ಬಿಜೆಪಿ ಸರ್ಕಾರದ ಕಾಯ್ದೆಗಳನ್ನು ರದ್ದು ಮಾಡುವ ಸರ್ಕಾರಕ್ಕೆ ವಿದ್ಯುತ್ ದರ ಕಡಿಮೆ ಮಾಡಲು ಸಾಧ್ಯವಿಲ್ಲವೇ??
* ರಾಕೇಶ್.ವಿ.
ಬಳ್ಳಾರಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರ ಏರಿಕೆಯಾಗಿ ಜನಸಾಮಾನ್ಯರು ಇದೀಗ ಕರೆಂಟ್ ಬಿಲ್ ಷಾಕ್‌ಗೆ ಒಳಗಾಗಿದ್ದಾರೆ.
ಹೌದು, ಕೇವಲ 200 ರಿಂದ 300 ರೂಗಳಷ್ಟು ಬರುತ್ತಿದ್ದ ವಿದ್ಯುತ್ ಬಿಲ್ ಜೂನ್ ತಿಂಗಳಲ್ಲಿ ಸುಮಾರು 1500 ರಿಂದ 2000ವರೆಗೆ ಬಂದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ನಮ್ಮ ಬಳಕೆ ಕಡಿಮೆ ನಮ್ಮ ದುಡಿಮೆ ಕಡಿಮೆ ಅಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ದರ ಏರಿಕೆ ಆಗಿದೆ ಎಂಬ ನೆಪವೊಡ್ಡಿ ಹೆಚ್ಚೆಚ್ಚು ವಿದ್ಯುತ್ ಬಿಲ್‌ಅನ್ನು ನೀಡಿದರೆ ಹೇಗೆ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.
ರಾಜದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾಗಿದ್ದು, ಚುನಾವಣೆಗೂ ಮುಂಚೆ ನೀಡಿದ್ದ ಗ್ಯಾರೆಂಟಿಗಳನ್ನು ಜಾರಿಗೊಳಿಸುವ ಪ್ರಕ್ರಿಯೆಯು ನಡೆದಿದೆ. ಚುನಾವಣೆಗೂ ಮುನ್ನ ವಿದ್ಯುತ್ ನಿನಗೂ ಫ್ರೀ, ನನಗೂ ಫ್ರೀ ಎಂದೆಲ್ಲಾ ಬೊಬ್ಬೆ ಹೊಡೆದಿದ್ದ ಹಾಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಸಚಿವರ ತಂಡ ಇದೀಗ ಒಂದೊಂದಕ್ಕೆ ಕೊಕ್ಕೆ ಇಡುತ್ತಾ ಬಂದಿದೆ.
ಅದರಲ್ಲಿ ಪ್ರಮುಖವಾಗಿ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ಗಳ ವಿದ್ಯುತ್ ಫ್ರೀ ಎಂದು ಹೇಳಿದ್ದ ಮುಖ್ಯಮಂತ್ರಿಗಳು ಇದೀಗ ಕೆಲವೊಂದು ಷರತ್ತುಗಳನ್ನು ಹೊರಡಿಸಿದ್ದಾರೆ. ಸರಾಸರಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ, ಅದಕ್ಕೆ ಪೂರ್ತಿ ವಿದ್ಯುತ್ ಬಿಲ್ ಕಟ್ಟಬೇಕು. ಒಂದು ಕಟ್ಟದೇ ಹೋದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇನ್ನೂ ಯೋಜನೆ ಜಾರಿ ಆಗುವುದು ಆಗಸ್ಟ್ ತಿಂಗಳಿಂದ ಎಂದು ಹೇಳಲಾಗಿದ್ದು, ಈಗಾಗಲೇ ವಿದ್ಯುತ್ ಬಿಲ್ ದರ ಏರಿಕೆ ಮಾಡಲಾಗಿದೆ. ಎಲ್ಲಾರು ವಿದ್ಯುತ್ ಬಿಲ್ ನೋಡಿ ಉಚಿತ ವಿದ್ಯುತ್ ಯೋಜನೆಯ ಖುಷಿಗಿಂತ ತಮಗೆ ಬಂದಿರುವ ವಿದ್ವುತ್ ಬಿಲ್ ನೋಡಿ ಆಘಾತಕ್ಕೆ ಒಳಗಾಗುತ್ತಿದ್ದಾರೆ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳಲು ಹೊರಟಿದೆ ಎಂದು ಕಿಡಿ ಕಾರುತ್ತಿದ್ದಾರೆ.
ವಿದ್ಯುತ್ ಬಿಲ್ ಏರಿಕೆ ಬಗ್ಗೆ ಮಾತನಾಡುವ ಸರ್ಕಾರದವರು, ಇದು ನಮ್ಮ ಸರ್ಕಾರದಲ್ಲಿ ಏರಿಕೆ ಮಾಡಿರುವುದಲ್ಲ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಚುನಾವಣೆಗೂ ಮುನ್ನವೇ ಆದೇಶ ಹೊರಡಿಸಲಾಗಿತ್ತು. ಆದರೆ ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ಅದನ್ನು ಜಾರಿ ಮಾಡಿರಲಿಲ್ಲ. ಈಗ ಜಾರಿಯಾಗಿದೆ ಎಂದು ಹೇಳಿಕೊಂಡು ಜಾರಿಕೊಳ್ಳುತ್ತಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿದ್ದ ಕೆಲವು ಪಠ್ಯಗಳನ್ನು ತೆಗೆದು ಹಾಕಲು ಈಗಿನ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ಹಿಂದೆ ಜಾರಿಯಾಗಿದ್ದ ಕೆಲ ಯೋಜನೆಗಳನ್ನು ತಡೆಹಿಡಿಯಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದರು. ಹೀಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾದ ಕೆಲಸ ಕಾರ್ಯಗಳನ್ನು, ಆದೇಶಗಳನ್ನು, ಕಾಯ್ದೆಗಳನ್ನು ತಡೆ ಹಿಡಿಯಲು ಇರುವ ಅಧಿಕಾರ ಈಗ ವಿದ್ಯುತ್ ಬಿಲ್ ಹೆಚ್ಚಳ ಮಾಡಿದ್ದನ್ನು ತಡೆಯಲು ಸಾಧ್ಯವಿಲ್ಲವೇ ಎಂಬುದು ಜನರ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಸರ್ಕಾರದ ಘೋಷಣೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಎಂದು ಬಳಕೆ ಮಾಡುವಾಗ ಎಷ್ಟು ಯೂನಿಟ್‌ಗಳ ವಿದ್ಯುತ್ ಬಳಕೆ ಮಾಡಲಾಗಿದೆ ಎಂಬುದು ಸಾಮಾನ್ಯ ಜನರಿಗೆ ಅರ್ಥವಾಗದು. ಹೀಗಿದ್ದಾಗ ವಿದ್ಯುತ್ ಬಳಕೆಗೆ ನೀಡುವ ಬಿಲ್‌ನಲ್ಲಿ 200 ಯೂನಿಟ್‌ಗೂ ಹೆಚ್ಚು ಬಳಕೆ ಮಾಡಿದ್ದೀರಿ ಎಂಬ ನೆಪ ಹೇಳಿ ಹೆಚ್ಚಿನ ಬಿಲ್ ನೀಡಿದರೆ ಅದಕ್ಕೆ ಜವಾಬ್ದಾರಿ, ಹೊಣೆ ಯಾರು ಎಂಬ ಕಳವಳ ಸಾರ್ವಜನಿಕರಲ್ಲಿದೆ.
ಈ ಹಿಂದೆ ಇದ್ದಂತಹ ಸರ್ಕಾರ ಮಾಡಿದ ಕೆಲಸದಿಂದ ಇಂದು ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬರುವ ಮುಂಚೆನೇ ವಿದ್ಯುತ್ ದರ ಏರಿಕೆ ಕಂಡಿದೆ. ಈ ಬಗ್ಗೆ ಸರ್ಕಾರವು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದೆ. ಶೀಘ್ರದಲ್ಲಿಯೇ ವಿದ್ಯುತ್ ದರ ಏರಿಕೆಯ ಸಮಸ್ಯೆ ಪರಿಹಾರ ಮಾಡುವಲ್ಲಿ ಸೂಕ್ತ ಕ್ರಮ ಜರುಗಿಸಲಿದೆ.
ವೆಂಕಟೇಶ್ ಹೆಗಡೆ, ಕೆಪಿಸಿಸಿ ಮಾಧ್ಯಮ ವಕ್ತಾರರು
ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ ಮುಂದೆ ಕೆಇಆರ್‌ಸಿಯ ಪ್ರಸ್ತಾಪ ಇದ್ದರೂ ಅದನ್ನು ಸರ್ಕಾರ ಒಪ್ಪಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ನಂತರವೇ ಇದು ಜಾರಿ ಆಗಿದೆ. ಅದನ್ನು ಸಿದ್ದರಾಮಯ್ಯನವರು ತಡೆ ಹಿಡಿಯಬೇಕಿತ್ತು. 200ಯೂನಿಟ್ ಫ್ರೀ ಅಂತಾ ಹೇಳಿ ಈಗ ಷರತ್ತುಗಳನ್ನು ವಿಧಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ.
ಮುರಹರಗೌಡ, ಬಿಜೆಪಿ ಬಳ್ಳಾರಿ ಜಿಲ್ಲಾಧ್ಯಕ್ಷರು
ವಿದ್ಯುತ್ ದರ ಪರಿಷ್ಕರಣೆ ಆದೇಶ ಏಪ್ರಿಲ್ ನಿಂದ ಪೂರ್ವನ್ವಯವಾಗುವುದರಿಂದ ಬಿಲ್ ನಲ್ಲಿ ಏಪ್ರಿಲ್ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ. ಹಾಗೆಯೇ ಕೆಇಆರ್ ಸಿ ಆದೇಶದ ಪ್ರಕಾರ ಎರಡು ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕ ಸಂಗ್ರಹಿಸಲಾಗುತ್ತಿದೆ. ಗ್ರಾಹಕರು ಬಳಸುವ ಮೊದಲ 100 ಯೂನಿಟ್ ವಿದ್ಯುತ್ ಗೆ ಪ್ರತಿ ಯೂನಿಟ್ ದರ 4.75 ರೂ ವಿಧಿಸಲಾಗಿದೆ. 100 ಯೂನಿಟ್ ಮೀರಿದರೆ ಬಳಸಿದ ಅಷ್ಟೂ ಯೂನಿಟ್‌ಗೆ ಎರಡನೇ ಶ್ರೇಣಿ ದರ ಪ್ರತಿ ಯೂನಿಟ್ ಗೆ 7 ರೂ. ಅನ್ವಯವಾಗಲಿದೆ ಎಂಬುದು ಕೆಇಆರ್‌ಸಿ ಸ್ಪಷ್ಟನೆಯಾಗಿದೆ
ಕೆಇಆರ್ಸಿ ದರ ಪರಿಷ್ಕರಣೆ ನೀತಿ ಹೇಗೆ :
ಕೆಇಆರ್ ಸಿ ದರ ನಿಯಂತ್ರಣ ಅಧಿಸೂಚನೆ 2006 ರ ಪ್ರಕಾರ ಎಲ್ಲಾ ಎಸ್ಕಾಂಗಳೂ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ಕೆಇಆರ್‌ಸಿ ಮುಂದೆ ಅರ್ಜಿ ಸಲ್ಲಿಸಬೇಕು. ಅರ್ಜಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಎಸ್ಕಾಂಗಳ ಮನವಿಯನ್ನು ಪರಿಗಣಿಸಿ ಕೆಇಆರ್ ಸಿ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ದರ ಪರಿಷ್ಕರಣೆ ಆದೇಶವನ್ನು ನೀಡುತ್ತದೆ. ಇದು ಕೆಇಆರ್ ಸಿ ಯ ಸಾಮಾನ್ಯ ನಡವಳಿಯಾಗಿದ್ದು, ಎಸ್ಕಾಂಗಳು ದರ ಪರಿಷ್ಕಣೆಗೆ ಅರ್ಜಿ ಸಲ್ಲಿಸದಿದ್ದ ಪಕ್ಷದಲ್ಲಿ ಕೆಇಆರ್ ಸಿ ಸ್ವಯಂಪ್ರೇರಿತವಾಗಿ ವಿದ್ಯುತ್ ದರ ಏರಿಕೆ ಆದೇಶ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಈ ವರ್ಷದ ಮಾರ್ಚ್ / ಏಪ್ರಿಲ್ ನಲ್ಲಿ ಜಾರಿಗೆ ಬರಬೇಕಿದ್ದ ದರ ಪರಿಷ್ಕರಣೆ ಆದೇಶವನ್ನು ಮಾರ್ಚ್ 29, 2023ರಂದು ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಕೆಇಆರ್ ಸಿ ತಡೆ ಹಿಡಿದಿತ್ತು, ಚುನಾವಣೆ ಮುಗಿದ ತಕ್ಷಣ, ಮೇ 12ರಂದು ದರ ಪರಿಷ್ಕರಣೆ ಮಾಡಿ ಏಪ್ರಿಲ್ ನಿಂದ ಪೂರ್ವನ್ವಯವಾಗುವಂತೆ ಜಾರಿಗೊಳಿಸಿ ಕೆಇಆರ್ ಸಿ ಆದೇಶ ನೀಡಿತ್ತು.