ಸಚಿವರ ರಾಜೀನಾಮೆಗೆ ಪಟ್ಟು, ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದ ಹೆಚ್.ಎಂ.ರಮೇಶ್ ಗೌಡ
ಸಚಿವರನ್ನು ಸರಕಾರವೇ ಸಮರ್ಥಿಸಿದರೆ ದಲಿತ ಕುಟುಂಬಕ್ಕೆ ನ್ಯಾಯ ಸಿಗದು
ಬೆಂಗಳೂರು : ದಲಿತ ಕುಟುಂಬದ ಭೂಮಿಗೆ ಸಂಬಂಧಪಟ್ಟಂತೆ ದರ್ಪ, ದೌರ್ಜನ್ಯ ಎಸಗಿರುವ ಸಚಿವ ಡಿ.ಸುಧಾಕರ್ ಅವರು ಕೂಡಲೇ ರಾಜೀನಾಮೆ ನೀಡಬೇಕು, ಅವರು ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿ ಅವರೇ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಜೆಡಿಎಸ್ ಪಕ್ಷ ಒತ್ತಾಯ ಮಾಡಿದೆ. ದಲಿತರ ಮೇಲೆ ದೌರ್ಜನ್ಯ ಎಸಗಿರುವ ಸಚಿವರ ವಿರುದ್ಧ ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ಅವರ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಸಚಿವರ ದೌರ್ಜನ್ಯ ಅಮಾನುಷ : ರಮೇಶ್ ಗೌಡ
ದಲಿತ ಕುಟುಂಬ ಹಾಗೂ ದಲಿತ ಮಹಿಳೆಯ ಮೇಲೆ ಸಚಿವರು, ಮತ್ತವರ ಬಂಟರು ದೌರ್ಜನ್ಯ ಎಸಗಿರುವುದು ಅಮಾನುಷ. ಇದನ್ನು ಜೆಡಿಎಸ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ ಎಂದು ಹೆಚ್.ಎಂ.ರಮೇಶ್ ಗೌಡ ಹೇಳಿದರು. ಸಚಿವ ಡಿ.ಸುಧಾಕರ್ ವರ್ತನೆ ತಪ್ಪು. ಅವರ ಭಾಷೆ ಸರಿ ಇಲ್ಲ. ಮಚ್ಚು ಕೊಡಲಿ ಹಿಡಿದು ಓಡಾಡುತ್ತಿದ್ದೆವು ಎಂದು ಹೇಳಿದರೆ ಅರ್ಥವೇನು? ಸಿಎಂ, ಡಿಸಿಎಂ ಸಚಿವರದ್ದು ತಪ್ಪಿಲ್ಲ ಅಂತಾರೆ. ಸಚಿವರ ಮೇಲೆ ಎಫ್ಐಆರ್ ದಾಖಲೆ ನಂತರ ರಾಜೀನಾಮೆ ನೀಡಬೇಕು. ಸಚಿವರಿಗೆ ಕಾನೂನಿನ ಮೇಲೆ ಗೌರವ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಪಡಿಸಿದರು.
ಬಿಜೆಪಿ ಸರ್ಕಾರ ಇದ್ದಾಗ ಸಚಿವರ ವಿರುದ್ಧ ಎಫ್ ಐಆರ್ ದಾಖಲಾದ ತಕ್ಷಣ ಕಾಂಗ್ರೆಸ್ ಪ್ರತಿಭಟನೆ ಮಾಡಿತ್ತು. ದಲಿತ, ಅಲ್ಪಸಂಖ್ಯಾತ, ಹಿಂದುಳಿತ ಉದ್ಧಾರಕ್ಕೆ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಇವರು ಹೇಳುತ್ತಿದ್ದಾರೆ. ಪರಿಶಿಷ್ಟ ಜಾತಿ/ ಪಂಗಡಗಳ ಭೂಮಿ ವರ್ಗಾವಣೆ ನಿಷೇಧ (ಪಿಟಿಸಿಎಲ್) ಕಾಯ್ದೆ ಜಾರಿಗೆ ತಂದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಸಚಿವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರವೇ ಸಚಿವರ ಪರ ನಿಂತರೆ ತನಿಖೆಯ ಗತಿ ಏನು? ಎಂದು ರಮೇಶ್ ಗೌಡ ಪ್ರಶ್ನಿಸಿದರು.
ತನಿಖೆಗೆ ಮುನ್ನವೇ ಸರ್ಕಾರ ಸಮರ್ಥನೆಗೆ ಇಳಿಯುವುದು ಸರಿ ಅಲ್ಲ. ಅದು ದಲಿತ ಕುಟುಂಬಕ್ಕೆ ಮಾಡುವ ಅನ್ಯಾಯ. ವಾಸ್ತವ ಸ್ಥಿತಿ ಹೀಗಿದ್ದಾಗ ದಲಿತರ ಮೇಲೆ ದೌರ್ಜನ್ಯ ನಡೆಸಿದ ಸಚಿವರ ರಾಜೀನಾಮೆ ಪಡೆದು ಅವರನ್ನು ಬಂಧಿಸಲು ಸಾಧ್ಯವಾ? ಎಂದು ಅವರು ಕೇಳಿದರು.
ಸಚಿವರು ರಾಜೀನಾಮೆ ನೀಡದಿದ್ದರೆ ನಾವು ರಾಜ್ಯಪಾಲರಿಗೂ ದೂರು ನೀಡುತ್ತೇವೆ. ಅವರು ರಾಜೀನಾಮೆ ನೀಡುವ ತನಕ ಹೋರಾಟ ಮಾಡುತ್ತೇವೆ. ದಲಿತರಿಗೆ ನ್ಯಾಯ ಕೊಡಿಸಲು ಗೃಹ ಸಚಿವರು ವಿಫಲ ಆಗಿದ್ದಾರೆ. ಅಲ್ಲದೆ, ದಲಿತರ ರಕ್ಷಣೆ ಮಾಡಲಾಗದ ಅದೇ ಸಮುದಾಯದ ಗೃಹ ಸಚಿವ ಪರಮೇಶ್ವರ್ ಅವರೂ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯ ಮಾಡಿದರು. ಸಚಿವ ಡಿ.ಸುಧಾಕರ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು, ತದ ನಂತರ ಬಿಡುಗಡೆ ಮಾಡಿದರು ಜೆಡಿಎಸ್ ನಗರ ಮುಖಂಡರಾದ ನಾರಾಯಣ ಸ್ವಾಮಿ, ಪ್ರವೀಣ ಕುಮಾರ್, ಹರೀಶ್, ರೇವಣ್ಣ, ಚಂದ್ರಶೇಖರ್ ಸೇರಿದಂತೆ ಹಲವಾರು ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.