ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣಕ್ಕೆ ಸಂಬಂಧಿಸಿ ಸ್ಪಷ್ಟನೆ
ಬೆಂಗಳೂರು: ನಾನು ಕೇಂದ್ರ ಸಚಿವನಾಗಿದ್ದೇನೆ ಎಂಬ ಹೊಟ್ಟೆಕಿಚ್ಚಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನನ್ನ ಮೇಲೆ ಹಗೆ ಸಾಧಿಸುತ್ತಿದೆ. ಯಾವತ್ತೊ ಸತ್ತು ಹೋದ ಪ್ರಕರಣವನ್ನು, ನನ್ನ ಸಹಿ ಇಲ್ಲದ ಪ್ರಕರಣವನ್ನು ಇಟ್ಟುಕೊಂಡು ನನ್ನ ಮೇಲೆ ಪ್ರಯೋಗ ಮಾಡುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸಾಯಿ ವೆಂಕಟೇಶ್ವರ ಕಂಪನಿಗೆ ನಾನು ಸೂಜಿ ಮೊನೆಯಷ್ಟು ಜಾಗವನ್ನೂ ನೀಡಿಲ್ಲ. ಅವರು ಗಣಿಗಾರಿಕೆಯನ್ನೂ ಮಾಡಿಲ್ಲ, ಕೇಂದ್ರ ಸರ್ಕಾರ ಅವರಿಗೆ ಅನುಮತಿಯನ್ನೇ ಕೊಟ್ಟಿಲ್ಲ, ರಾಜ್ಯದ ಬೊಕ್ಕಸಕ್ಕೆ ನಯಾಪೈಸೆ ನಷ್ಟವೂ ಆಗಿಲ್ಲ. ವಿಷಯ ಹೀಗಿದ್ದ ಮೇಲೆ ಎಸ್ ಐಟಿ ರಾಜ್ಯಪಾಲರಿಂದ ಪ್ರಾಸಿಕ್ಯೂಶನ್ ಗೆ ಹೇಗೆ ಅನುಮತಿ ಕೋರುತ್ತದೆ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ಮಾಧ್ಯಮಗಳ ಜತೆ ಮಾತನಾಡಿದ ಅವರು; ರಾಜ್ಯ ಸರ್ಕಾರ ನನ್ನ ವಿರುದ್ಧ ಹೂಡಿರುವ ಷಡ್ಯಂತ್ರಕ್ಕೆ ಹೆದರಿ ಓಡುವ ಜಾಯಮಾನ ನನ್ನದಲ್ಲ. ನಾನು ಕೂಡ ಕಾನೂನಾತ್ಮಕವಾಗಿಯೇ ಹೋರಾಟ ಮಾಡುತ್ತೇನೆ ಎಂದು ಹೇಳಿದರು.
ಸಾಯಿ ವೆಂಕಟೇಶ್ವರ ಮಿನರಲ್ಸ್ ವಿಚಾರದಲ್ಲಿ ನಾನು ಲೀಗಲ್ ಫೈಟ್ ಮಾಡುತ್ತೇನೆ. ಇಂತಹ ಪರಿಸ್ಥಿತಿಗಳಲ್ಲಿ ಕಾನೂನು ಮೊರೆ ಹೋಗಲೇಬೇಕು. ನೆಲದ ಕಾನೂನಿಗೆ ನಾವು ತಲೆಬಾಗಲೇಬೇಕು ಎಂದರು ಅವರು.
ಇಷ್ಟು ದಿನ ಸುಮ್ಮನಿದ್ದ ಕಾಂಗ್ರೆಸ್ ನಾಯಕರು ಈಗ ಎಚ್ಚೆತ್ತುಕೊಂಡಿದ್ದಾರೆ. ಕೇಂದ್ರ ಮಂತ್ರಿ ಅಗಿದ್ದೇನಲ್ಲವೇ, ಅದನ್ನು ಸಹಿಸಿಕೊಳ್ಳುವುದು ಇವರಿಗೆ ಸಾಧ್ಯವಾಗುತ್ತಿಲ್ಲ. ಲೋಕಾಯುಕ್ತ ವಿಶೇಷ ತನಿಖಾ ತಂಡಕ್ಕೆ ತನಿಖೆ ಮಾಡಲು ಎಷ್ಟು ದಿನ ಬೇಕು? 2014ರಲ್ಲಿ ನಾನು ನ್ಯಾಯಾಲಯಕ್ಕೆ ಹೋಗಿದ್ದು. ಇವರಿಗೆ ತನಿಖೆ ಮಾಡಲು ಇಷ್ಟು ದಿನ ಬೇಕಾ? ತಿದ್ದಲಾಗಿರುವ ಆದೇಶ ಪತ್ರದ ದಾಖಲೆಯನ್ನು ಪರಿಶೀಲನೆ ಮಾಡಲು ಕೇವಲ ನನ್ನ ಸಹಿಯನ್ನಷ್ಟೇ ಅಲ್ಲ, ನನ್ನ ಕೈ ಬರಹವನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಎಲ್ಲಿ ಬೇಕಾದರೂ ತನಿಖೆ ಮಾಡಲಿ, ಯಾವ ಪ್ರಯೋಗಾಲಯದಿಂದಲಾದರೂ ವರದಿ ಪಡೆಯಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.
ಬಿಜೆಪಿ ಮೇಲೆ 21 ಕೇಸ್ ಇದೆ ಎಂದು ಬೊಂಬು ಹಿಡಿದು ಹೇಳಿದರು ಕಾಂಗ್ರೆಸ್ ನಾಯಕರು. ಒಂದನ್ನು ಸಾಬೀತು ಮಾಡುವುದು ಅವರಿಂದ ಸಾಧ್ಯ ಆಗಲಿಲ್ಲ. ಈಗ ನನ್ನ ವಿರುದ್ಧ ಸತ್ತಿರುವ ಕೆಸ್ ಅನ್ನು ಬದುಕಿಸಲು ಹೆಣಗಾಡುತ್ತಿದ್ದಾರೆ. ಬೇಕಾದರೆ ಜೀವ ಇರುವ ಕೇಸನ್ನಾದರೂ ತನ್ನಿ ಸಿದ್ದರಾಮಯ್ಯನವರೇ ಎಂದು ಅವರು ಲೇವಡಿ ಮಾಡಿದರು.
ಈ ಸರ್ಕಾರ ನನ್ನೊಬ್ಬನ ಮೇಲೆ ಮಾತ್ರ ಗದಾ ಪ್ರಹಾರ ಮಾಡುತ್ತಿದೆ. ಇದು ನಿನ್ನೆ ಮೊನ್ನೆಯದ್ದಲ್ಲ. ಈ ಬಗ್ಗೆ ನಾನು ವಿಧಾನಸಭೆಯಲ್ಲೂ ಚರ್ಚೆ ಮಾಡಿದ್ದೆ ಎಂದ ಅವರು; ಪಕ್ಷಕ್ಕಾಗಿ ಭಿಕ್ಷೆ ಬೇಡಿದ್ದೇನೆ. ಇವರ ಹಾಗೆ ಲೂಟಿ ಹೊಡೆದಿಲ್ಲ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ರಾಜ್ಯಪಾಲರು ಮರು ಪರಿಶೀಲನೆ ಮಾಡಿ ಕಳಿಸಿ ಅಂತ ಕಳಿಸಿದ್ದಾರೆ. ಸಾಯಿ ವೆಂಕಟೇಶ್ವರ ದಾಖಲೆಯರುವುದು ನನ್ನ ಬರಹ ಅಲ್ಲ. 6-10-2007ರಲ್ಲಿ ಇದೆಲ್ಲಾ ನಡೆದಿದೆ. ಅದು ನನ್ನ ಸಹಿಯೇ ಅಲ್ಲ, ಯಾರು ಬರೆದುಕೊಂಡಿದ್ದಾನೋ ಗೊತ್ತಿಲ್ಲ. ನಾನು ಆ ಕಂಪನಿಗೆ ಭೂಮಿಯನ್ನೇ ಕೊಟ್ಟಿಲ್ಲ, ಯಾರೆಲ್ಲಾ ಫ್ರಾಡ್ ಮಾಡಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ₹20 ಲಕ್ಷ ಹಣವನ್ನು ಅಧಿಕಾರಿಯೊಬ್ಬ ತನ್ನ ಮಗನ ಖಾತೆಗೆ ಕಂಪನಿಯಿಂದ ವರ್ಗಾವಣೆ ಮಾಡಿಸಿಕೊಂಡ ವಿಷಯ ಗೊತ್ತಾದ ಮೇಲೆಯೇ ನಾನು ಎಚ್ಚೆತ್ತುಕೊಂಡಿದ್ದು. ತಪ್ಪು ನೀವು ಇಟ್ಟುಕೊಂಡು ರಾಜ್ಯಪಾಲರನ್ನು, ಕೇಂದ್ರವನ್ನು ಯಾಕೆ ಎಳೆದು ತರುತ್ತೀರಿ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಾನು ಸಾಯಿ ವೆಂಕಟೇಶ್ವರ ಕಡತಕ್ಕೆ ಸಹಿ ಹಾಕಿದೇನೆ ಎಂದು ಯಾರೋ ಈಗ ದಾಖಲೆ ತೆಗೆದಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ನಾನು ಸಹಿ ಹಾಕಿದ್ದು ಯಾವುದು ಅಂತ ತನಿಖೆ ಮಾಡಿದ್ದೀರಾ? ಎಸ್ ಐಟಿ ತನಿಖೆ ಮಾಡಿದೆಯಾ? ಏನೆಲ್ಲಾ ಅಕ್ರಮ ಆಗಿದೆ ಎಂಬುದು ಸರ್ಕಾರಕ್ಕೆ ಗೊತ್ತಿದೆಯಾ? ಅಧಿಕಾರಿ ಮಗನ ಬ್ಯಾಂಕ್ ಖಾತೆಗೆ ₹20 ಲಕ್ಷ ಹಣ ಹೋಗಿದ್ದನ್ನು ಪತ್ತೆ ಹಚ್ಚಿದ್ದು ಎಸ್ ಐಟಿ ಅಲ್ಲ, ಪೊಲೀಸರೂ ಅಲ್ಲ. ನಾನು ಅದನ್ನು ಪತ್ತೆ ಹಚ್ಚಿದ್ದು. ಪೊನ್ನಣ್ಣ ನಿಮಗಿಂತ ಹೆಚ್ಚು ಕಾನೂನು ಬಲ್ಲವರು ಇದ್ದಾರೆ. ನನಗೂ ಅಲ್ಪಸ್ವಲ್ಪ ಕಾನೂನು ಗೊತ್ತಿದೆ ಎಂದು ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಚಿವರು; ಪೊನ್ನಣ್ಣ, ಎಫ್.ಐ.ಆರ್ ಆಗಿದೆ, ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು ಎಂದು ಹೇಳುತ್ತೀರಿ. ನಿಮ್ಮ ನಾಯಕನ ರೀತಿಯಲ್ಲಿ ಅಕ್ರಮ, ಪೋರ್ಜರಿ ಮಾಡಿದ್ದಿದ್ದರೆ ನಾನು ಖಂಡಿತಾ ರಾಜೀನಾಮೆ ಕೊಡುತ್ತಿದ್ದೆ. ನಿಮ್ಮ ಮಾತುಗಳನ್ನು ಅಳಿಸಿದ್ದೇನೆ, ರಾಜ್ಯಪಾಲರ ಬಗ್ಗೆ ನೀವೆಲ್ಲ ಉದುರಿಸಿದ ಅಣಿಮುತ್ತುಗಳನ್ನು ಗಮನಿಸಿದ್ದೇನೆ. ಕಂದಾಯ ಸಚಿವ ಕೃಷ್ಣ ಭೈರೇಗೌಡರು ಸುಸಂಸ್ಕೃತರು. ಆದರೂ ರಾಜ್ಯಪಾಲರ ಬಗ್ಗೆ ಅಸಂಸ್ಕೃತ ಭಾಷೆ ಬಳಕೆ ಮಾಡುತ್ತಾರೆ. ಇವರೆಲ್ಲ. ಸಂವಿಧಾನದ ಪ್ರತಿ ಇಟ್ಟುಕೊಂಡು ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು. ನಾಚಿಕೆಯಾಗಬೇಕು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಈ ಸಾಯಿ ವೆಂಕಟೇಶ್ವರ ಪ್ರಕರಣವನ್ನು ನಾನು ಎಂದೋ ಮುಚ್ಚಿಹಾಕಬಹುದಿತ್ತು. 2011-12ರಲ್ಲಿ ಮುಚ್ಚಿಹಾಕಿಸಬಹುದಿತ್ತು. ಇದೇ ಕಾಂಗ್ರೆಸ್ ಜತೆ ನಾನೇ ಸರ್ಕಾರ ಮಾಡಿದ್ದೆ. ಆಗಲೂ ಮುಚ್ಚಿ ಹಾಕಿಸಬಹುದಿತ್ತು. ಮುಚ್ಚಿಹಾಕಿಸಲು ಎರಡು ಸೆಕೆಂಡ್ ಸಾಕಾಗಿತ್ತು ನನಗೆ. ಪೊನ್ನಣ್ಣ.. ಇದು ಗೊತ್ತಿರಲಿ ನಿಮಗೆ. ನಿಮ್ಮ ಹಾಗೆಯೇ ಲೋಕಾಯುಕ್ತಕ್ಕೆ ಹಲ್ಲು ಕಿತ್ತು ಎಸಿಬಿ ಮಾಡಿಯೊಂಡು ಬಚಾವ್ ಆಗುವ ಪ್ರಯತ್ನ ನಾನು ಮಾಡಲಿಲ್ಲ. ಈಗ ಏನೋ ಹೊಸದನ್ನು ಸಂಶೋಧನೆ ಮಾಡಿದ್ದೇವೆ ಎಂದು ಹೊರಟಿದ್ದೀರಿ. ಅವನ್ಯಾರೋ ಡಿವೈಎಸ್‌ಪಿ ಬಸವರಾಜ್ ಮುಗ್ದಂ ಅಂತೆ. ‘ಸರ್.. ನನಗೆ ಬಿಡಿ ಸರ್, ನೋಟೀಸ್ ಕೊಟ್ಟು ಕುಮಾರಸ್ವಾಮಿಯನ್ನು ಕರೆಸುತ್ತೇನೆ‘ ಎಂದು ಹೇಳುತ್ತಾನಂತೆ. ಕರೆಸಲಿ ನೋಡೋಣ.. ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ಮುಖ್ಯಮಂತ್ರಿ ಮತ್ತು ಅವರ ತಂಡ ನನ್ನ ಮಾಹಿತಿಯನ್ನು ಕೆದಕುತ್ತಿದೆ. ಆದರೆ, ಅಕ್ರಮ ಗಣಿಗಳಿಗೆ ಅನುಮತಿ ನೀಡಿದ ವಿಷಯಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರದ್ದು ಬ್ರಹ್ಮಾಂಡವೇ ಇದೆ. ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ನನ್ನ ಬಳಿ ಇವೆ ಎಂದು ದಾಖಲೆಗಳನ್ನು ತುಂಬಿದ್ದ ಕವರ್ ಒಂದನ್ನು ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿಯಲ್ಲಿ ತೋರಿಸಿದರು.
2015ರಲ್ಲಿ ಬೇಲೆಕೇರಿಯಲ್ಲಿ ಅದಿರು ಕದ್ದು ಸಿಕ್ಕಿಕೊಂಡಿರುವ ಅಪರಾಧಿಗಳ ಗಣಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ. ಅಂದರೆ, ರಾಜ್ಯ ಸರಕಾರಕ್ಕೆ ಕೋಟ್ಯಂತರ ರುಪಾಯಿ ವಂಚಿಸಿದ ಕುಳಗಳಿಗೆ ಗಣಿಗಾರಿಕೆ ಅನುಮತಿ ಕೊಟ್ಟಿದ್ದಾರೆ. ನನ್ನದು ಒಂದೇ ಒಂದು ಎಂದು ಇವರು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಅವರದ್ದು ಒಂದಲ್ಲ, ಅನೇಕ ಹಗರಣಗಳು ಇವೆ ಎಂದರು ಅವರು.
ಈ ದಾಖಲೆಗಳನ್ನು ನಾನು ಈಗಲೇ ಬಿಡುಗಡೆ ಮಾಡಲ್ಲ. ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ. ಏಕೆಂದರೆ, ಸಿಎಂ ಸುತ್ತಮುತ್ತ ದಾಖಲೆಗಳನ್ನು ತಿದ್ದುವ ಪ್ರವೀಣರು ಅನೇಕರು ಇದ್ದಾರೆ. ನಾನೂ ಸೇಫ್ ಗೇಮ್ ಆಡಬೇಕಲ್ವಾ? ಎಂದು ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.
ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇದೆ. ನಾನು ಅಲ್ಲಿ ಅರ್ಜಿ ಸಲ್ಲಿಸಿದ್ದೇನೆ. ಕಾಂಗ್ರೆಸ್ಸಿನವರು ಅಬ್ರಹಾಂ ಅವರ ಹಿನ್ನೆಲೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ನಾನು ಪ್ರಶ್ನೆ ಮಾಡುತ್ತೇನೆ. ಎಸ್ ಐಟಿ ತನಿಖೆ ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದೀರಿ. ಅದಕ್ಕೆ ಕೋರ್ಟು ಒಪ್ಪಿ, ಮೂರು ತಿಂಗಳ ಒಳಗೆ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಬೇಕು ಎಂದು ಆದೇಶ ಕೊಟ್ಟಿದೆ. ನೀವು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ, ಹಾಗಾದರೆ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರಿಂದ ಹೇಗೆ ಅನುಮತಿ ಕೇಳುತ್ತಾರೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಅಬ್ರಹಾಂ ಅವರು 2011ರಲ್ಲಿಯೇ ನಗರದ ಹೆಚ್ಚುವರಿ ಸೆಷೆನ್ಸ್ ಕೋರ್ಟ್ ನಲ್ಲಿ ದೂರು ಹಾಕಿದ್ದರು. ಎಸ್.ಎಂ.ಕೃಷ್ಣ, ಧರ್ಮಸಿಂಗ್ ಹಾಗೂ ನನ್ನ ಮೇಲೆ ದೂರು ದಾಖಲು ಮಾಡಿದ್ದರು. ಆಮೇಲೆ ನಾನು ಹೈಕೋರ್ಟ್ ಗೆ ಮೊರೆ ಹೋದೆ. ಅಲ್ಲಿ ₹150 ಕೋಟಿ ಗಣೆ ಲಂಚ ಪ್ರಕರಣ ಹಾಗೂ ಜಂತಕಲ್ ಗಣಿ ಗುತ್ತಿಗೆ ನವೀಕರಣ ಪ್ರಕರಣ ವಜಾ ಆದವು. ನ್ಯಾ.ಸಂತೋಷ್ ಹೆಗ್ಡೆ ಅವರು ನೀಡಿರುವ ವರದಿಯಲ್ಲಿ ನನ್ನ ವಿರುದ್ಧ ಯಾವುದೇ ದೋಷಾರೋಪ ಆಗಲಿ, ತಪ್ಪು ಎಸಗಿದ್ದೇನೆ ಎಂಬ ಉಲ್ಲೇಖವಾಗಲಿ ಅಥವಾ ಕ್ರಮ ಜರುಗಿಸಬೇಕು, ತನಿಖೆ ನಡೆಯಬೇಕು ಎನ್ನುವ ಶಿಫಾರಸು ಆಗಲಿ ಇಲ್ಲ. ಅವರು ಈ ಬಗ್ಗೆ ಮುಂದಿನ ಸರ್ಕಾರ ಪರಿಶೀಲನೆ ಮಾಡಬಹುದು ಎಂದಷ್ಟೇ ಹೇಳಿದ್ದಾರೆ ಎಂದು ಅವರು ಹೇಳಿದರು.
ಹೈಕೋರ್ಟ್ ನಲ್ಲಿ ಜಂತಕಲ್ ಮತ್ತು ಗಣಿ ಲಂಚ ಪ್ರಕರಣ ವಜಾ ಆದರೂ ಸಾಯಿ ವೆಂಕಟೇಶ್ವರ ವಿವಾದದ ತನಿಖೆಗೆ ಒಪ್ಪಿಗೆ ನೀಡಲಾಗಿತ್ತು. ನಾನು ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದೆ. 2017ರಲ್ಲಿ ಆದೇಶ ನೀಡಿದ ಸುಪ್ರೀಂ ಕೋರ್ಟ್ ಮೂರು ತಿಂಗಳೊಳಗೆ ತನಿಖೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ ಮೂರು ತಿಂಗಳಲ್ಲಿ ತನಿಖೆಯನ್ನು ಮುಗಿಸಲಿಲ್ಲ. ಅಂತಿಮ ವರದಿಯನ್ನು ನೀಡಲಿಲ್ಲ. ಈಗ ಎಷ್ಟು ವರ್ಷ ಆಯಿತು? ಅದು ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತೆ ಅಲ್ಲವೇ? ಎಂದು ಕುಮಾರಸ್ವಾಮಿ ಅವರು ಕೇಳಿದರು.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ 61 ಕೇಸ್ ದಾಖಲಾಗಿವೆ. ಹಾಗಾದರೆ, ಅವರು ಎಷ್ಟು ಸಲ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದ ಸಚಿವರು; ಸಿದ್ದರಾಮಯ್ಯ ವಿರುದ್ಧದ 61 ಕೇಸುಗಳ ಪೈಕಿ 50 ಕೇಸುಗಳ ತನಿಖೆಯೇ ಆಗಿಲ್ಲ ಎಂದು ಪತ್ರಿಕಾ ವರದಿ ಹೇಳುತ್ತದೆ. ಇದಕ್ಕೆ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ನಾನು ಕಪ್ಪು ಚುಕ್ಕೆ ಇಲ್ಲದ ನಾಯಕ, ಹಿಂದುಳಿದ ನಾಯಕ ಎಂದು ಸಿಎಂ ಹೇಳಿಕೊಳ್ಳುತ್ತಾರೆ. ಹಾಗಾದರೆ ಇವರು ಐದು ವರ್ಷ ಸಿಎಂ ಆಗಿದ್ದಾಗ ಲೋಕಾಯುಕ್ತವನ್ನು ಏನು ಮಾಡಿದರು? ಎಸಿಬಿಯನ್ನು ಯಾಕೆ ಹುಟ್ಟು ಹಾಕಿದರು? ಎಂದು ಖಾರವಾಗಿ ಪ್ರಶ್ನಿಸಿದರು.
ನಾನು ಈ ಸರಕಾರದ ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಮೊದಲ ದಿನದಿಂದಲೂ ಮಾತನಾಡುತ್ತಲೇ ಇದ್ದೇನೆ. ಇದನ್ನು ಸಹಿಸಲಾಗದೆ ಸರಕಾರದಲ್ಲಿ ದೊಡ್ಡ ಮಟ್ಟದ ಒಳಸಂಚು ನಡೆಯುತ್ತಿದೆ. ನನಗೆ ಖುದ್ದು ಸಿಎಂ ಮನೆಯಿಂದಲೇ ಮಾಹಿತಿ ಬರುತ್ತಿದೆ. ಸಿಎಂ ಕಾನೂನು ತಜ್ಞರು ಏನು ಮಾಡ್ತಿದ್ದಾರೆ, ಏನೆಲ್ಲಾ ಶೋಧ ಮಾಡುತ್ತಾ ನನ್ನ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ ಎನ್ನುವ ವಿಷಯ ನನಗೆ ಗೊತ್ತಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.