ಕೊರಟಗೆರೆ: ಆರೋಗ್ಯ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಬಡಕುಟುಂಬಗಳಿಗೆ ಅನುಕೂಲವಾಗಲೆಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೊರಟಗೆರೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ ಸಿಇಓ ಪ್ರಭು ತಿಳಿಸಿದರು.
ತಾ.ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಮೊದಲ ಬಾರಿಗೆ ತುಮಕೂರಿನಲ್ಲಿ ಜಿಲ್ಲಾದ್ಯಂತ ಬೃಹತ್ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದೇವೆ, ಜಿಲ್ಲೆಯಲ್ಲಿ ಒಟ್ಟು 700ಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಘಟಕವಿದೆ, 30ವರ್ಷ ಮೇಲ್ಪಟ್ಟ ನಾಗರೀಕರ ಪಟ್ಟಿಯನ್ನು ಸಿದ್ಧಂತೆ ಮಾಡಿಕೊಂಡು ಮೊದಲ ಹಂತದಲ್ಲಿ ಆರೋಗ್ಯ ತಪಾಸಣೆಯನ್ನು ನಡೆಸಿದ್ದೇವೆ. ಜಿಲ್ಲೆಯಲ್ಲಿ 4ಲಕ್ಷ 25ಸಾವಿರ ಕುಟುಂಬಗಳಿವೆ ಮಾಹಿತಿ ಇದೆ, ಎರಡನೇ ಹಂತದ ತಪಾಸಣೆಯಲ್ಲಿ 10 ವಿಧದ ಖಾಯಿಲೆಗಳಿಗೆ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗುವುದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 30ವರ್ಷ ಮೇಲ್ಟಟ್ಟವರಿಗೆ ಚಿಕಿತ್ಸೆ ಆರಂಭಿಸಲಾಯಿತು, ಈ ಆರೋಗ್ಯ ಕೇಂದ್ರಗಳಲ್ಲಿ 2 ರಿಂದ 3 ಚಿಕಿತ್ಸಾ ಉಪಕೇಂದ್ರಗಳಿವೆ ಎಂದರು.
4 ರಿಂದ 5 ತಂಡಗಳನ್ನು ತಯಾರು ಮಾಡಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 3 ತಿಂಗಳುಗಳ ಕಾಲ ಸಮಗ್ರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ, ಆರೋಗ್ಯ ತಪಾಸಣೆಯಲ್ಲಿ ಲೋಪದೋಷಗಳು ಕಂಡು ಬರದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಿ.ಪಿ ಮತ್ತು ಶುಗರ್ ಖಾಯಿಲೆಗೆ ಒಳಪಟ್ಟವರಿಗೆ ಮುಂದಿನ ತಿಂಗಳಿಂದ ಮನೆ ಬಾಗಿಲೆಗೆ ಹೋಗಿ ಚಿಕಿತ್ಸೆ ನೀಡಲಾಗುತ್ತದೆ, ಈ ಕಾಯಿಲೆಯ ಬಗ್ಗೆ ಗಮನಿಸದೆ ಹೋದರೆ ಮುಂದೆ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಸಾಂಕೇತಿಕವಾಗಿ 20 ತಂಡಗಳು ತಪಾಸಣಾ ನಡೆಸಲು ತಂಡವನ್ನು ಆಯ್ಕೆ ಮಾಡಿದ್ದೇವೆ,
ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಧುಮೇಹ, ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್, ಕಣ್ಣಿನ ಪರೀಕ್ಷೆ, ಚರ್ಮ ರೋಗದ ಕಾಯಿಲೆ, ರಕ್ತಹೀನತೆ ಪರೀಕ್ಷೆ, ಕ್ಷಯ ರೋಗ ತಪಾಸಣೆ ಇನ್ನೂ ಮಾರಕ ಕಾಯಿಲೆಗಳಿಗೆ ತಪಾಸಣೆ ನಡೆಸಲು ಸಂಬಂಧಿಸಿದ ವೈದ್ಯರು ಆಗಮಿಸಲಿದ್ದು ಹೆಚ್ಚುವರಿ ಚಿಕಿತ್ಸೆಗೆ ಆಯ್ಕೆಯಾದ ರೋಗಿಗಳನ್ನು ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಬಿಪಿಎಲ್ ಕಾರ್ಡ್‍ದಾರರಿಗೆ 5ಲಕ್ಷ ಮತ್ತು ಎಪಿಎಲ್ ಕಾರ್ಡ್‍ದಾರರಾರಿಗೆ 1.5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪ್ರತಿ ವರ್ಷ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ, ಸಹಕಾರ ಸಚಿವ ಕೆ.ಎನ್ ರಾಜಣ್ಣ ಅತಿಥಿಗಳಾಗಿ ಆಗಮಿಸಲಿದ್ದು ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಪಂ ಸಿಇಒ ಜೆ.ಪ್ರಭು ಭಾಗವಹಿಸುವರು ಎಂದರು.