ಬೆಂಗಳೂರು: ಕರ್ನಾಟಕ ನೀರಾವರಿ ನಿಗಮದಲ್ಲಿ ಅಕ್ರಮ ನೇಮಕಾತಿ, ನಿಯಮಬಾಹಿರ ಮುಂಬಡ್ತಿ ಕುರಿತ ದೂರಿನ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪರಿಶೀಲಿಸಿ ಸಲ್ಲಿಸಿರುವ ವರದಿಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆಗೆ ತಿಳಿಸಿದ್ದಾರೆ.
ಜೆಡಿಎಸ್ ನ ಸಿ.ಬಿ. ಸುರೇಶ್ ಬಾಬು ಅವರು ನಿಯಮ 351 ರಡಿ ಮಾಡಿದ ಪ್ರಸ್ತಾವನೆಗೆ ಉತ್ತರಿಸಿರುವ ಅವರು, ನಿಯಮಬಾಹಿರವಾಗಿ ಸಿಬ್ಬಂದಿ ವೇತನ, ಭತ್ಯೆ ಮತ್ತಿತರೆ ಸೌಲತ್ತುಗಳನ್ನು ಪಡೆದಿರುವ ಬಗ್ಗೆ ಸಾರ್ವಜನಿಕ ದೂರು ಸಲ್ಲಿಕೆಯಾಗಿತ್ತು. ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದು, ಅವರಿಂದ ವರದಿ ಬಂದಿದೆ ಎಂದು ಹೇಳಿದ್ದಾರೆ.
ಸಿ.ಬಿ. ಸುರೇಶ್ ಬಾಬು ಅವರು ವಿಷಯ ಪ್ರಸ್ತಾಪಿಸಿ, ಕಡಿಮೆ ವಿದ್ಯಾರ್ಹತೆ ಹೊಂದಿರುವ ಸಿಬ್ಬಂದಿಯ ಪ್ರಮಾಣಪತ್ರಗಳನ್ನು ಪರಿಶೀಲಿಸದೇ 2007ರಲ್ಲಿ ಸಿಬ್ಬಂದಿಯ ಸೇವೆಯನ್ನು ಸಕ್ರಮಗೊಳಿಸಲಾಗಿದೆ. ನಿಗಮದಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಲ್ಲದಿದ್ದರೂ ಹಲವಾರು ಸಿಬ್ಬಂದಿಗೆ ಮುಂಬಡ್ತಿ ನೀಡಲಾಗಿದೆ. ಈ ಪ್ರಕರಣ ಲೋಕಾಯುಕ್ತರ ಮುಂದಿದೆ. ಇಲಾಖಾ ಪರೀಕ್ಷೆ ತೇರ್ಗಡೆ ಹೊಂದಿಲ್ಲದವರಿಗೂ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.