ಕೈಗಾರಿಕೋದ್ಯಮಿಗಳೊಂದಿಗೆ ಉಸ್ತುವಾರಿ ಸಚಿವರ ಸಂವಾದ
ಶಿವಮೊಗ್ಗ : ಶಿವಮೊಗ್ಗದಲ್ಲಿ ಕೈಗಾರಿಕೋದ್ಯಮ ಬೆಳೆಯುವ ಸಾಮಥ್ರ್ಯ ಇದ್ದು, ಇದಕ್ಕೆ ಅಗತ್ಯವಾದ ಸಹಕಾರ ನೀಡಲು ಸಿದ್ದನಿದ್ದೇನೆ. ಬದಲಾವಣೆ ತರಲು ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಉದ್ಯಮಿಗಳಿಗೆ ಕರೆ ನೀಡಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪರೋಕಾಸ್ಟ್ ಸಭಾಂಗಣದಲ್ಲಿ ಉದ್ದಿಮೆದಾರರು ಮತ್ತು ಕೈಗಾರಿಕೋದ್ಯಮಿಗಳೊಮದಿಗೆ ಇಂದು ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗ ಸಾಕಷ್ಟು ಬೆಳೆದಿದೆ. ಆದರೆ ಇಚ್ಚಾಶಕ್ತಿ ಅಥವಾ ಇನ್ನಾವುದೋ ಕೊರತೆಯಿಂದ ಕೈಗಾರಿಕೋದ್ಯಮ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಕೈಗಾರಿಕೆಗಳು ಬೆಳೆಯಲು ಅಗತ್ಯವಾದ ಮೂಲಭೂತ ಸೌಕರ್ಯಗಳು, ರಸ್ತೆ, ವಿಮಾನ ನಿಲ್ದಾಣ, ಸೇರಿದಂತೆ ಎಲ್ಲ ರೀತಿಯ ಸೌಕರ್ಯ ಇದೆ. ಇದರ ಬಳಕೆ ಆಗಬೇಕು. ಕೈಗಾರಿಕೆ ಬೆಳೆದಷ್ಟು ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ದಿ ಆಗುವುದು. .
ಉತ್ತಮ ಶಾಲೆಗಳಿವೆ ಎಂದು ಜನ ಬೆಂಗಳೂರಿಗೆ ಹೋಗುತ್ತಾರೆ. ಉತ್ತಮ ಶಾಲೆ-ಸಂಸ್ಥೆಗಳು ಇಲ್ಲಿಯೇ ಆದರೆ ಜನ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ಅದೇ ರೀತಿಯಲ್ಲಿ ಕೈಗಾರಿಕೆಯನ್ನೂ ಬೆಳೆಸೋಣ. ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು ನನಗೆ ಅವಶ್ಯಕ ಇನ್‍ಪುಟ್ ನೀಡಿದಲ್ಲಿ ಅನುಕೂಲವಾಗುತ್ತದೆ. ವಿದ್ಯುತ್ ಸಮಸ್ಯೆ ಈಗ ಸ್ವಲ್ಪ ಇದೆ. ರೈತರಿಗೆ ನಾವು ವಿದ್ಯುತ್ ಕೊಡಲೇ ಬೇಕು. ಇಲ್ಲವಾದಲ್ಲಿ ರೈತರ ಫ್ಯಾಕ್ಟರಿ ನಿಂತು ಉತ್ಪಾದನೆ ಕಮ್ಮಿ ಆಗುತ್ತದೆ. ಆರ್ಥಿಕವಾಗಿ ಹಿಂದುಳಿಯುತ್ತೇವೆ.
ಜಿಲ್ಲೆಯಲ್ಲಿ ಉತ್ತಮ ಕೆಲಸಗಳು ಆಗಬೇಕು. ನಿಮ್ಮ ಸೇವಕನಾಗಿ ಕೆಲಸ ಮಾಡಲು ನಾನು ಸಿದ್ದ. ನಿಮ್ಮ ಕನಸು ನನಸು ಮಾಡುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಮಾರ್ಗದರ್ಶನದಲ್ಲಿ ನನ್ನ ಅವಧಿಯಲ್ಲಿ ಉತ್ತಮ ಕೆಲಸಗಳು ಆಗಬೇಕೆಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಗೋಪಿನಾಥ್ ಎನ್ ಪ್ರಾ¸ಸ್ತಾವಿಕವಾಗಿ ಮಾತನಾಡಿದರು.
ಸಂವಾದದ ವೇಳೆ ಕೈಗಾರಿಕೋದ್ಯಮಿ ರಮೇಶ್ ಮಾತನಾಡಿ, ಟೌನ್‍ಶಿಪ್ ಅಭಿವೃದ್ದಿಗೆ ಕನಿಷ್ಟ 1250 ಎಕರೆ ಬೇಕೆಂಬ ಕಾನೂನು ತೊಡಕಾಗಿದೆ. ಇಲ್ಲಿ ಅಷ್ಟು ಜಾಗ ಸಿಗುವುದು ಕಷ್ಟ. ಈ ನಿಯಮದಲ್ಲಿ ಬದಲಾವಣೆ ತಂದರೆ ಶಿವಮೊಗ್ಗದಲ್ಲಿ ಕೈಗಾರಿಕೆ ಬೆಳೆಯುವುದು ಹಾಗೂ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಒದಗುವುದು ಎಂದರು. ಸಚಿವರು ತಾವು ಈ ಕುರಿತು ಬೃಹತ್ ಕೈಗಾರಿಕೆಗಳ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಕೈಗಾರಿಕೋದ್ಯಮಿ ಪ್ರದೀಪ್ ಮಾತನಾಡಿ, ಶಿವಮೊಗ್ಗದಲ್ಲಿ ಟ್ರಕ್ ಟರ್ಮಿನಲ್ ಇಲ್ಲದ ಕಾರಣ ತೊಂದರೆ ಆಗುತ್ತಿದೆ. ಟ್ರಕ್‍ಗಳನ್ನು ನಿಲ್ಲಿಸಲು ಜಾಗ ಇಲ್ಲದ ಕಾರಣ ಹೆಚ್ಚು ಬಾಡಿಗೆ ಕೇಳುತ್ತಾರೆ ಎಂದರು.
ಉದ್ಯಮಿ ಉದಯಕುಮಾರ್ ಮಾತನಡಿ, ಕೋಟೆಗಂಗೂರು ರೈಲ್ವೆ ಕೋಚ್ ಕಾಮಗಾರಿಯ ವೇಗ ಹೆಚ್ಚಿಸಬೇಕು. ಟ್ರೇಡ್ ಲೈಸೆನ್ಸ್ ಪ್ರಕ್ರಿಯೆ ತುಂಬಾ ವಿಳಂಬವಾಗುತ್ತಿದ್ದು ಎಷ್ಟೋ ಜನರು ಲೈಸೆನ್ಸ್ ಪಡೆದಿರುವುದಿಲ್ಲ. ಹಾಗೂ ಸ್ಮಾರ್ಟ್‍ಸಿಟಿ ಕಾಮಗಾರಿ, ಫುಟ್‍ಪಾತ್ ನಲ್ಲಿ ಸಾಕಷ್ಟು ಅಂಗಡಿಗಳಿಂದ ತೊಂದರೆಯಾಗುತ್ತಿದೆ ಎಂದರು.
ಸಂತೋಷ್ ಮಾತನಾಡಿ, ಉದ್ಯಮಗಳಿಗೆ 440 ವೋಲ್ಟ್ ಅವಶ್ಯಕತೆ ಇದೆ. ಸುಮಾರು 300 ವೋಲ್ಟ್ ನೀಡಲಾಗುತ್ತಿದ್ದು ಇದರಿಂದ ಎಲೆಕ್ಟ್ರಿಫಿಕೇಷನ್ ಇತರೆ ತೊಂದರೆಯಾಗುತ್ತಿದೆ ಎಂದರು.
ಪ್ರಕಾಶ್ ಮಾತನಾಡಿ, ಗಾಂಧಿ ಬಜಾರ್ ಬಳಿ ಇರುವ ಅಂಡರ್ ಪಾಸ್ ಬಳಕೆಯಾಗುತ್ತಿಲ್ಲ. ಇದನ್ನು ಉಪಯೋಗಿಸುವುದರಿಂದ ಟಾಫಿಕ್ ಸಮಸ್ಯೆ ಬಗೆಹರಿಸಬಹುದು. ಪಾರ್ಕಿಂಗ್ ಆಗಿ ಹಾಗೂ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಬಹುದೆಂದರು.
ಮೋಹನ್ ಮಾತನಾಡಿ, ರಸ್ತೆ ಸಾರಿಗೆ ಸಮಸ್ಯೆಯಿಂದ, ರಸ್ತೆ ಸರಿ ಇಲ್ಲದ ಕಾರಣ ದಾವಣಗೆರೆ, ಗದಗ್ ಹೀಗೆ ಬೇರೆ ಜಿಲ್ಲೆಗಳೊಂದಿಗೆ ತಾವು ವ್ಯವಹರಿಸಲು ಕಷ್ಟವಾಗುತ್ತಿದೆ ಎಂದರು.
ವಿಶ್ವೇಶ್ವರಯ್ಯ ಮಾತನಾಡಿ, ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಕೈಗಾರಿಕೋದ್ಯಮಿಗಳ ಸಭೆ ಕರೆದು ಸಚಿವರು ವಿನೂತನ ಮತ್ತು ಶಾಶ್ವತ ಕೈಗಾರಿಕಾ ಯೋಜನೆಯನ್ನು ತರಬೇಕು. ಇಲ್ಲಿ ಕೈಗಾರಿಕೆಗೆ ಅಗತ್ಯವಾದ ಎಲ್ಲ ವ್ಯವಸ್ಥೆ ಇದೆ. ನಿರುದ್ಯೊಗ ಸಮಸ್ಯೆ ನಿವಾರಣೆ ಆಗುವುದು ಎಂದರು.
ಇನ್ನೂ ಹಲವಾರು ಕೈಗಾರಿಕೋದ್ಯಮಿಗಳು ವಿವಿಧ ಸಮಸ್ಯೆಗಳು ಮತ್ತು ಸಲಹೆಗಳೊಂದಿಗೆ ಸಚಿವರೊಂದಿಗೆ ಸಂವಾದ ನಡೆಸಿದರು. ಸಚಿವರು ಪ್ರತಿಕ್ರಿಯಿಸಿ,ಕೈಗಾರಿಕೆಗಳು ಬೆಳೆಯಲು ಅಗತ್ಯವಾದ ಕ್ರಮಗಳನ್ನು ಸಂಬಂಧಿಸಿದ ಇಲಾಖೆಗಳು ತೆಗೆದುಕೊಳ್ಳಲು ಸೂಚಿಸುತ್ತೇನೆ. ಹೊಸ ಕೈಗಾರಿಕೆ ಮತ್ತು ಇತರೆ ಸಲಹೆ ಕುರಿತು ತಾವು ಸ್ಪಂದಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಪಾಲಿಕೆ ಆಯುಕ್ತ ಹಾಗೂ ಸ್ಮಾರ್ಟ್‍ಸಿಟಿ ಯೋಜನೆಯ ಎಂ.ಡಿ. ಮಾಯಣ್ಣಗೌಡ, ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ ವಾಸುದೇವ, ಕಾರ್ಯದರ್ಶಿ ವಸಂತ ಹೋಬಲಿದಾರ್, ಜಂಟಿ ಕಾರ್ಯದರ್ಶಿ ವಿಜಯಕುಮಾರ್, ಅಶ್ವಥನಾರಾಯಣ, ಸಂಯೋಜಕ ಸಂಘದ ಪದಾಧಿಕಾರಿಗಳು, ಕೈಗಾರಿಕೋದ್ಯಮಿಗಳು ಹಾಜರಿದ್ದರು.