ಡಿಕೆಶಿ ತಮ್ಮ ಲೆಟರ್‌ಹೆಡ್‌ಗಳನ್ನು ಸ್ವಂತಕ್ಕೆ ಬಳಸಿದ್ದಾರೆ ಎಂದು ಆರೋಪ

ಸಿದ್ದರಾಮಯ್ಯ ಸಂಪುಟ ಡಿ.ಕೆ.ಶಿವಕುಮಾರ್ ಪಾದದಡಿಯಲ್ಲಿದೆ!!

ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಅಂತಿಮ ತೀರ್ಪು ಕೊಡುವ ತೀರ್ಪುಗಾರ ಮೇಲಿದ್ದಾನೆ ಎಂದು ಟಾಂಗ್

ಹಾಸನ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದದ ಸಿಬಿಐ ತನಿಖೆ ವಾಪಸ್ ಪಡೆಯುವ ನಿರ್ಧಾರವನ್ನು ಸಂಪುಟದಲ್ಲಿ ತೆಗೆದುಕೊಳ್ಳುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರಕಾರ ಡಿ.ಕೆ.ಶಿವಕುಮಾರ್ ಪಾದದಡಿಯಲ್ಲಿ ಬಿದ್ದಿದೆ ಎನ್ನುವುದು ಸಾಬೀರಾದಂತೆ ಆಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

          ಖಾಸಗಿ ಕಾರ್ಯಕ್ರಮದ ನಿಮಿತ್ತ ಹಾಸನಕ್ಕೆ ಬಂದಿದ್ದ ಅವರು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ಸಿದ್ದರಾಮಯ್ಯ ಏನು ಎನ್ನುವುದು ಬಯಲಾಗಿದೆ

 

ಈ ಸರಕಾರಕ್ಕೆ ಕನಿಷ್ಠ ಸಾಮಾನ್ಯ ತಿಳಿವಳಿಕೆಯೂ ಇಲ್ಲ. ಕಾಂಗ್ರೆಸ್ ನಾಯಕರು ಅನೇಕ ಬಾರಿ ಸಂವಿಧಾನದ ವ್ಯವಸ್ಥೆ ಉಳಿಯಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಹೇಳುತ್ತಾರೆ‌. ಈ ನಿರ್ಧಾರದ ಮೂಲಕ ಎಷ್ಟರಮಟ್ಟಿಗೆ ಅವರು ಸಂವಿಧಾನ ಉಳಿಸುತ್ತಿದ್ದಾರೆ, ಕಾನೂನಿನ ಮೇಲೆ ಅವರ ಗೌರವ ಎಷ್ಟಿದೆ ಎಂದು ಗೊತ್ತಾಗುತ್ತಿದೆ. ಈ ತೀರ್ಮಾನದ ಮೂಲಕ ಸಂಪೂರ್ಣ ಸಿದ್ದರಾಮಯ್ಯ‌ ನೇತೃತ್ವದ ಕರ್ನಾಟದ ರಾಜ್ಯ ಸರಕಾರದ  ಸಂಪುಟ ಡಿ.ಕೆ.ಶಿವಕುಮಾರ್ ಪಾದದಡಿಯಲ್ಲಿದೆ ಅನ್ನುವುದು ರುಜುವಾತಾಗಿದೆ ಎಂದು ಅವರು ಹರಿಹಾಯ್ದರು.

ಲೆಟರ್ ಹೆಡ್ ಸ್ವಂತಕ್ಕೆ ಬಳಕೆ

          ಈ ದೇಶದ ಕಾನೂನು ವ್ಯವಸ್ಥೆಯನ್ನು ಡಿಕೆಶಿ ಪಾದದಡಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡಿದ್ದಾರೆ ಸಿದ್ದರಾಮಯ್ಯ ಅವರು. ತನಿಖಾ ಸಂಸ್ಥೆಗಳು ತನಿಖೆ ಮುಂದುವರಿಸುವ ನಿಟ್ಟಿನಲ್ಲಿ ಅಂದಿನ ರಾಜ್ಯ ಸರಕಾರದ ಅನುಮತಿ ಕೋರಿದ್ದರು. ತನಿಖೆಗೆ ಅಂದಿನ ಸರಕಾರ  ಅನುಮತಿ ಕೊಟ್ಟಿತ್ತು. ಉಪ ಮುಖ್ಯಮಂತ್ರಿ ಡಿಕೆಶಿರವರು ಅಂದು ಶಾಸಕರಾಗಿದ್ದರು, ಈ ಬಗ್ಗೆ ಅವರು ಕೆಲ ದಾಖಲೆಗಳನ್ನು ಕೇಳಿ ಶಾಸಕರ ಲೆಟರ್‌ಹೆಡ್‌ನಲ್ಲಿ ಪತ್ರ ಬರೆದ ದಾಖಲೆಗಳಿವೆ. ಅವರು ಶಾಸಕರಾಗಿ ಜನತೆಯ ಪರವಾಗಿ ಕೆಲಸ ಮಾಡಿದ್ದಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ಸಮಸ್ಯೆಗಳಿಗೆ ಹೆಚ್ಚಾಗಿ ಲೆಟರ್‌ಹೆಡ್ ಬಳಸಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಗಣಿಗಾರಿಕೆ, ಗ್ರಾನೈಟ್ ಮೈನಿಂಗ್ ಸೇರಿದಂತೆ ಕಾನೂನು ಮೀರಿ ಮಾಡಿರುವ ಸಂಪಾದನೆ ರಕ್ಷಿಸಿಕೊಳ್ಳಲು ಶಾಸಕ ಸ್ಥಾನವನ್ನು ಬಳಸಿಕೊಂಡಿದ್ದಾರೆ ಎಂದು ಮಾಜಿ ಸಿಎಂ ದೂರಿದರು.

ವಕೀಲರಿಗೆ ಉಪನ್ಯಾಸ ಮಾಡಿದ್ದ ಸಿಎಂ!!

ಸುಪ್ರೀಂ ಕೋರ್ಟ್‌, ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿರುವುದರಿಂದ ಈ ರೀತಿ ನಿರ್ಧಾರವನ್ನು ಸಂಪುಟದಲ್ಲಿ‌ ತೆಗೆದುಕೊಳ್ಳಲು ಸಾಧ್ಯವಿಲ್ಲ. ವಕೀಲರಾಗಿದ್ದವರೂ, ವಕೀಲರಿಗೆ ಉಪನ್ಯಾಸ ಮಾಡಿದ ಸಿದ್ದರಾಮಯ್ಯನವರು ಈ ನಿರ್ಧಾರದ ಮೂಲಕ ಎಷ್ಟರಮಟ್ಟಿಗೆ ಕಾನೂನು ರಕ್ಷಕರು ಎಂಬುದು ಗೊತ್ತಾಗುತ್ತದೆ‌ ಸಿಎಂ ವಿರುದ್ಧವೂ ಅವರು ಟೀಕಾಪ್ರಹಾರ ನಡೆಸಿದರು.

1 ಲಕ್ಷದ 23 ಸಾವಿರ ಅಂತರದಿಂದ ಚುನಾವಣೆ ಗೆದ್ದೆ ಎಂದು  ಡಿ.ಕೆ.ಶಿವಕುಮಾರ್‌ ಅವರು ಹೇಳಿಕೊಳ್ಳುತ್ತಾರೆ‌. ಕನಕಪುರದಲ್ಲಿ ಇನ್ನೂ ಬಡವರಿದ್ದಾರೆ. ಅವರಿಗೂ ಎರಡು ಮೂರು ವರ್ಷಗಳಲ್ಲಿ 30%,40%,200%,300% ಹಣ ಹೆಚ್ಚಿಸಿಕೊಳ್ಳುವ ಪ್ರತಿಭೆಯನ್ನು ಧಾರೆ ಎರೆದು ಆ ಕಲೆಯನ್ನು ಕಲಿಸಿದರೆ‌ ಒಳಿತಾಗುತ್ತದೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಡಿಕೆಶಿಗೆ ಕುಟುಕಿದರು‌‌.

 

ಸಂಪುಟದಲ್ಲಿ ಈ ರೀತಿ‌ ತೀರ್ಮಾನವಾಗಿದ್ಯಾ? ತೆಗೆದು ನೋಡ್ತೀನಿ ಎಂದು ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ  ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಹಾಸ್ಯಾಸ್ಪದ ಹೇಳಿಕೆ ಕೊಡುವ ಅವರನ್ನು ದೇವರೇ ಕಾಪಾಡಬೇಕು ಎಂದು ಅವರು ಟೀಕಿಸಿದರು.

ತಡೆಯಾಜ್ಞೆ ಸಿಗದ ಕೇಸ್ ಬಗ್ಗೆ ಸಂಪುಟ ನಿರ್ಧಾರ

ಕೋರ್ಟ್‌ನಲ್ಲಿ ತಡೆ ನೀಡಲು ಆಗದ ಪ್ರಕರಣಗಳನ್ನು ಸಚಿವ ಸಂಪುಟದಲ್ಲಿ ಚರ್ಚಿಸಲು ಅವಕಾಶವಿದೆಯಾ? ಇಂತಹ ಸಂದರ್ಭದಲ್ಲಿ ತರಾತುರಿ ನಿರ್ಧಾರ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಕುಮಾರಸ್ವಾಮಿ ಅವರು  ಪ್ರಶ್ನಿಸಿದರು.

 

ಈಗಾಗಲೇ ರಾಜ್ಯದಲ್ಲಿ ಕಾನೂನು ತಜ್ಞರು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ವಿರೋಧ ಪಕ್ಷವಾಗಿ ನಾವು ಏನು ಕೆಲಸ ಮಾಡಲು ಸಾಧ್ಯವಿದೆಯೋ ಅದನ್ನು ಮಾಡುತ್ತೇವೆ. ವಿಪಕ್ಷ ಸದಸ್ಯರಾಗಿ ತಪ್ಪನ್ನು ಜನರ ಮುಂದಿಡುವ ಕೆಲಸ ಮಾಡುತ್ತೇವೆ. ಸ್ಥಳೀಯ ಪೋಲಿಸರು ಅಥವಾ ಲೋಕಾಯುಕ್ತದವರು ಈ ವ್ಯಕ್ತಿ ಬಗ್ಗೆ ತನಿಖೆ ಮಾಡಲು ಸಾಧ್ಯವಾ? ತೀರ್ಪು ಕೊಡುವ ತೀರ್ಪುಗಾರ ಮೇಲಿದ್ದಾನೆ,  ಅವನು ಏನು ತೀರ್ಪು ಕೊಡುತ್ತಾನೆ ನೋಡೊಣ ಎಂದು ಕುಮಾರಸ್ವಾಮಿ ಹೇಳಿದರು

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top