ಬೆಂಗಳೂರು: ಯುಎಇಯಲ್ಲಿ ಕಳೆದ ತಿಂಗಳು ನಡೆದ ಡಬ್ಲ್ಯುಕೆಎಫ್ ಕೋಚ್ ಪರೀಕ್ಷೆಯಲ್ಲಿ ಕರ್ನಾಟಕದ ಜಯಂತ್ ಪಟೇಲ್ ವಿಶ್ವ ಕರಾಟೆ ಫೆಡರೇಶನ್ (ಡಬ್ಲ್ಯುಕೆಎಫ್) ಅಡಿಯಲ್ಲಿ ಅಂತಾರಾಷ್ಟ್ರೀಯ ತರಬೇತುದಾರರಾಗಿ ಅರ್ಹತೆ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಈ ಮೂಲಕ ಭಾರತದ ಕಿರಿಯ ಕರಾಟೆ ತರಬೇತುದಾರರಲ್ಲಿ ಒಬ್ಬರನ್ನಾಗಿ ರೂಪಿಸಿದೆ. ಸಮರ ಕಲೆಯಲ್ಲಿ ಅವರ ಸಮರ್ಪಣೆ ಮತ್ತು ಕೌಶಲ್ಯದ ಪ್ರತೀಕ ಇದಾಗಿದೆ. ಜಯಂತ್ ಅವರ ಯಶಸ್ಸು ಭಾರತೀಯ ಕರಾಟೆ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗಿದೆ.
ಎ.ಕೆ.ಎಸ್.ಕೆ.ಎ ಅಧ್ಯಕ್ಷರಾದ ಶಿಹಾನ್ ಅರುಣ್ ಮಾಚಯ್ಯ ಅವರ ನಿರಂತರ ಮಾರ್ಗದರ್ಶನ ಮತ್ತು ಪ್ರಧಾನ ಕಾರ್ಯದರ್ಶಿ ಬಾರ್ಗವ ರೆಡ್ಡಿ ಅವರ ಅಪರಿಮಿತ ಬೆಂಬಲದಿಂದ ಕಿರಿಯ ವಯಸ್ಸಿನಲ್ಲಿಯೇ ಅನನ್ಯ ಸಾಧನೆ ಮಾಡಲು ಸಾಧ್ಯವಾಗಿದೆ. ವೃತ್ತಿಜೀವನವನ್ನು ರೂಪಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದು, ಇದರಿಂದ ಜಯಂತ್ ಈ ಪ್ರತಿಷ್ಠಿತ ಪ್ರಮಾಣೀಕರಣಕ್ಕೆ ಭಾಜನರಾಗಲು ನೆರವಾಗಿದೆ. ಕರಾಟೆ ಸಮುದಾಯ ಜಯಂತ್ ಪಟೇಲ್ ಗೆ ಶುಭ ಹಾರೈಸಿದೆ. ಭಾರತದಲ್ಲಿ ಕರಾಟೆ ತರಬೇತಿ ಗುಣಮಟ್ಟವನ್ನು ಉನ್ನತೀಕರಿಸಲು ಮತ್ತು ಮುಂದಿನ ಪೀಳಿಗೆಯ ಕರಾಟೆ ಪಟುಗಳನ್ನು ತಯಾರು ಮಾಡಲು ಈ ಸಾಧನೆ ಪ್ರೇರಣೆಯಾಗಿದೆ.