ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಲಕ್ಷಾಂತರ ರೂಗಳ ಹಣದ ವಹಿವಾಟು ನಡೆದಿರುವ ಹಿನ್ನಲೆಯಲ್ಲಿ ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ನನ್ನು ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ.
ಇದರಿಂದ ಜಾಮೀನು ನಿರೀಕ್ಷೆಯಲ್ಲಿರುವ ನಟ ದರ್ಶನ್ ಮತ್ತೊಂದು ಸಂಕಷ್ಟ ಎದುರಾಗಿದೆ.
ಬಳ್ಳಾರಿ ಜೈಲಿಗೆ ಐಟಿ ಅಧಿಕಾರಿಗಳು ತೆರಳಿ ದರ್ಶನ್ನ ವಿಚಾರಣೆ ಮಾಡಲಿದ್ದಾರೆ. ಐಟಿ ಅಧಿಕಾರಿಗಳ ವಿಚಾರಣೆಗೆ ಸಹಕಾರ ನೀಡುವಂತೆ ನ್ಯಾಯಾಲಯದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಇ-ಮೇಲ್ ರವಾನೆ ಆಗಿದೆ.
ಕೊಲೆ ಆರೋಪ ಮತ್ತೊಬ್ಬರ ಮೇಲೆ ಹೊರಿಸಲು ದರ್ಶನ್ ಸಂಚು ಮಾಡಿದ್ದರು. ಇದಕ್ಕಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡಿದ್ದರು. ಅಷ್ಟು ದೊಡ್ಡ ಮೊತ್ತದ ಕ್ಯಾಶ್ ಎಲ್ಲಿಂದ ಬಂತು ಹೇಗೆಲ್ಲ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಸದ್ಯ ಐಟಿ ಅಧಿಕಾರಿಗಳು ಬರುವುದನ್ನು ಜೈಲಾಧಿಕಾರಿಗಳು ಖಚಿತಪಡಿಸಿದ್ದಾರೆ.
ದರ್ಶನ್ ಈಗಾಗಲೇ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರ ವಿಚಾರಣೆ ಸೆಪ್ಟೆಂಬರ್ ೨೭ರಂದು ಕೋರ್ಟ್‌ನಲ್ಲಿ ನಡೆಯಲಿದೆ. ಈ ಪ್ರಕರಣದಲ್ಲಿ ಅವರು ಜಾಮೀನು ನಿರೀಕ್ಷೆಯಲ್ಲಿ ಇರುವಾಗಲೇ ಮತ್ತೊಂದು ಶಾಕ್ ಎದುರಾಗಿದೆ. ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಗೆ ಅವರು ಉತ್ತರ ನೀಡಬೇಕಿದೆ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ರೇಣುಕಾ ಸ್ವಾಮಿಯನ್ನು ದರ್ಶನ್ ಹಾಗೂ ಗ್ಯಾಂಗ್ ಕೊಲೆ ಮಾಡಿದ ಆರೋಪ ಇದೆ. ಈ ಪ್ರಕರಣದಲ್ಲಿ ಜೂನ್ ೧೧ರಂದು ದರ್ಶನ್ ಬಂಧನಕ್ಕೆ ಒಳಗಾದರು. ಆರಂಭದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಅವರು ನಂತರ ನ್ಯಾಯಾಂಗ ಬಂಧನಕ್ಕೆ ಒಳಗಾದರು. ಬೆಂಗಳೂರು ಜೈಲಿನಿಂದ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ.