ಶಿವಮೊಗ್ಗ : ರಾಜ್ಯದಲ್ಲಿ ಅಕಾಲಿಕ ಮಳೆಯ ಆರ್ಭಟದಿಂದ ಜಲಕಂಟಕ ಎದುರಾಗಲಿದೆ ಎಂದು Dr. Shivananda Shivayogi Rajendra Swamiji ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಸೊರಬ ತಾಲ್ಲೂಕಿನ ಜಡೆ ಸಂಸ್ಥಾನ ಮಠದ ಸಮೀಪ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, “ಸಕಾಲದಲ್ಲಿ ಮಳೆಯಾಗದೆ, ಅಕಾಲಿಕವಾಗಿ ಸುರಿಯುವ ಮಳೆ ಜನಜೀವನ ಹಾಗೂ ಕೃಷಿಗೆ ದೊಡ್ಡ ಹೊಡೆತ ನೀಡಲಿದೆ” ಎಂದು ಎಚ್ಚರಿಕೆ ನೀಡಿದರು.
ಮಳೆ, ಗುಡುಗು ಹಾಗೂ ಸಿಡಿಲಿನ ಆರ್ಭಟ ಹೆಚ್ಚಾಗಲಿದ್ದು, ಮಳೆಗಾಲದ ನಿಗದಿತ ಅವಧಿಯಲ್ಲೇ ಮಳೆಯಾಗದೆ ಅನಿರೀಕ್ಷಿತ ಸಮಯದಲ್ಲಿ ಸುರಿಯುವ ಮಳೆಯು ರೈತರು ಹಾಗೂ ಸಾರ್ವಜನಿಕರನ್ನು ಸಂಕಷ್ಟಕ್ಕೆ ತಳ್ಳಲಿದೆ ಎಂದು ಹೇಳಿದರು.
ಆದರೆ, ರಾಜ್ಯದಲ್ಲಿ ಒಟ್ಟಾರೆ ಮಳೆ ಮತ್ತು ಬೆಳೆ ಉತ್ತಮವಾಗಿರುವ ನಿರೀಕ್ಷೆಯನ್ನೂ ಅವರು ವ್ಯಕ್ತಪಡಿಸಿದರು. ಇದೇ ವೇಳೆ ಕೆಲವು ಆಕಸ್ಮಿಕ ಘಟನೆಗಳು ಹಾಗೂ ಪ್ರಕೃತಿ ವಿಕೋಪಗಳು ದೊಡ್ಡ ನಗರಗಳಲ್ಲಿ ಆತಂಕ ಸೃಷ್ಟಿಸಲಿವೆ ಎಂದು ಮಾರ್ಮಿಕವಾಗಿ ನುಡಿದರು.
“ಅರಸನ ಅರಮನೆ ಕಳೆಗುಂದಿತು… ಪಟ್ಟದ ಆನೆ ಗಾಂಭೀರ್ಯದಿಂದ ನಡೆದೀತು”
ರಾಜ್ಯ ಹಾಗೂ ದೇಶದ ರಾಜಕೀಯ ಬೆಳವಣಿಗೆಗಳ ಕುರಿತು ಕೇಳಿದ ಪ್ರಶ್ನೆಗೆ ಶ್ರೀಗಳು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಉತ್ತರಿಸಿದರು.
“ಅರಸನ ಅರಮನೆ ಕಳೆಗುಂದಿತು… ಪಟ್ಟದ ಆನೆ ಗಾಂಭೀರ್ಯದಿಂದ ನಡೆದೀತು” ಎಂಬ ಅವರ ಮಾತುಗಳು ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗೆ ಕಾರಣವಾಗಿವೆ. ಅಧಿಕಾರ ಕೇಂದ್ರಗಳಲ್ಲಿ ಬದಲಾವಣೆ, ಪ್ರಭಾವಿ ನಾಯಕರ ವರ್ಚಸ್ಸಿನ ಏರುಪೇರು ಅಥವಾ ಹೊಸ ನಾಯಕತ್ವದ ಉದಯದ ಸೂಚನೆ ಇದಾಗಿರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
“ಸತ್ಯ ಯಾವಾಗಲೂ ಕಹಿಯಾಗಿರುತ್ತದೆ” ಎಂದು ಹೇಳಿದ ಶ್ರೀಗಳು, ಹಿಂದೆ ತಾವು ನುಡಿದ ಹಲವು ಭವಿಷ್ಯಗಳು ನಿಜವಾಗಿರುವುದನ್ನು ಉಲ್ಲೇಖಿಸಿದರು. ಜಾಗತಿಕ ಮಟ್ಟದಲ್ಲಿ ಪ್ರಭಾವಿ ವ್ಯಕ್ತಿಗಳ ಪತನ ಹಾಗೂ ಯುದ್ಧ ಭೀತಿಯ ಕುರಿತು ಈ ಹಿಂದೆ ನೀಡಿದ್ದ ಎಚ್ಚರಿಕೆಗಳು ಈಗಿನ ಬೆಳವಣಿಗೆಗಳಿಗೆ ಹೋಲಿಕೆಯಾಗುತ್ತಿವೆ ಎಂದರು.
“ಎರಡು ಪ್ರಮುಖ ತಲೆಗಳು ಉರುಳಲಿವೆ” ಎಂಬ ಅವರ ಮತ್ತೊಂದು ಹೇಳಿಕೆ ಅಂತರಾಷ್ಟ್ರೀಯ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಅಥವಾ ಪ್ರಮುಖ ನಾಯಕರ ನಿರ್ಗಮನದ ಸುಳಿವು ನೀಡುತ್ತಿದೆ ಎಂಬ ಚರ್ಚೆಗೂ ಕಾರಣವಾಗಿದೆ.



