ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಬೆಳವಣಿಗೆಯಿಂದ ತೆನೆ ಒಡೆಯುವ ಹಂತದವರೆಗೆ ಇದ್ದು, ಅಲ್ಲಲ್ಲಿ ಬೆಂಕಿರೋಗದ ಬಾಧೆ ಕಾಣಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಬೆಂಕಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಕೃಷಿ ಇಲಾಖೆಯು ರೈತರಿಗೆ ಸಲಹೆ ನೀಡಿದೆ. ಮೋಡ ಮುಸುಕಿದ, ಹೆಚ್ಚು ಆದ್ರ್ರತೆಯಿಂದ ಕೂಡಿದ ವಾತಾವರಣದಲ್ಲಿ ಬೆಂಕಿ ರೋಗ ಬಾಧೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಇದೊಂದು ಶಿಲೀಂಧ್ರದಿಂದ ಬರುವ ರೋಗವಾಗಿದ್ದು, ಬೆಳೆಯ ಎಲ್ಲಾ ಹಂತಗಳಲ್ಲೂ ಕಾಣಿಸಿಕೊಂಡು ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ರೋಗದ ಲಕ್ಷಣಗಳು : ಗರಿಗಳ ಮೇಲೆ ವಜ್ರಾಕಾರದ ಕಂದು ಬಣ್ಣದ ಚುಕ್ಕೆಗಳುಂಟಾಗಿ ಆ ಚುಕ್ಕೆಗಳ ಮಧ್ಯಭಾಗವು ಬೂದು ಬಣ್ಣ ಹೊಂದಿರುತ್ತದೆ. ಚುಕ್ಕೆಗಳು ದೊಡ್ಡದಾದಂತೆ ಒಂದಕ್ಕೊಂದು ಸೇರಿಕೊಂಡು ಎಲೆಗಳು ಸುಟ್ಟಂತೆ ಭಾಸವಾಗುತ್ತದೆ. ತೆನೆಯ ಹಂತದಲ್ಲಿ, ತೆನೆಯ ಕುತ್ತಿಗೆಯ ಭಾಗದಲ್ಲಿ ಕಂದು ಮಚ್ಚೆ ಕಂಡುಬಂದು ನಂತರ ತೆನೆ ಒಣಗಿ ಕಾಳು ಜೊಳ್ಳಾಗುತ್ತವೆ.
ನಿರ್ವಹಣೆಗೆ ಸಲಹೆ: ಗದ್ದೆಯಲ್ಲಿ ಹಾಗೂ ಗದ್ದೆ ಬದುಗಳಲ್ಲಿ ಕಳೆ ತೆಗೆದು ಜಮೀನಿನಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ತಕ್ಷಣ ಸಾರಜನಕಯುಕ್ತ ರಾಸಾಯನಿಕ ಗೊಬ್ಬರ ಕೊಡುವುದನ್ನು ನಿಲ್ಲಿಸಿ. ಆದಷ್ಟು 2 ಹಂತಗಳಲ್ಲಿ ಮೇಲುಗೊಬ್ಬರವಾಗಿ ಕೊಡಬೇಕು. ಸಾವಯವ ಹಾಗೂ ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ರೈತರು, 10 ಲೀಟರ್ ನೀರಿಗೆ 01 ಲೀ. ಹುಳಿಮಜ್ಜಿಗೆ ಬೆರೆಸಿ ಸಿಂಪಡಿಸಬೇಕು. ನೀರಿನೊಂದಿಗೆ ಸಗಣಿ ರಾಡಿ ಹರಿಸುವುದು ರೋಗ ನಿರ್ವಹಣೆಯ ಉತ್ತಮ ಕ್ರಮವಾಗಿದೆ. ರಾಸಾಯನಿಕ ಸಿಂಪರಣೆಗಾಗಿ 4 ಗ್ರಾಂ. ಕಾರ್ಬನ್ ಡೈಜಿಂ 50 ಡಬ್ಲ್ಯು.ಪಿ., 0.6 ಗ್ರಾಂ ಟ್ರ್ಯೈಸೈಕ್ಲೊಜೋಲ್ 75 ಡಬ್ಲ್ಯು.ಪಿ., 1 ಮಿ.ಲೀ. ಎಡಿಫಿನ್ಫಾಸ್ 50 ಇ.ಸಿ., 1 ಮಿ.ಲೀ. ಕಿಟಾಜಿನ್ 48 ಇ.ಸಿ. ಇವುಗಳಲ್ಲಿ ಯಾವುದಾರೊಂದನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.