ಬೆಂಗಳೂರು: ಎನ್‌ಡಿಎ ಮೈತ್ರಿಕೂಟಕ್ಕೆ ಧಕ್ಕೆ ತರುವ ರೀತಿಯಲ್ಲಿ ಮುಂದೆಯೂ ನಡೆದುಕೊಂಡರೆ ನಿಮ್ಮನ್ನು ಪಕ್ಷದಿಂದ ಉಚ್ಛಾಟಿಸಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಮ್ಮಿಕೊಂಡಿರುವ ಬೆಂಗಳೂರು-ಮೈಸೂರು ಪಾದಯಾತ್ರೆ ಸಂದರ್ಭದಲ್ಲಿ ಪ್ರೀತಂಗೌಡ ಅವರ ಬೆಂಬಲಿಗರು ಮಂಡ್ಯದಲ್ಲೇ ಗಲಾಟೆ ಎಬ್ಬಿಸಿದ್ದರು.
ಗುದ್ದಾಡುವ ಪರಿಸ್ಥಿತಿ
ಸರಾಗವಾಗಿ ಸಾಗಿದ್ದ ಪಾದಯಾತ್ರೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಕಾರ್ಯಕರ್ತರೇ ರಸ್ತೆಯಲ್ಲಿ ಗುದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಘಟನೆಯಿಂದ ಬೇಸರಗೊಂಡ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ನಡ್ಡ ಅವರನ್ನು ಮನೆಗೆ ಕರೆಸಿಕೊಂಡು, ಪಾದಯಾತ್ರೆ ಮತ್ತು ಅದರ ಹಿಂದಿರುವ ಶಕ್ತಿಗಳ ಬಗ್ಗೆ ಮಾಹಿತಿ ನೀಡಿದರು.
ಗೌಡರಿಂದ ಮಾಹಿತಿ ಪಡೆದ ನಡ್ಡ ಅವರು, ಪ್ರೀತಂ ಗೌಡ ಅವರನ್ನು ದೂರವಾಣಿ ಮೂಲಕ ನೇರವಾಗಿ ಸಂಪರ್ಕಿಸಿ, ಇಂತಹ ಚಟುವಟಿಕೆಗಳನ್ನು ಮುಂದುವರೆಸಿದರೆ, ನೇರ ಕ್ರಮ ಕೈಗೊಳ್ಳಬೇಕಾಗುತ್ತದೆ, ಮತ್ತೆ ಎಚ್ಚರಿಕೆ ಇರುವುದಿಲ್ಲ ಎಂದಿದ್ದಾರೆ.