ಬೆಂಗಳೂರು : ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಆಂತರಿಕವಾಗಿ ಸಾಕಷ್ಟು ಸಮಸ್ಯೆಗಳಿರುವ ಬೆನ್ನಲ್ಲೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿಯಾಗಿ ಪರಿಣಮಿಸಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯವಾಗಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಚನ್ನಪಟ್ಟಣ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸತ್ಗೆ ಆಯ್ಕೆಗೊಂಡ ನಂತರ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.
ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರವನ್ನು ಶತಾಯ-ಗತಾಯ ಕಸಿದುಕೊಳ್ಳಬೇಕೆಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕ್ಷೇತ್ರ ತೆರವಾದ ದಿನದಿಂದಲೂ ಸ್ಥಳೀಯ ರಾಜಕೀಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.
ಶಿವಕುಮಾರ್ ಅಷ್ಟೇ ಅಲ್ಲದೆ, ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕೆಂದು ಒಂದೆಡೆ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಹಲವು ಪಟ್ಟುಗಳನ್ನು ಹಾಕಿದ್ದಾರೆ.
ಎನ್ಡಿಎ ಮೈತ್ರಿ ಕೂಟದ ಜೆಡಿಎಸ್ಗೆ ಈ ಕ್ಷೇತ್ರ ಬಿಟ್ಟುಕೊಡುವ ತೀರ್ಮಾನವನ್ನು ಬಿಜೆಪಿ ನಾಯಕರು ಮಾಡಿದ್ದಾರೆ.
ಶಿವಕುಮಾರ್ ಹಾಗೂ ಯೋಗೇಶ್ವರ್ ಚನ್ನಪಟ್ಟಣದಲ್ಲಿ ರಾಜಕೀಯ ಕಸರತ್ತುಗಳನ್ನು ನಡೆಸುತ್ತಿದ್ದರೂ ಕುಮಾರಸ್ವಾಮಿ, ಇದುವರೆಗೂ ತಮ್ಮ ಅಭ್ಯರ್ಥಿ ಯಾರೆಂದು ಬಹಿರಂಗ ಪಡಿಸಿಲ್ಲ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬಕ್ಕಾದ ಹಿನ್ನಡೆಯನ್ನು ಉಪಚುನಾವಣೆಯಲ್ಲಿ ಸಹೋದರ ಸುರೇಶ್ ಅವರನ್ನು ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಕುಮಾರಸ್ವಾಮಿ ವಿರುದ್ಧ ಸೇಡು ತೀರಿಸಿಕೊಳ್ಳಲು ಶಿವಕುಮಾರ್ ಟೊಂಕಕಟ್ಟಿ ನಿಂತಿದ್ದಾರೆ.
ಇದಕ್ಕೆ ತೆರೆಮರೆಯಲ್ಲಿ ಸಿ.ಪಿಯೋಗೇಶ್ವರ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರನ್ನು ಸೆಳೆಯುವ ಪ್ರಯತ್ನವನ್ನೂ ಮುಂದುವರೆಸಿದ್ದಾರೆ.
ತಮ್ಮಿಂದ ತೆರವಾದ ಸ್ಥಾನಕ್ಕೆ, ಯೋಗೇಶ್ವರ್ ವರಿಷ್ಠರಿಂದ ಟಿಕೆಟ್ ಪಡೆದು ಬಂದರೆ ಅವರನ್ನು ಬೆಂಬಲಿಸಲು ಕುಮಾರಸ್ವಾಮಿ ಸಿದ್ಧರಿದ್ದಾರೆ, ಅದನ್ನೂ ಯೋಗೇಶ್ವರ್ ಅವರಿಗೂ ತಿಳಿಸಿದ್ದಾರೆ.
ಇವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತೀವ್ರ ವಿರೋಧವಿದೆ, ಅಲ್ಲಿಂದ ಜೆಡಿಎಸ್ನವರೇ ಸ್ಪರ್ಧಿಸಲಿ ಎಂಬ ಮಾಹಿತಿಯನ್ನು ವರಿಷ್ಠರಿಗೂ ನೀಡಿದ್ದಾರೆ.
ಇದು ಯೋಗೇಶ್ವರ್ ಅವರಿಗೆ ನುಂಗಲಾರದ ತುತ್ತಾಗಿದೆ, ತಮಗೆ ಬಿಜೆಪಿ ಟಿಕೆಟ್ ನೀಡದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳುವ ಅವರು, ಮತ್ತೊಂದೆಡೆ ಶಿವಕುಮಾರ್ ಅವರೊಂದಿಗೆ ವೇದಿಕೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಕ್ಷೇತ್ರದ ಅಭ್ಯರ್ಥಿ ತೀರ್ಮಾನ
ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರು ಬಹಿರಂಗವಾಗಿ ತಮ್ಮ ನಿಲುವು ಪ್ರಕಟಿಸಿದ ನಂತರವಷ್ಟೇ ಕುಮಾರಸ್ವಾಮಿ, ಕ್ಷೇತ್ರದ ಅಭ್ಯರ್ಥಿ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಶಿವಕುಮಾರ್, ಯೋಗೇಶ್ವರ್ ಅವರನ್ನು ಎದುರಿಸುವಂತಹ ಸಮರ್ಥ ಕಾರ್ಯಕರ್ತ ಅಥವಾ ಮುಖಂಡ ಕುಮಾರಸ್ವಾಮಿ ಅವರಿಗೆ ಕಂಡುಬರುತ್ತಿಲ್ಲ.
ಶಿವಕುಮಾರ್ ನೀಡಿರುವ ಪಂಥಾಹ್ವಾನವನ್ನು ಸ್ವೀಕರಿಸಲು ಕುಮಾರಸ್ವಾಮಿ ಬಲಿಷ್ಠರನ್ನೇ ಕಣಕ್ಕಿಳಿಸಬೇಕಾಗಿದೆ, ಆದರೆ ಅದು ಯಾರೆಂದು ಇನ್ನೂ ಬಹಿರಂಗ ಪಡಿಸಿಲ್ಲ.