ಜಾರಿಗೊಳಿಸಿಲ್ಲ ಎಂದು ಹೇಳುತ್ತಿದ್ದಾರೆ, ನಮ್ಮ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ, ಈಗಾಗಲೇ ರಾಜ್ಯದ 1 ಕೋಟಿ ಜನ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ, ಪ್ರತಿ ತಿಂಗಳು 2 ಸಾವಿರ ರೂ. ನೀಡಲಾಗುತ್ತಿದೆ, ಪ್ರತಿ ಅರ್ಹ ಫಲಾನುಭವಿಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ, ಚುನಾವಣೆಯ ನಂತರ ಕೆಸಿಆರ್ ಮತ್ತವರ ಮಗ, ಅಳಿಯ ಮಾಜಿ ಆಗುತ್ತಾರೆ, ಆಗ ನಾನೇ ನನ್ನ ಸ್ವಂತ ಖರ್ಚಿನಲ್ಲಿ ಕರ್ನಾಟಕಕ್ಕೆ ಕರೆದೊಯ್ದು ತೋರಿಸುತ್ತೇನೆ ಎಂದರು.
ಅಭ್ಯರ್ಥಿ ಜೂಪಲ್ಲಿ ಕೃಷ್ಣಾರಾವ್ ಪುತ್ರ ಜೂಪಲ್ಲಿ ಅರುಣ್ ಮಾತನಾಡಿ, ಇಡೀ ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ, ನನ್ನ ತಂದೆ ಕೃಷ್ಣಾರಾವ್ ಅವರು ವಿಧಾನಸಭೆ ಪ್ರವೇಶಿಸುವುದು ನಿಶ್ಚಿತ. ಅದೇ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ತೆಲಂಗಾಣ ರಾಜ್ಯವನ್ನು ರಚಿಸಿದ ಕಾಂಗ್ರೆಸ್ಸಿಗೆ, ಸೋನಿಯಾ ಗಾಂಧಿಯವರಿಗೆ ಧನ್ಯವಾದ ಹೇಳಬೇಕಿದೆ, ಈ ಚುನಾವಣೆ ಮೂಲಕ ಸೋನಿಯಾ ಗಾಂಧಿಯವರಿಗೆ ಧನ್ಯವಾದ ಹೇಳೋಣ ಎಂದರು.
ಇಂದು ರಾಜ್ಯದಲ್ಲಿ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ, ಸಣ್ಣ ಸಣ್ಣ ಕೆಲಸ ಮಾಡುವಂತಾಗಿದೆ ಎಂದ ಅವರು, ಸಿಎಂ ಕೆಸಿಆರ್ ಅವರು ಕೊಟ್ಟ ಭರವಸೆ ಈಡೇರಿಸದೇ ವಚನಭ್ರಷ್ಟರಾಗಿದ್ದಾರೆ ಎಂದು ಜೂಪಲ್ಲಿ ಅರುಣ್ ಹೇಳಿದರು.
ಸಿಎಂ ಕೆಸಿಆರ್ ಅವರಿಗೆ ಉತ್ತರ ನೀಡುವ ಸಮಯ ಬಂದಿದೆ, ಕಾಂಗ್ರೆಸ್ಸಿನ ಗ್ಯಾರಂಟಿಗಳು ಜಾರಿಗೆ ಬಂದರೆ ಜನರ ಕಲ್ಯಾಣ ಆಗಲಿದೆ ಎಂದು ಜೂಪಲ್ಲಿ ಅರುಣ್ ಹೇಳಿದರು.
ಬಳ್ಳಾರಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹುಸೇನ್ ಪೀರಾ, ಕೆ.ಎನ್.ಎಂ. ಅಭಿಲಾಶ್, ಪಾಲಿಕೆ ಸದಸ್ಯ ವಿ.ಶ್ರೀನಿವಾಸುಲು(ಮಿಂಚು), ಕಾಂಗ್ರೆಸ್ ಮುಖಂಡ ಬಿಆರೆಲ್ ಶ್ರೀನಿವಾಸ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.