ಖೋ ಖೋಗೆ ಭಾರತವೇ ವಿಶ್ವ ಚಾಂಪಿಯನ್‌

Kannada Nadu
ಖೋ ಖೋಗೆ ಭಾರತವೇ ವಿಶ್ವ ಚಾಂಪಿಯನ್‌

ಬೆಂಗಳೂರು; ಮೊದಲ ಖೋ ಖೋ ವಿಶ್ವಕಪ್‌ನಲ್ಲಿ ಭಾರತಕ್ಕೆ ಭಾನುವಾರ ಡಬಲ್ ಖುಷಿ ಸಿಕ್ಕಿದೆ. ಮೊದಲು ಮಹಿಳಾ ತಂಡ ವಿಶ್ವಕಪ್ ಫೈನಲ್‌ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿದ್ದು, ಬಳಿಕ ಭಾರತ ಪುರುಷರ ತಂಡ ಕೂಡ ಫೈನಲ್‌ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿದೆ. ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಖೋ ಖೋ ಫೈನಲ್ ಪಂದ್ಯಗಳು ನಡೆದವು. ಮೊದಲು ನಡೆದ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನೇಪಾಳ ವಿರುದ್ಧ 78-40ರ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.

ಜನವರಿ 13 ರಿಂದ 19ರವರೆಗೆ ಖೋ ಖೋ ವಿಶ್ವಕಪ್ ಪಂದ್ಯಾವಳಿ ನಡೆಯಿತು. ಇದೇ ಮೊದಲ ಬಾರಿಗೆ ನಡೆದ ಖೋ ಖೋ ವಿಶ್ವಕಪ್ ಭರ್ಜರಿ ಯಶಸ್ಸು ಕಂಡಿದೆ. ಪಂದ್ಯಾವಳಿಯಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ 39 ತಂಡಗಳು ಭಾಗವಹಿಸಿದ್ದವು. ಪುರುಷರ ಪಂದ್ಯಾವಳಿಯಲ್ಲಿ 20 ತಂಡಗಳು ಭಾಗವಹಿಸಿದ್ದು ನಾಲ್ಕು ಗುಂಪುಗಳಾಗಿ ಮಾಡಲಾಗಿತ್ತು. ಮಹಿಳಾ ವಿಭಾಗದಲ್ಲಿ 19 ತಂಡಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿತ್ತು.

ಪಂದ್ಯಾವಳಿಯಲ್ಲಿ ಪುರುಷ ತಂಡದ ಪ್ರಾಬಲ್ಯ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ತಂಡವು ನೇಪಾಳವನ್ನು 54-36 ಅಂತರದಲ್ಲಿ ಸೋಲಿಸಿ ಭರ್ಜರಿ ಗೆಲುವು ಸಾಧಿಸಿತು. ನಾಯಕ ಪ್ರತೀಕ್ ವೈಕರ್ ಮತ್ತು ರಾಮ್‌ಜಿ ಕಶ್ಯಪ್ ಅವರ ಡೈವ್‌ಗಳಿಂದ ಭಾರತ ಮೊದಲ ಸರದಿಯಲ್ಲಿ 26-0 ಅಂಕ ಗಳಿಸುವ ಮೂಲಕ ಉತ್ತಮ ಆರಂಬ ಪಡೆಯಿತು. ಆದಿತ್ಯ ಗನ್ಪುಲೆ ಭಾರತ ಮುನ್ನಡೆ ಪಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು, ಬಳಿಕ ವೈಕರ್‌ಗೆ ಬೆಂಬಲ ನೀಡಿದರು. ನೇಪಾಳ ಚೇತರಿಸಿಕೊಳ್ಳಲು ಪ್ರಯತ್ನಿಸಿದರೂ, ಸಚಿನ್ ಭಾರ್ಗೊ ಮತ್ತು ಇತರರ ಸಂಘಟಿತ ಪ್ರಯತ್ನದಿಂದ ಭಾರತದ ಗೆಲುವು ಖಚಿತವಾಯಿತು. ಭಾರತ ಗುಂಪು ಹಂತಗಳಲ್ಲಿ ಬ್ರೆಜಿಲ್, ಪೆರು, ಭೂತಾನ್ ಮತ್ತು ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿದರೆ, ಬಳಿಕ ಸೆಮಿಫೈನಲ್‌ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು.

ಮಹಿಳಾ ತಂಡದ ಭರ್ಜರಿ ಆಟ
ಭಾರತ ಮಹಿಳಾ ತಂಡ ಫೈನಲ್‌ನಲ್ಲಿ ನೇಪಾಳದ ವಿರುದ್ಧ 78-40 ರ ಅಂತರದ ಗೆಲುವು ಸಾಧಿಸಿತು. ನಾಯಕಿ ಪ್ರಿಯಾಂಕಾ ಇಂಗ್ಲೆ ಮುನ್ನಡೆ ಸಾಧಿಸಿದರು, ಮೊದಲ ಸರದಿಯಲ್ಲಿ ಹಲವು ಟಚ್‌ ಪಾಯಿಂಟ್‌ಗಳನ್ನು ಗಳಿಸಿದರು. ಚೈತ್ರ ಬಿ ಕೂಡ ಭಾರತ ಮುನ್ನಡೆ ಪಡೆದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದರು. ಗುಂಪು ಹಂತದಲ್ಲಿ ಭಾರತ ಮಹಿಳಾ ತಂಡವು ದಕ್ಷಿಣ ಕೊರಿಯಾ, ಇರಾನ್ ಮತ್ತು ಮಲೇಷ್ಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು, ನಾಕೌಟ್ ಸುತ್ತುಗಳಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿತು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";