ಬೆಂಗಳೂರು: ನಗರದ ಸ್ನೇಹ ಸೇವಾ ಟ್ರಸ್ಟ್ ನಿಂದ ನೂರಾರು ಬಡ ವಿದ್ಯಾರ್ಥಿಗಳಿಗೆ “ಜ್ಞಾನಸಿರಿ ವಿದ್ಯಾರ್ಥಿ ವೇತನ” ವಿತರಣೆ ಮಾಡಲಾಯಿತು.
ಬಸವನಗುಡಿಯ ವಾಸವಿ ಕನ್ವೆನ್ಸನ್ ಹಾಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 25 ವರ್ಷಗಳಿಗಿಂತ ಅಧಿಕ ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಸ್ನೇಹ ಸೇವಾ ಟ್ರಸ್ಟ್ ಶಿಕ್ಷಣ, ಆರೋಗ್ಯ ಮತ್ತು ಸ್ವಾವಲಂಬನೆ ಒಳಗೊಂಡಂತೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಧನಾತ್ಮಕ ಪರಿವರ್ತನೆ ತರುವ ಕೆಲಸಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ಸಮಯ ಪಾಲನೆ, ಸಂವಹನ ಕಲೆ, ಪ್ರಾಥಮಿಕ ಕಂಪ್ಯೂಟರ್ ಜ್ಞಾನ, ಕೌಶಲ್ಯ ತರಬೇತಿ ಜೊತೆಗೆ ಪ್ರತಿ ವರ್ಷ 1,000 ವಿದ್ಯಾರ್ಥಿಗಳಿಗೆ ಸ್ಕೂಲ್ ಕಿಟ್ ವಿತರಿಸುತ್ತಿದೆ.
ಎಪಿಎಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ, ಒಮ್ಮೆ ಜ್ಞಾನ ಗಳಿಸಿದರೆ ಅದು ಶಾಶ್ವತ ಮತ್ತು ಯಾರೂ ದರೋಡೆ ಮಾಡಲು ಸಾಧ್ಯವಿಲ್ಲ. ಸತತ ಪರಿಶ್ರಮ, ಬದ್ಧತೆಯಿಂದ ಅಧ್ಯಯನ ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಮುಖ್ಯ ಅತಿಥಿಗಳಾಗಿ ಕಾನಾಡ್ ಕಂಪನಿಯ ಮಾಲೀಕ ಸುಂದರ್ ಕಣ್ಣನ್, ಎಂ.ಎಸ್. ಮೆಟಲ್ಸ್ ನಿರ್ದೇಶಕ ಸಚಿನ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.